ಆತಂಕ ಹುಟ್ಟಿಸಿರುವ ನೇಪಾಳದ ಅರಾಜಕತೆ

| Published : Sep 11 2025, 12:03 AM IST / Updated: Sep 11 2025, 12:04 AM IST

ಸಾರಾಂಶ

ನೇಪಾಳದ ಸಾವಿರಾರು ಜನರು ಜಿಲ್ಲೆಯಲ್ಲಿದ್ದಾರೆ. ಜಿಲ್ಲೆಯ ಕೆಲವರು ನೇಪಾಳದಲ್ಲಿದ್ದಾರೆ.

ವಸಂತಕುಮಾರ್ ಕತಗಾಲ

ಕಾರವಾರ: ನೇಪಾಳದಲ್ಲಿ ಅರಾಜಕತೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲೂ ಕಳವಳ ಉಂಟಾಗಿದೆ. ನೇಪಾಳದ ಸಾವಿರಾರು ಜನರು ಜಿಲ್ಲೆಯಲ್ಲಿದ್ದಾರೆ. ಜಿಲ್ಲೆಯ ಕೆಲವರು ನೇಪಾಳದಲ್ಲಿದ್ದಾರೆ. ರಾಜ್ಯದ ಐದು ಅರ್ಚಕ ಕುಟುಂಬಗಳು ಪಶುಪತಿನಾಥ ದೇವಾಲಯದ ಅರ್ಚಕರಾಗಿದ್ದಾರೆ. ಹೀಗಾಗಿ ಕನ್ನಡಿಗರು ಮತ್ತು ನೇಪಾಳಿಗರು ನೇಪಾಳದ ವಿದ್ಯಮಾನದಿಂದ ಆತಂಕಗೊಂಡಿದ್ದಾರೆ.

ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯದಲ್ಲಿ ಕರ್ನಾಟಕದ ಐವರು ಅರ್ಚಕ ಕುಟುಂಬಗಳಿವೆ. ಮಂಗಳವಾರ ದೇವಾಲಯದ ಹೊರಗಡೆಯೂ ಯುವಕರು ದಾಂದಲೆ ನಡೆಸಿದ್ದಾರೆ. ಇದರಿಂದ ಸಹಜವಾಗಿ ಇವರಲ್ಲಿ ಆತಂಕ ಉಂಟಾಗಿತ್ತು. ಆದರೆ ಮಂಗಳವಾರ ರಾತ್ರಿಯೇ ಸೇನಾಪಡೆಗಳು ದೇವಾಲಯದ ಹೊರಭಾಗದಲ್ಲಿ ಬೀಡುಬಿಟ್ಟು ಭದ್ರತೆಯ ಉಸ್ತುವಾರಿ ಹೊತ್ತಿವೆ. ಜೊತೆಗೆ ಇನ್ನಷ್ಟು ಭದ್ರತಾ ಸಿಬ್ಬಂದಿ ಆಗಮಿಸಿ ದೇವಾಲಯಕ್ಕೆ ಭಾರಿ ಭದ್ರತೆ ಒದಗಿಸಿದ್ದಾರೆ. ಇದರಿಂದ ಬುಧವಾರ ಆತಂಕ ದೂರವಾಗಿ ಅರ್ಚಕ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ.

ಇನ್ನು ಭದ್ರತಾ ಸಿಬ್ಬಂದಿ ದೇವಾಲಯಕ್ಕೆ ಯಾರನ್ನೂ ಬಿಡುತ್ತಿಲ್ಲ. ಭಾರತ ಹಾಗೂ ಬೇರೆ ಬೇರೆ ದೇಶಗಳಿಂದ ಆಗಮಿಸಿದ ಭಕ್ತರಿಗೆ ಪಶುಪತಿನಾಥನ ದರ್ಶನ ಸಾಧ್ಯವಾಗದೇ ನಿರಾಶರಾಗಿದ್ದಾರೆ. ಅರ್ಚಕರು ದೈನಂದಿನ ಪೂಜಾ ಸೇವೆ ನೆರವೇರಿಸುತ್ತಿದ್ದಾರೆ.

