ಕಸ್ತೂರಬಾ ಗೋಶಾಲೆ ಹಾಸನ ಜಿಲ್ಲೆಯ ನೊಂದ ಗೋವುಗಳಿಗೆ ಆಶ್ರಯ ತಾಣವಾಗಿದೆ. ಪ್ರಸ್ತುತ 258 ಗೋವುಗಳಿದ್ದು, ವೈದ್ಯಕೀಯ ತಪಾಸಣೆ, ಆಹಾರ, ಆರೈಕೆ ವ್ಯವಸ್ಥಿತವಾಗಿ ಕೈಗೊಳ್ಳಲಾಗುತ್ತಿದೆ. ಜನರು ಹುಟ್ಟುಹಬ್ಬ, ಮದುವೆ, ಗೃಹಪ್ರವೇಶ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಗೋಸೇವೆ ಮಾಡುವುದು ಸಂತಸಕರ. ಧರ್ಮಾಧಿಕಾರಿಗಳ ಹುಟ್ಟುಹಬ್ಬವನ್ನು ಗೋಸೇವೆ ಮೂಲಕ ಆಚರಿಸುವುದು ನಮ್ಮ ಗೋಶಾಲೆಗೆ ಗೌರವ .

ಕನ್ನಡಪ್ರಭ ವಾರ್ತೆ ಅರಸೀಕೆರೆ

ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ಡಿ.ವಿರೇಂದ್ರ ಹೆಗ್ಗಡೆ ಅವರ ಜನ್ಮದಿನದ ಅಂಗವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಘಟಕದ ಸಿಬ್ಬಂದಿ, ಸೇವಾ ಪ್ರತಿನಿಧಿಗಳು ಮತ್ತು ಭಕ್ತಾದಿಗಳ ಸಂಯುಕ್ತಾಶ್ರಯದಲ್ಲಿ ನಗರದ ಹೊರವಲಯದ ಕಸ್ತೂರಬಾ ಗೋಶಾಲೆಯಲ್ಲಿ ಗೋವುಗಳಿಗೆ ಮೇವು ಹಾಗೂ ಆಹಾರ ವಿತರಣೆ ಮಾಡುವ ಮೂಲಕ ವಿಶಿಷ್ಟವಾಗಿ ಆಚರಣೆ ನೆರವೇರಿತು.ಜಿಲ್ಲಾ ನಿರ್ದೇಶಕ ಸುರೇಶ್ ಮೋಯಿಲಿ ಮಾತನಾಡಿ, ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳವು, ಧರ್ಮಾಧಿಕಾರಿ ಹೆಗ್ಗಡೆವರ ಮಾರ್ಗದರ್ಶನದಲ್ಲಿ ಸಮಾಜಮುಖಿ ನೂರಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. 44 ವರ್ಷಗಳಲ್ಲಿ ರಾಜ್ಯದಾದ್ಯಂತ 5 ಲಕ್ಷ 14 ಸಾವಿರ ಸಂಘಗಳು ಸ್ಥಾಪನೆಯಾಗಿ 53 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಅಸ್ತಿತ್ವದ ಆಧಾರವಾಗಿದೆ ಎಂದು ಹೇಳಿದರು.

ಶಿಕ್ಷಣ, ಆರೋಗ್ಯ, ಸ್ವಯಂ ಉದ್ಯೋಗ, ಕೃಷಿ, ಕೆರೆಗಳ ಅಭಿವೃದ್ಧಿ, ಹೈನುಗಾರಿಕೆ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜನಜೀವನ ಪರಿವರ್ತನೆಗೆ ದಾರಿಯಿಟ್ಟಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಗ್ಗಡೆ ಅವರ ಸೇವೆಯನ್ನು ಮಾನ್ಯತೆ ನೀಡಿ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದನ್ನು ನೆನಪಿಸಿದ ಅವರು, ಗೋವುಗಳ ಆರೈಕೆ ಬಗ್ಗೆ ವಿಶೇಷ ಕಾಳಜಿ ಇಡುವ ಧರ್ಮಾಧಿಕಾರಿಗಳು ತಮ್ಮ ರಾಜ್ಯಸಭಾ ನಿಧಿಯಿಂದ 5 ಕೋಟಿ ರು. ಅನುದಾನವನ್ನು ಬೀದರ್ ಜಿಲ್ಲೆಯ ಹೈನುಗಾರಿಕೆ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಇದರಿಂದ ಅಲ್ಲಿ ದಿನಕ್ಕೆ 18 ಸಾವಿರ ಲೀಟರ್ ಹಾಲು ಉತ್ಪಾದನೆ ಇಂದಿಗೆ 1 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಹೈನುಗಾರರು, ಮಹಿಳೆಯರು ಆರ್ಥಿಕವಾಗಿ ಬಲವಾಗುತ್ತಿದ್ದಾರೆ ಎಂದು ತಿಳಿಸಿದರು.

