ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ಹೆಸರಿನಲ್ಲಿ ರೈತರ ಮನೆ ಹಾಳು ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಬಿಡಬೇಕು. ಒಳಿತು ಮಾಡು ಮನುಷ ನೀ ಇರೋದು ಮೂರೇ ದಿವಸ ಅನ್ನೋ ಹಾಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರ್ಕಾರ ಒಂದೂವರೆ ವರುಷ ಮಾತ್ರ ಇರುತ್ತದೆ. ಈ ಯೋಜನೆ ಪ್ರಾರಂಭ ಮಾಡುವಷ್ಟರಲ್ಲಿ ಸರ್ಕಾರ ಹೋಗುತ್ತದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ಹಳ್ಳಿಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ರೈತರ ಚಳವಳಿಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಬಿಜೆಪಿ - ಜೆಡಿಎಸ್ ಮೈತ್ರಿ ಸರ್ಕಾರ ಬಂದಾಗ ಈ ಯೋಜನೆಯನ್ನು ಕೈಬಿಡಲಾಗುವುದು ಹೇಳಿದರು.

ಭೂಸ್ವಾಧೀನಕ್ಕೆ ಶೇ.80ರಷ್ಟು ರೈತರು ಒಪ್ಪಿದ್ದಾರೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಆದರೆ ಇಲ್ಲಿ ವಾಸ್ತವ ಚಿತ್ರಣವೇ ಬೇರೆಯಿದೆ. ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಹಸಿರು ವಲಯವನ್ನು ನೋಡಿಯೇ ಇಲ್ಲ. ವಾರ್ಷಿಕ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ರೈತರಿಗೆ 25 ಕೋಟಿ ರು.ಆದಾಯವಿದೆ. ರೇಷ್ಮೆ ಬೆಳೆಯಿಂದ 35 ಕೋಟಿ ಲಾಭವಿದೆ. ಇಂತಹ ಫಲವತ್ತಾದ ಭೂಮಿಯಲ್ಲಿ ಲೇಔಟ್ ನಿರ್ಮಿಸಿ ರೈತರ ಮನೆಹಾಳು ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದರು.

ಅಲ್ಲಿ ಓಕೆ, ಇಲ್ಲಿ ಸಿಟ್ಟು ಏಕೆ?:

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಅಂಡಮಾನ್ ನಿಕೋಬರ್‌ನಲ್ಲಿ ಚೀನಾ ದಾಳಿ ನಿಲ್ಲಿಸಲು ಸ್ಥಾಪಿಸುತ್ತಿರುವ ಹಡಗು ನಿಲ್ದಾಣ ಜಾಗಕ್ಕೆ ಹೋಗಿ ಯೋಜನೆಯನ್ನು ವಿರೋಧಿಸಿದ್ದಾರೆ. ಲಕ್ಷಾಂತರ ಮರಗಿಡಗಳು ಪ್ರಾಣಿಪಕ್ಷಿಗಳು ನಾಶವಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿ ಹಸಿರು ಉಳಿಸಲು ಹೇಳಿದ್ದಾರೆ. ಅದಕ್ಕೆ ಡಿ.ಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.


ಈ ಭಾಗದ ಹಸಿರನ್ನು ರಾಹುಲ್ ಗಾಂಧಿಯವರೇ ಒಮ್ಮೆ ಬಂದು ನೋಡಲಿ. ಡಿಕೆಶಿ ಅವರು ಕೆಂಪೇಗೌಡರ ಜಯಂತಿಗೆ 16 ಸಾವಿರ ಮರ ನೆಡುತ್ತಾರಂತೆ. ಇಲ್ಲಿರುವ ತೆಂಗು, ಮಾವು, ಸಪೋಟ, ಅಡಿಕೆ ಸೇರಿದಂತೆ ಲಕ್ಷಾಂತರ ಮರಗಳು ಮರಗಳಲ್ಲವೇ. ಅಂಡಮಾನ್ ನಿಕೋಬರ್ ವಿಚಾರದ ಪರವಾಗಿ ಸ್ಟ್ಯಾಂಡ್ ತೆಗೆದುಕೊಳ್ಳುವ ಡಿ.ಕೆ.ಶಿವಕುಮಾರ್ ಬಿಡದಿ ರೈತರ ಮೇಲೆ ಸಿಟ್ಟು ಏಕೆ.ಇದು ಡಬಲ್ ಸ್ಟ್ಯಾಂಡ್ ಅಲ್ಲವೇ ಎಂದು ಪ್ರಶ್ನಿಸಿ ವಾಗ್ದಳಿ ನಡೆಸಿದರು.

