ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೇರಳದ ವಯನಾಡು ಗುಡ್ಡ ಕುಸಿತದಲ್ಲಿ ಮೃತಪಟ್ಟ ಲೀಲಾವತಿ ಮತ್ತು ಮೊಮ್ಮಗ ನಿಹಾಲ್ ಕುಟುಂಬದ ಸದಸ್ಯರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಾಂತ್ವನ ಹೇಳಿದರು.ತಾಲೂಕಿನ ಕತ್ತರಘಟ್ಟ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಅವರು, ಗುಡ್ಡ ಕುಸಿದು ಮರಣ ಹೊಂದಿದ ಮೃತ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಧೈರ್ಯವಾಗಿರಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ತುಂಬಿದರು.
ಈಗಾಗಲೇ ದುರಂತ ನಡೆದು ಹೋಗಿದೆ. ನಮ್ಮವರ ಮೃತ ದೇಹವನ್ನಾದರು ಕೊಡಸಬೇಕು. ಅವರ ಮುಖವನ್ನಾದರು ನಾವು ನೋಡುತ್ತೇವೆ. ಅವರ ಅಂತ್ಯಕ್ರಿಯೆ ಮಾಡುವ ಅವಕಾಶ ಕಲ್ಪಿಸಿ ಕೊಡಿ ಎಂದು ನಿಖಿಲ್ ಕುಮಾರಸ್ವಾಮಿ ಮುಂದೆ ಕುಟುಂಬಸ್ಥರು ಕಣ್ಣೀರು ಹಾಕಿದರು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾವು ಮುತುವರ್ಜಿ ವಹಿಸುತ್ತೇವೆ ಎಂದು ಭರವಸೆ ನೀಡಿದರು.ಈ ವೇಳೆ ಮಾತನಾಡಿದ ನಿಖಿಲ್, ಪ್ರಾಕೃತಿಕ ವಿಕೋಪಗಳ ಮುಂದೆ ಮಾನವನ ಆಟ ಏನೂ ನಡೆಯುವುದಿಲ್ಲ ಎಂಬುದನ್ನು ನಾವೆಲ್ಲರೂ ಅರಿಯಬೇಕು. ಪುಟ್ಟ ಮಗು ನಿಹಾನ್ ಹಾಗೂ ಕುಟುಂಬದ ಸದಸ್ಯೆ ಲೀಲಾವತಿ ಅವರನ್ನು ಕಳೆದುಕೊಂಡಿರುವ ನಿಮ್ಮ ಕುಟುಂಬದ ವೇದನೆ ನನಗೆ ಅರ್ಥವಾಗುತ್ತದೆ. ಝಾನ್ಸಿ ಹಾಗೂ ದೇವರಾಜು ಮತ್ತು ಅನಿಲ್ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರವಾಗಿ ಗುಣಮುಖರಾಗಿ ವಾಪಸ್ ಬರಲಿ ಎಂದರು.ಕೆಲಸದ ನಿಮಿತ್ತ ವಯನಾಡಿನಲ್ಲಿ ಕಳೆದ 40 ವರ್ಷಗಳಿಂದ ನೆಲೆಸಿ ಶ್ರಮಿಕ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಈ ಘಟನೆಯು ಆಘಾತಕಾರಿಯಾಗಿದೆ. ಕೇಂದ್ರ ಸಚಿವರಾದ ಕುಮಾರಣ್ಣ ಕೇರಳ ಸರ್ಕಾರ, ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದಾರೆ ಎಂದರು.
ಗುಡ್ಡ ಕುಸಿತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಕುಟುಂಬಕ್ಕೆ ತಲುಪಿಸಲು ಶ್ರಮಿಸುತ್ತಿದ್ದಾರೆ. ಗಾಯಾಳುಗಳ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಅಲ್ಲಿನ ಪ್ರತಿ ಕ್ಷಣದ ಘಟನೆಗಳ ವಿವರಗಳನ್ನು ಪಡೆದು ಮೃತದೇಹಗಳನ್ನು ನಿಮಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.ಪ್ರಕೃತಿ ಮುನಿದರೆ ಮಾನವ ಏನು ತಾನೆ ಮಾಡಲು ಸಾಧ್ಯ. ಭಗವಂತ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ನೋವನ್ನು ಭರಿಸುವ ಶಕ್ತಿ ನೀಡಲಿ. ದುರಂತದಲ್ಲಿ ನಿಧನರಾಗಿರುವ ನಿಹಾಲ್ ಹಾಗೂ ಲೀಲಾವತಿಯವರ ಶವಗಳು ಪತ್ತೆಯಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಜಿಲ್ಲಾಧಿಕಾರಿಗಳು ಘಟನೆಯ ಸಂಬಂಧ ಈಗಾಗಲೇ ವಯನಾಡಿನ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರು.
