ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಮೂರು ದಿನಗಳ ಸಭೆಗೆ ಜು.12ರಂದು ತೆರೆ ಬೀಳಲಿದ್ದು, ಬೈಠಕ್‌ನ ಎರಡನೇ ದಿನವಾದ ಶನಿವಾರ ಸಂಘಟನೆಯ ತಳಮಟ್ಟದ ವಿಸ್ತರಣೆ, ಶಾಖೆಗಳ ಬಲವರ್ಧನೆ, ಕಾರ್ಯಕರ್ತರ ತರಬೇತಿ ಹಾಗೂ ಶತಮಾನೋತ್ಸವ ವರ್ಷದ ಕಾರ್ಯಯೋಜನೆ ಕುರಿತು ಸುದೀರ್ಘ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.ದೇಶದ ವಿವಿಧ ಕ್ಷೇತ್ರಗಳು ಮತ್ತು ಪ್ರಾಂತಗಳಿಂದ ಆಗಮಿಸಿರುವ ಪ್ರಾಂತ ಪ್ರಚಾರಕರು ತಮ್ಮ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಲ್ಲಿ ನಡೆದ ಸಂಘಟನಾ ಚಟುವಟಿಕೆಗಳು, ಶಾಖೆಗಳ ವಿಸ್ತರಣೆ ಹಾಗೂ ಸೇವಾ ಕಾರ್ಯಗಳ ಕುರಿತು ವರದಿ ಮಂಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಶಾಖೆಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಈಗಿರುವ ಶಾಖೆಗಳಲ್ಲಿ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಿವಿಧ ವೃತ್ತಿ ಕ್ಷೇತ್ರಗಳ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಕುರಿತು ಅಭಿಪ್ರಾಯ ವಿನಿಮಯ ನಡೆದಿದೆ. ಹೊಸ ಪ್ರದೇಶಗಳಲ್ಲಿ ಶಾಖೆಗಳನ್ನು ಆರಂಭಿಸುವುದು ಹಾಗೂ ಕಾರ್ಯಕರ್ತರನ್ನು ತಳಮಟ್ಟದಲ್ಲಿ ಸಕ್ರಿಯಗೊಳಿಸುವ ಬಗ್ಗೆ ಕಾರ್ಯತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.
ಮಾರ್ಚ್ ನಂತರ ದೇಶದ ವಿವಿಧ ಭಾಗಗಳಲ್ಲಿ ನಡೆದ ಸಂಘ ಶಿಕ್ಷಾ ವರ್ಗಗಳು, ತರಬೇತಿ ಶಿಬಿರಗಳ ಸಾಧನೆ ಹಾಗೂ ಕೊರತೆಗಳ ಪರಿಶೀಲನೆಯೂ ನಡೆಯಿತು. ತರಬೇತಿ ಪಡೆದ ಸ್ವಯಂಸೇವಕರನ್ನು ಗ್ರಾಮ, ನಗರ ಮತ್ತು ಬಡಾವಣೆ ಮಟ್ಟದ ಸಂಘಟನಾ ಹಾಗೂ ಸೇವಾ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಕುರಿತು ಪ್ರಾಂತವಾರು ಯೋಜನೆಗಳ ಬಗ್ಗೆಯೂ ಇಲ್ಲಿ ಚರ್ಚಿತವಾಗಿದೆ.ಶತಮಾನೋತ್ಸವ ವರ್ಷದ ಅಂಗವಾಗಿ ಕೈಗೊಂಡ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜಾಗೃತಿ ಮತ್ತು ನಾಗರಿಕ ಕರ್ತವ್ಯಗಳ ಕುರಿತ ಕಾರ್ಯಕ್ರಮಗಳ ಪ್ರಗತಿಯನ್ನೂ ಸಭೆ ಅವಲೋಕಿಸಿದೆ. ಪೂರ್ಣಗೊಂಡ ಕಾರ್ಯಕ್ರಮಗಳ ಪರಿಣಾಮ ಹಾಗೂ ಬಾಕಿ ಉಳಿದಿರುವ ಕಾರ್ಯಕ್ರಮಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಕುರಿತು ಚರ್ಚೆ ನಡೆದಿದೆ.ಮುಂಬರುವ ಜನಗಣತಿ ಪ್ರಕ್ರಿಯೆಯ ಸಾಮಾಜಿಕ ಆಯಾಮಗಳ ಕುರಿತು ವಿವಿಧ ರಾಜ್ಯಗಳ ಪ್ರತಿನಿಧಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆದರೆ ಜಾತಿ ಗಣತಿ, ಜನಸಂಖ್ಯಾ ನೀತಿ ಅಥವಾ ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಪ್ರತ್ಯೇಕ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎನ್ನಲಾಗಿದೆ.ಸರಸಂಘಚಾಲಕ ಮೋಹನ್ ಭಾಗವತ್ ಅವರ 2026 ರಿಂದ 2027ನೇ ಸಾಲಿನ ಪ್ರವಾಸ ಯೋಜನೆ, ಪ್ರಾಂತವಾರು ಸಭೆಗಳು ಹಾಗೂ ಸಮಾಜದ ವಿವಿಧ ವರ್ಗಗಳೊಂದಿಗೆ ನಡೆಸಬೇಕಾದ ಸಂವಾದದ ರೂಪುರೇಷೆಗಳ ಕುರಿತೂ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಅಯೋಧ್ಯೆ ರಾಮಮಂದಿರ, ಕರ್ನಾಟಕದ ರಾಜಕೀಯ ಬೆಳವಣಿಗೆ ಅಥವಾ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳು ಸಭೆಯ ಪ್ರಮುಖ ಚರ್ಚಾ ವಿಷಯಗಳಾಗಿದ್ದವು ಎಂಬ ವರದಿಗಳಿಗೆ ಯಾವುದೇ ಅಧಿಕೃತ ಸ್ಪಷ್ಟೀಕರಣ ದೊರೆತಿಲ್ಲ. ಲಭ್ಯ ಮಾಹಿತಿಯ ಪ್ರಕಾರ ಎರಡನೇ ದಿನದ ಸಭೆಯಲ್ಲಿ ರಾಜಕೀಯ ವಿಚಾರಗಳಿಗಿಂತ ಸಂಘದ ಆಂತರಿಕ ಸಂಘಟನೆ ಬಲಪಡಿಸುವುದು ಹಾಗೂ ಶತಮಾನೋತ್ಸವದ ನಂತರದ ಕಾರ್ಯಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
