ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯ ಮಲ್ಮ ಬೆಟ್ಟ ಮತ್ತು ಕೊಡಗಿನಾದ್ಯಂತ ನಿರಂತರವಾಗಿ ನಡೆಯುತ್ತಿರುವ ಪ್ರಾಕೃತಿಕ ದೌರ್ಜನ್ಯವನ್ನು ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಜಿಲ್ಲಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಆಗ್ರಹಿಸಿದರು.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮಲ್ಮ ಬೆಟ್ಟ ಪ್ರಕರಣ ಒಂದು ಉದಾಹರಣೆಯಾಗಿದ್ದು, ಇಂತಹುದೇ ಹಲವಾರು ಅನಧಿಕೃತ ವಾಣಿಜ್ಯ ಚಟುವಟಿಕೆಗಳು ಜಿಲ್ಲೆಯಾದ್ಯಂತ ನಡೆಯುತ್ತಿವೆ. ಭೀಕರ ಭೂ ಕುಸಿತ ಮತ್ತು ಪ್ರಾದೇಶಿಕ ಜಲ ಕ್ಷಾಮದ ಭೀತಿ ಒಡ್ಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕೊಡಗಿನ ಸೂಕ್ಷ್ಮ ಪರಿಸರ ವಲಯದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ, ಕಾನೂನುಬಾಹಿರ ಪರಿಸರ ನಾಶದ ವಿರುದ್ಧ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ದೂರು ಸಲ್ಲಿಸಿದೆ ಎಂದು ಮಾಹಿತಿ ನೀಡಿದರು.
ಹಲವಾರು ವಾಣಿಜ್ಯ ಮತ್ತು ರೆಸಾರ್ಟ್ ಯೋಜನೆಗಳು ಯಾವುದೇ ನಿಯಂತ್ರಣ ಸಂಸ್ಥೆಗಳ ಮೇಲ್ವಿಚಾರಣೆ ಇಲ್ಲದೆ ಕಾನೂನುಬಾಹಿರವಾಗಿ ಗುಡ್ಡಗಳನ್ನು ಸಮತಟ್ಟು ಮಾಡುತ್ತಿವೆ ಮತ್ತು ಅವೈಜ್ಞಾನಿಕವಾಗಿ ಮಣ್ಣು ಅಗೆಯುತ್ತಿವೆ. ಕೊಡಗು ಜಿಲ್ಲೆಯು ಕಾವೇರಿ ನದಿಯ ಪ್ರಮುಖ ಜಲಾನಯನ ಪ್ರದೇಶವಾಗಿದ್ದು, ದಕ್ಷಿಣ ಭಾರತದ ಪ್ರಮುಖ ರಾಜ್ಯಗಳ /ಕೇಂದ್ರಾಡಳಿತ ಪ್ರದೇಶಗಳ ಕುಡಿಯುವ ನೀರು, ಪರಿಸರ ಮತ್ತು ಕೃಷಿಯ ಜೀವನಾಡಿಯಾಗಿದೆ. ಕೊಡಗಿನ ನೈಸರ್ಗಿಕ ಭೂಪ್ರದೇಶ ಮತ್ತು ನೀರಿನ ತೊರೆಗಳ ಅವೈಜ್ಞಾನಿಕ ನಾಶವು ಕಾವೇರಿ ಜಲಾನಯನ ಪ್ರದೇಶಕ್ಕೆ ಹರಿಯುವ ನೀರನ್ನು ಶಾಶ್ವತವಾಗಿ ನಿಲ್ಲಿಸಿ, ರಾಜ್ಯಗಳ ನಡುವೆ ಅಭೂತಪೂರ್ವ ಜಲ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.ಜಿಲ್ಲೆಯಾದ್ಯಂತ ನಿಯಮ ಬಾಹಿರವಾಗಿ ನಡೆಯುತ್ತಿರುವ ಅವೈಜ್ಞಾನಿಕ ಗುಡ್ಡ ಅಗೆತ, ಮಣ್ಣು ಅಗೆತ ಮತ್ತು ವಾಣಿಜ್ಯ ಕಾಮಗಾರಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ತಡೆಯಲು ಮಧ್ಯಂತರ ತಡೆಯಾಜ್ಞೆ ನೀಡಬೇಕು. ಕೊಡಗು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಾದ ಹೊಣೆಗಾರಿಕೆ ವಹಿಸಿ, ಜಿಲ್ಲೆಯಾದ್ಯಂತ ಪರಿಸರ ಅನುಮತಿ ಇಲ್ಲದೆ ನಡೆಯುತ್ತಿರುವ ವಾಣಿಜ್ಯ/ಪ್ರವಾಸೋದ್ಯಮ ಯೋಜನೆಗಳ ಕುರಿತು ಸಮಗ್ರ ಮತ್ತು ಕಾಲಮಿತಿಯ ತನಿಖಾ ವರದಿಯನ್ನು ಸಲ್ಲಿಸುವಂತೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯ ಕಾರ್ಯದರ್ಶಿ ಕುಂಞೀರ ಗಿರೀಶ್ ಭೀಮಯ್ಯ, ಸಂಘಟನಾ ಕಾರ್ಯದರ್ಶಿ ತೀತಿಮಾಡ ಸೋಮಣ್ಣ, ನಿರ್ದೇಶಕ ಅಜ್ಜಮಕ್ಕಡ ವಿನು ಕುಶಾಲಪ್ಪ ಇದ್ದರು.