ಅರಸೀಕೆರೆ- ಬಾಣಾವರ ಗೋಶಾಲೆಗಳಲ್ಲಿ ಮೇವು ಆಹಾರ ವಿತರಣೆ, ಹಾಸನ ಶಾಂತಿಗ್ರಾಮ ಆಶ್ರಮದ ಮಕ್ಕಳಿಗೆ ಹಣ್ಣುಹಂಪಲು, ಸಕಲೇಶಪುರದಲ್ಲಿ ಸ್ವಚ್ಛತೆ, ಬೇಲೂರಿನಲ್ಲಿ ಕುಡಿಯುವ ನೀರು ವಿತರಣೆ, ಹಳೆಬೀಡಿನಲ್ಲಿ ದಲಿತರ ಪ್ರದೇಶಗಳಲ್ಲಿ ಶ್ರಮದಾನ ಹೀಗೆ ಜಿಲ್ಲಾದ್ಯಂತ ಮಾನವೀಯ ಸೇವೆಗಳು ನಡೆಯುತ್ತಿವೆ. ಧರ್ಮಾಧಿಕಾರಿಗಳು ಶತಾಯುಷಿಯಾಗಲಿ, ಅವರ ಸೇವೆಯ ಆಶೀರ್ವಾದ ಸಮಾಜಕ್ಕೆ ಸದಾ ಸಿಗಲಿ ಎಂದು ಹಾರೈಸಿದರು.

ಜನ ಜಾಗೃತಿ ವೇದಿಕೆಯ ಗಣೇಶ್ ಮೂರ್ತಿ ಮಾತನಾಡಿ, ಸರ್ವಧರ್ಮ ಜನರ ಪ್ರೀತಿಗೆ ಪಾತ್ರರಾಗಿರುವ ಡಿ.ವೀರೇಂದ್ರ ಹೆಗ್ಗಡೆ ಅವರ ವ್ಯಕ್ತಿತ್ವ ನ್ಯಾಯದೇವತೆಯ ಸ್ಥಾನಕ್ಕೆ ಏರಿಕೆಯಾಗಿದೆ. ಅವರ ಬದುಕು ನಮ್ಮೆಲ್ಲರಿಗೂ ಮಾರ್ಗದರ್ಶಕ ಎಂದು ಶ್ಲಾಘಿಸಿದರು.

ಗೋಶಾಲೆ ವ್ಯವಸ್ಥಾಪಕ ರಾಜು ಮಾತನಾಡಿ, ಕಸ್ತೂರಬಾ ಗೋಶಾಲೆ ಹಾಸನ ಜಿಲ್ಲೆಯ ನೊಂದ ಗೋವುಗಳಿಗೆ ಆಶ್ರಯ ತಾಣವಾಗಿದೆ. ಪ್ರಸ್ತುತ 258 ಗೋವುಗಳಿದ್ದು, ವೈದ್ಯಕೀಯ ತಪಾಸಣೆ, ಆಹಾರ, ಆರೈಕೆ ವ್ಯವಸ್ಥಿತವಾಗಿ ಕೈಗೊಳ್ಳಲಾಗುತ್ತಿದೆ. ಜನರು ಹುಟ್ಟುಹಬ್ಬ, ಮದುವೆ, ಗೃಹಪ್ರವೇಶ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಗೋಸೇವೆ ಮಾಡುವುದು ಸಂತಸಕರ. ಧರ್ಮಾಧಿಕಾರಿಗಳ ಹುಟ್ಟುಹಬ್ಬವನ್ನು ಗೋಸೇವೆ ಮೂಲಕ ಆಚರಿಸುವುದು ನಮ್ಮ ಗೋಶಾಲೆಗೆ ಗೌರವ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಅಕ್ಷತಾ ರೈ, ಮೇಲ್ವಿಚಾರಕರು ನಾರಾಯಣ, ಗೋಪಾಲ, ಜನ ಜಾಗೃತಿ ವೇದಿಕೆಯ ಸದಸ್ಯರು ಮಂಜುನಾಥ್, ವೆಂಕಟೇಶ್ ನಾಯ್ಕ್, ಕೃಷಿ ಮೇಲ್ವಿಚಾರಕ ಗುರುಮೂರ್ತಿ, ಮೇಲ್ವಿಚಾರಕರು ಹರಿಣಾಕ್ಷಿ, ನಿಂಗನಾಯಕ, ಒಕ್ಕೂಟ ಅಧ್ಯಕ್ಷ ಲೋಕೇಶ್, ಸೇವಾ ಪ್ರತಿನಿಧಿಗಳು ಶಿವಗಂಗಾ, ಶ್ವೇತಾ ಪಲ್ಲವಿ ಹಾಗೂ ಅನೇಕರು ಉಪಸ್ಥಿತರಿದ್ದರು.