ನೇಪಾಳದ ಸಾವಿರಾರು ಜನರು ಉತ್ತರ ಕನ್ನಡ ಜಿಲ್ಲೆಯಲ್ಲಿ ದುಡಿಯುತ್ತಿದ್ದಾರೆ. ಹೊಟೇಲ್, ರೆಸಾರ್ಟ್, ಅಪಾರ್ಟ್‌ಮೆಂಟ್‌, ಮಳಿಗೆಗಳಲ್ಲಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹಲವರು ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಹಲವರು ಕುಟುಂಬ ಸಹಿತ ಬಂದಿದ್ದರೆ, ಕೆಲವರು ಪತ್ನಿ, ಮಕ್ಕಳನ್ನು ನೇಪಾಳದಲ್ಲೇ ಬಿಟ್ಟು ಇಲ್ಲಿ ಬಂದು ಕೆಲಸ ಮಾಡುತ್ತಿದ್ದಾರೆ.

ವಾಟ್ಸ್‌ಆ್ಯಪ್‌ ಕಾಲ್ ಮೂಲಕ ಜಿಲ್ಲೆಯಲ್ಲಿರುವ ನೇಪಾಳಿಗರು ಹಾಗೂ ನೇಪಾಳದಲ್ಲಿರುವ ನಮ್ಮ ರಾಜ್ಯದ ಕುಟುಂಬಗಳು ತಮ್ಮ ಕುಟುಂಬ ಹಾಗೂ ಆಪ್ತರೊಂದಿಗೆ ಸಂವಹನ ನಡೆಸುತ್ತಿದ್ದರು. ಆದರೆ 2-3 ದಿನಗಳಿಂದ ಉಂಟಾದ ಗಲಭೆಯಲ್ಲಿ ಹಲವು ಮೊಬೈಲ್ ಟವರ್ ಗಳು ಉರುಳಿದ್ದು ಸಂಪರ್ಕಕ್ಕೆ ಸಾಧ್ಯವಾಗದೇ ಇರುವುದು ತೀವ್ರ ಆತಂಕಕ್ಕೂ ಕಾರಣವಾಗಿದೆ.

ಕಾರವಾರದಲ್ಲಿರುವ ನೇಪಾಳಿ ಜನತೆ ತಮ್ಮ ದೇಶದಲ್ಲಿ ನಡೆಯುತ್ತಿರುವ ಗಲಭೆಯ ಬಗ್ಗೆ ಆತಂಕಗೊಂಡು ತಮ್ಮ ತಮ್ಮಲ್ಲೇ ಚರ್ಚಿಸುತ್ತಿರುವುದು ಕಂಡುಬಂದಿತು. ಜೊತೆಗೆ ತಮ್ಮ ಕುಟುಂಬಗಳೊಂದಿಗೆ ಸಂಪರ್ಕ ಸಾಧ್ಯವಾಗದೇ ಇರುವುದು ತೀವ್ರ ಚಿಂತಿತರನ್ನಾಗಿ ಮಾಡಿದೆ.

ಈ ನಡುವೆ ರಾಜ್ಯದಿಂದ ನೇಪಾಳಕ್ಕೆ ಪ್ರವಾಸಹೋದ ಕೆಲವರು ಹೊರಗಡೆ ಹೋಗಲಾರದೇ ಪರದಾಡುವಂತಾಗಿದೆ.

ನೇಪಾಳದಲ್ಲಿ ಗಲಭೆ ನಡೆಯುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ನಮ್ಮ ತಂದೆ- ತಾಯಿ ನೇಪಾಳದಲ್ಲಿದ್ದಾರೆ. ಅವರೊಂದಿಗೆ ಸಂಪರ್ಕ ಸಿಗದೇ ಇನ್ನಷ್ಟು ಚಿಂತೆ ಉಂಟಾಗಿದೆ. ನೇಪಾಳದಲ್ಲಿ ಆದಷ್ಟು ಬೇಗ ಶಾಂತಿ ನೆಲೆಸುವಂತಾಗಲಿ ಎನ್ನುತ್ತಾರೆ ಕಾರವಾರದಲ್ಲಿರುವ ನೇಪಾಳಿ ಮೂಲದ ನಿವಾಸಿ ತಿಲಕ್ ಖಡ್ಕಾ.