ಕನ್ನಡಪ್ರಭ ವಾರ್ತೆ ಬಸವಕಲ್ಯಾಣ:
ಮಹಾತ್ಮ ಬಸವಣ್ಣನವರ ಆಚಾರ ವಿಚಾರವನ್ನು ಇಡೀ ರಾಜ್ಯ ಒಪ್ಪಿದೆ. ಅದಕ್ಕಾಗಿಯೇ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರ್ಕಾರ ಘೋಷಣೆ ಮಾಡಿದೆ. ನೂತನ ಅನುಭವ ಮಂಟಪ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.ಉತ್ತರ ಕರ್ನಾಟಕ ಜಿಲ್ಲೆಗಳ ಪ್ರವಾಸ ಆರಂಭಿಸಿರುವ ಸಿಎಂ ಸೋಮವಾರ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಾಣ ಮಾಡುತ್ತಿರುವ ನೂತನ ಅನುಭವ ಮಂಟಪಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿ, ಮುಖ್ಯಮಂತ್ರಿಯಾದ ಬಳಿಕ ನನ್ನ ಪ್ರವಾಸವನ್ನು ಅನುಭವ ಮಂಟಪದಿಂದ ಆರಂಭಿಸುವ ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇನೆ ಎಂದರು.
ಬಸವಣ್ಣನವರ ವಿಚಾರಧಾರೆಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿದ್ದು, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತಿವೆ. ಇದನ್ನೆಲ್ಲ ವಿಶ್ವಕ್ಕೆ ಪರಿಚಯಿಸಲು ಅನುಭವ ಮಂಟಪ ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗ ಮುಗಿಸಲು ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಸವಣ್ಣನ ಚಿಂತನೆಗಳನ್ನು ಅಳವಡಿಸಿಕೊಳ್ಳುವಂತಾಗಲು ಬಸವಾದಿ ಶರಣರ ತತ್ವಗಳ ಪ್ರಚಾರಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ವಿಶ್ವಮಾನ್ಯವಾಗುವಂಥ ಆಧ್ಯಾತ್ಮಿಕ ಕೇಂದ್ರ ಇದಾಗಲಿದೆ ಎಂದರು.ಸುಮಾರು 10 ಎಕರೆ ಪ್ರದೇಶದಲ್ಲಿ 6 ಅಂತಸ್ತಿನ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಸರ್ಕಾರದಿಂದ ಯಾವುದೇ ರೀತಿಯಲ್ಲಿಯೂ ಅನುದಾನದ ಕೊರತೆಯಾಗದಂತೆ ಕ್ರಮವಹಿಸಿ ಆದಷ್ಟು ಶೀಘ್ರದಲ್ಲಿ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.ದೇವಸ್ಥಾನ, ದರ್ಗಾಗಳಿಗೂ ಭೇಟಿ:
ಸಿಎಂ ಡಿ.ಕೆ.ಶಿವಕುಮಾರ್ ಅವರು, ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನ, ದರ್ಗಾ, ಅನುಭವ ಮಂಟಪ ಸೇರಿದಂತೆ ನಗರದ ಬಹುತೇಕ ವೃತ್ತಗಳಿಗೆ ತೆರಳಿ ಅಲ್ಲಿನ ಮಹಾತ್ಮರ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು. ಆ ಬಳಿಕ 108 ಅಡಿ ಎತ್ತರದ ಬಸವೇಶ್ವರ ಪ್ರತಿಮೆ ಆವರಣದಲ್ಲಿ ಪೊಲೀಸ್ ಇಲಾಖೆಯ ಅಕ್ಕಪಡೆ ಆಯೋಜಿಸಿದ್ದ ಮಹಿಳಾ ಶಕ್ತಿ ಪ್ರದರ್ಶನವನ್ನು ಸಿಎಂ ಮತ್ತು ಡಿಸಿಎಂ ವೀಕ್ಷಿಸಿದರು.