ಇದು ಕುಮಾರಸ್ವಾಮಿ ಕೂಸು ಎನ್ನುವ ನೀವು ಅವರ ಅವಧಿಯಲ್ಲೂ ಯೋಜನೆ ಅನುಷ್ಠಾನವಾಗಲಿಲ್ಲ. ಯಡಿಯೂರಪ್ಪ ಸರ್ಕಾರದಲ್ಲಿಯೂ ಆಗಲಿಲ್ಲ. ಈಗೇಕೆ ಮಾಡುತ್ತೀರಾ ಬಿಟ್ಟುಬಿಡಿ. ಬೆಂಗಳೂರಿನಲ್ಲಿರುವ ಹಲವು ಬಡಾವಣೆಗಳಲ್ಲಿ ಇನ್ನೂ ನಿವೇಶನಗಳು ಹಂಚಿಕೆಯಾಗಿಲ್ಲ. ಖಾಲಿ ನಿವೇಶನಗಳಲ್ಲಿ ಮನೆಗಳೇ ಕಟ್ಟಿಲ್ಲ. ಇಲ್ಲೇಕೆ ಅಷ್ಟೊಂದು ಬಲವಂತವಾಗಿ ಟೌನ್ ಮಾಡುತ್ತಿದ್ದೀರಾ. ಗುದ್ದಲಿ ಪೂಜೆ ಮಾಡುವಷ್ಟರಲ್ಲಿ ನಿಮ್ಮ ಸರ್ಕಾರವೇ ಹೋಗುತ್ತದೆ. ಮುಂದೆ ನಮ್ಮ ಸರ್ಕಾರ ಬಂದ ಮೇಲೆ ನಾವು ಈ ಯೋಜನೆ ಮಾಡುವುದಿಲ್ಲ ಎಂದು ಆರ್.ಅಶೋಕ್ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯ ರವಿಕುಮಾರ್, ಸಂಸದ ಡಾ.ಸಿ.ಎನ್.ಮಂಜುನಾಥ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮುರಳೀಧರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಮಾಗಡಿ ಮಂಡಲ ಅಧ್ಯಕ್ಷ ಪ್ರಸಾದ್ ಗೌಡ, ರೈತ ಮುಖಂಡರಾದ ರಾಮಯ್ಯ ಮತ್ತಿತರರು ಇದ್ದರು.

ಕೋಟ್ .....................

ಬಿಡದಿ ಟೌನ್ ಶಿಪ್ ಯೋಜನೆಯಿಂದ ಹಸಿರು ವಲಯ ಮತ್ತು ಹೈನೋದ್ಯಮ ನಾಶವಾಗಲಿದೆ. ಲಕ್ಷಾಂತರ ಹಸುಗಳು ಕಸಾಯಿಖಾನೆಗೆ ಹೊಡೆಯಬೇಕಾ? ಒಕ್ಕಲೆದ್ದವರು ಎಲ್ಲಿ ಹೋಗಬೇಕು? ರೈತರು ತಲೆಮಾರಿನಿಂದ ಕಾಪಾಡಿಕೊಂಡು ಬಂದ ಆಸ್ತಿಯನ್ನು ಹೊರ ರಾಜ್ಯಗಳಿಂದ ಬಂದವರಿಗೆ ಸೈಟು ಮತ್ತು ಜಮೀನು ಕೊಟ್ಟು ಹಣ ಮಾಡಿಕೊಳ್ಳಲು ಯೋಜನೆ ಮಾಡುತ್ತೀರಾ? ಕನಕಪುರದಲ್ಲಿ ಚಿನ್ನದ ಬೆಲೆ ಕೊಡಿಸುತ್ತೇನೆ ಜಮೀನು ಮಾರಬೇಡಿ ಅಂತೀರಾ, ಬಿಡದಿಯಲ್ಲಿ ಬಲವಂತವಾಗಿ ಮಾರಾಟ ಮಾಡಿಸುತ್ತೀದ್ದೀರಿ ಈ ಇಬ್ಬಗೆ ನೀತಿ ಸರಿಯೇ.

- ಆರ್.ಅಶೋಕ್, ವಿಪಕ್ಷ ನಾಯಕರು

17ಕೆಆರ್ ಎಂಎನ್ 4.ಜೆಪಿಜಿ

ವಿಪಕ್ಷ ನಾಯಕ ಆರ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.