ರಾಜ್ಯ ಸರ್ಕಾರವೂ ಸಂತ್ರಸ್ಥ ಕುಟುಂಬಗಳ ನೆರವಿಗೆ ನಿಂತಿದೆ. ತಾಳ್ಮೆಯಿಂದ ಇದ್ದು ಆಗಬೇಕಾಗಿರುವ ಮುಂದಿನ ಕೆಲಸಗಳನ್ನು ಮಾಡೋಣ. ನಿಮ್ಮೊಂದಿಗೆ ಕ್ಷೇತ್ರದ ಶಾಸಕ ಮಂಜಣ್ಣ, ನಾನು ಹಾಗೂ ಕುಮಾರಣ್ಣ ಸೇರಿದಂತೆ ಎಲ್ಲರೂ ಇರುತ್ತೇವೆ ಎಂದು ಭರವಸೆ ನೀಡಿದರು.ರಾಜ್ಯದಲ್ಲಿಯೂ ಒಂದು ವಾರಗಳ ಕಾಲ ರೆಡ್ ಅಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ. 10ರಿಂದ 12 ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ. ಕೇರಳದಂತೆ ಇಲ್ಲು ಆಗಬಹುದು ಎಂದು ತಜ್ಞರು ಮುನ್ನಚ್ಚರಿಕೆ ನೀಡಿದ್ದಾರೆ. ಪ್ರಾಣಹಾನಿ, ಜಾನುವಾರು ಹಾನಿಯಾಗದಂತೆ ಸರ್ಕಾರ ಎಚ್ಚರವಹಿಸಬೇಕು ಎಂದು ನಿಖಿಲ್ ಸರ್ಕಾರವನ್ನು ಆಗ್ರಹಿಸಿದರು.
ಈ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ಎಚ್.ಟಿ.ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಂ, ಎಂಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಎಚ್.ಕೆ.ಅಶೋಕ್, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಶೀಳನೆರೆ ಮೋಹನ್, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಶಾಸಕರ ಸಹೋದರ ಎಚ್.ಟಿ.ಲೋಕೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.ಕೇರಳ ವಯನಾಡಿನಲ್ಲಿ ಗುಡ್ಡಕುಸಿತದಲ್ಲಿ ಮೃತಪಟ್ಟವರ ಪಾರ್ಥಿವ ಶರೀರ ಕೆ.ಆರ್.ಪೇಟೆಗೆ ರವಾನೆ: ಡೀಸಿ ಡಾ.ಕುಮಾರಮಂಡ್ಯ:ಕೇರಳದ ವಯನಾಡು ಗುಡ್ಡ ಕುಸಿತದಲ್ಲಿ ಮೃತಪಟ್ಟಿದ್ದ ಮಂಡ್ಯ ಮೂಲದ ಅಜ್ಜಿ-ಮೊಮ್ಮಗ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.ಗುಡ್ಡ ಕುಸಿತದಲ್ಲಿ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದವರಾದಅ ಜ್ಜಿ ಲೀಲಾವತಿ (55) ಹಾಗೂ ಮೊಮ್ಮಗ ನಿಹಾಲ್ (2.5) ಮೃತದೇಹದ ಪತ್ತೆ ಹಚ್ಚಿ ಕುಟುಂಬಸ್ಥರಿಂದ ಖಚಿತ ಪಡಿಸಿಕೊಂಡ ನಂತರ ಮೃತದೇಹ ಹಸ್ತಾಂತರ ಕಾರ್ಯ ನಡೆಯುತ್ತಿದೆ. ಮೃತದೇಹ ತರಲು ಆಂಬ್ಯಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ವಯನಾಡಿನಿಂದ ಕೆಆರ್ ಪೇಟೆಗೆ ಆದಷ್ಟು ಬೇಗ ಪಾರ್ಥಿವ ಶರೀರ ರವಾನೆಯಾಗಲಿದೆ ಎಂದು ಹೇಳಿದ್ದಾರೆ.