ಆಸ್ಪತ್ರೆಗೆ ಬರುವ ಹೊರ ರೋಗಿಗಳ ತಪಾಸಣಾ ಶುಲ್ಕ ₹5 ಇದ್ದು ಬೇರೆ ಸಾರ್ವಜನಿಕ ಆಸ್ಪತ್ರೆಗಳಲ್ಲಿರುವಂತೆ ₹10ಕ್ಕೆ ಹೆಚ್ಚಿಸಲು ಸಮಿತಿಯಲ್ಲಿ ತೀರ್ಮಾನಿಸಲಾಯಿತು.

ದೊಡ್ಡಬಳ್ಳಾಪುರ: ಹೃದಯಾಘಾತ ಸೇರಿದಂತೆ ಹಾವು ಹಾಗೂ ನಾಯಿ ಕಡಿತಕ್ಕೆ ಅಗತ್ಯ ಔಷಧಿ ಲಭ್ಯವಿರುವುದಾಗಿ ವೖದ್ಯರು ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು

ಆರೋಗ್ಯ ರಕ್ಷಾ ಸಮಿತಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಒತ್ತಾಯದ ಮೇರೆಗೆ ಶೀಘ್ರದಲ್ಲಿಯೇ ಕಿದ್ವಾಯಿ ಆಸ್ಪತ್ರೆ ಸಹಯೋಗದೊಂದಿಗೆ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಲು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖಾ ಸಚಿವರೊಂದಿಗೆ ಸಮಾಲೋಚಿಸಲಾಗುವುದು ಎಂದರು.

ಆಸ್ಪತ್ರೆಗೆ ಬರುವ ಹೊರ ರೋಗಿಗಳ ತಪಾಸಣಾ ಶುಲ್ಕ ₹5 ಇದ್ದು ಬೇರೆ ಸಾರ್ವಜನಿಕ ಆಸ್ಪತ್ರೆಗಳಲ್ಲಿರುವಂತೆ ₹10ಕ್ಕೆ ಹೆಚ್ಚಿಸಲು ಸಮಿತಿಯಲ್ಲಿ ತೀರ್ಮಾನಿಸಲಾಯಿತು. ಪ್ರತಿನಿತ್ಯ ಆಸ್ಪತ್ರೆಗೆ 400 ಕ್ಕೂ ಹೆಚ್ಚು ರೋಗಿಗಳು ತಪಾಸಣೆಗೆ ಆಗಮಿಸುತಿದ್ದು, ವೈದ್ಯರ ಮೇಲೆ ಒತ್ತಡ ಇದ್ದರೂ ಅಗತ್ಯದಷ್ಟು ಸಿಬ್ಬಂದಿಯಿರುವುದರಿಂದ ಒಳ್ಳೆಯ ಸೇವೆ ದೊರೆಯುತ್ತಿದೆ. ನೂರು ಹಾಸಿಗೆ ಸಾಮರ್ಥ್ಯದ ವ್ಯವಸ್ಥೆಯೊಂದಿಗೆ ತಾಯಿ ಮಕ್ಕಳ ಆಸ್ಪತ್ರೆಯೂ ಕಾರ್ಯನಿರ್ವಹಿಸುತಿದ್ದು ಮೂಲ ಸೌಕರ್ಯಗಳನ್ನು ಹೆಚ್ಚಿಸಲಾಗುವುದು ಎಂದರು.

ಕುಡಿಯುವ ನೀರಿಗೆ ತಕ್ಷಣ ಬೋರ್ವೆಲ್ ಕೊರೆಯುವುಸದರೊಂದಿಗೆ, ಆಸ್ಪತ್ರೆ ತ್ಯಾಜ್ಯ ಹೊರ ಹೋಗುವ ಚರಂಡಿ ಸರಿಪಡಿಸಲು ಸೂಚಿಸಲಾಗಿದೆ. ಅವೈಜ್ಞಾಕವಾಗಿರುವ ಶವಾಗಾರದ ರ್ಯಾಂಪ್ ಸರಿಪಡಿಸಲು ಹಾಗೂ ಆಸ್ಪತ್ರೆ ಆವರಣಕ್ಕೆ ಬರುವ ನಾಯಿಗಳ ನಿಯಂತ್ರಣಕ್ಕೂ ಸೂಚಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಆಸ್ಪತ್ರೆಗೆ ತರಿಸಲಾಗಿರುವ ಹೊಸ ಡಿಜಿಟಲ್ ಎಕ್ಸರೇ ಯಂತ್ರವನ್ನು ಸಚಿವರು ವೀಕ್ಷಿಸಿದರು. ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ರಾಜಣ್ಣ, ತಾಲೂಕು ಅಧ್ಯಕ್ಷ ಜಗನ್ನಾಥ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ವೖದ್ಯರು ಹಾಗೂ ಸಿಬ್ಬಂದಿ ಇದ್ದರು.

ಫೋಟೋ-25ಕೆಡಿಬಿಪಿ4- ಬೆಂ.ಗ್ರಾ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು.