ಸಾರಾಂಶ
ಕೊಪ್ಪಳ:
ವಿದ್ಯಾರ್ಥಿಗಳು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಸಮಾಜಮುಖಿ ಹೊಣೆಗಾರಿಕೆ ಅರಿಯಲು ಅವಕಾಶ ದೊರೆಯುತ್ತದೆ. ಸಮಾಜದ ನೈಜ ಸ್ಥಿತಿಗತಿ ಅರಿತುಕೊಳ್ಳಲು ಸಮೀಕ್ಷೆಗಳು ಅತ್ಯಂತ ಅಗತ್ಯವಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು.ಕೊಪ್ಪಳ ವಿಶ್ವವಿದ್ಯಾಲಯ ಮತ್ತು ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಆಶ್ರಯದಲ್ಲಿ ಆಯೋಜಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾಗೃತಿ ಅಭಿಯಾನ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮೀಕ್ಷೆಗಳು ಕೇವಲ ಅಂಕಿ-ಅಂಶಗಳ ಸಂಗ್ರಹವಲ್ಲ, ಅವು ಸಮಾಜದ ದಿಕ್ಕು ತೋರಿಸುವ ದಾರಿದೀಪ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಸಮೀಕ್ಷೆ ಮಾರ್ಗದರ್ಶಿಯಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಎಲ್ಲ ವಿದ್ಯಾರ್ಥಿಗಳು ಮನೆ-ಮನೆಗೆ ತಲುಪಿ ಮಾಹಿತಿ ನೀಡುವಂತೆ ಮನವೊಲಿಸುವ ಕೆಲಸವನ್ನು ಪ್ರತಿನಿಧಿಗಳಾಗಿ ಸಮೀಕ್ಷೆ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.ವಿವಿ ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ ಮಾತನಾಡಿ, ಸಮಾಜ ಮತ್ತು ಶಿಕ್ಷಣ ಪರಸ್ಪರ ಪೂರಕ. ಅಂಕಿ-ಅಂಶಗಳ ಆಧಾರದ ಮೇಲೆ ಗ್ರಾಮೀಣಾಭಿವೃದ್ಧಿಗೆ ವೈಜ್ಞಾನಿಕ ದೃಷ್ಟಿಕೋನ ದೊರೆಯುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪ್ರೊ. ವೈ.ಬಿ. ಅಂಗಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಶಿಕ್ಷಣ, ಆರೋಗ್ಯ, ಜೀವನಮಟ್ಟ, ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಹಿನ್ನಲೆ ಹಾಗೂ ಸರ್ಕಾರಿ ಯೋಜನೆಗಳ ಅನುಷ್ಠಾನವನ್ನು ಸಮೀಕ್ಷೆಗಳ ಮೂಲಕ ಅಧ್ಯಯನ ಮಾಡಿದಾಗ, ಯೋಜನೆಗಳ ಪರಿಣಾಮಕಾರಿತ್ವ ಹೆಚ್ಚಲು ನೆರವಾಗುತ್ತದೆ. ಇಂತಹ ಸಮೀಕ್ಷೆಗಳು ಸಮಾಜದ ಬದಲಾವಣೆಗೆ ದಾರಿ ಮಾಡಿಕೊಡುತ್ತವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))