ಕನಕಪುರ: ಐದು ದಶಕಗಳ ಕಾಲ ದೇಗುಲಮಠಕ್ಕೆ ಅಮೂಲ್ಯ ಸೇವೆ ಸಲ್ಲಿಸಿ ಅಭಿವೃದ್ಧಿ ಮಾಡಿದ ಲಿಂಗೈಕ್ಯ ಮುಮ್ಮಡಿ ನಿರ್ವಾಣ ಸ್ವಾಮೀಜಿ ಕೊಡುಗೆ ಅಪಾರ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ದೇಗುಲ ಮಠದ ಆವರಣದಲ್ಲಿ ಲಿಂಗೈಕ್ಯ ನಿರ್ವಾಣ ಶ್ರೀಗಳ ಪುಣ್ಯ ಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಠಕ್ಕೆ ಮುಮ್ಮಡಿ ನಿರ್ವಾಣ ಶ್ರೀಗಳು ಬಂದ ಸಂದರ್ಭದಲ್ಲಿ ಕನಕಪುರ ಮೈಸೂರು ಭಾಗಕ್ಕೆ ಹೆಚ್ಚು ಸಂಪರ್ಕ ಬೆಳೆಸಿಕೊಂಡಿತ್ತು. ಈ ಭಾಗದಲ್ಲಿ ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಂಡು ಅವರ ಆಶಯಗಳನ್ನು ಈಡೇರಿಸುತ್ತಿದ್ದ ಹಿರಿಯ ಚೇತನ ಲಿಂಗೈಕ್ಯ ಶ್ರೀಗಳು ಸಿದ್ದಗಂಗಾ ಮಠದ ಹಿರಿಯ ಚೇತನ ಶಿವಕುಮಾರ್ ಸ್ವಾಮೀಜಿಗಳ ಅತ್ಯಂತ ಒಡನಾಡಿಗಳಲ್ಲಿ ಒಬ್ಬರಾಗಿದ್ದರು ಎಂಬುದು ಗಮನಾರ್ಹ ಎಂದರು.

ಸುತ್ತೂರು ಮಠದ ಶ್ರೀ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕನಕಪುರದ ದೇಗುಲ ಮಠದ ಪೀಠಾಧ್ಯಕ್ಷರಾಗಿ ಐದು ದಶಕಗಳ ಕಾಲ ಅವಿಸ್ಮರಣೀಯ ಸೇವೆ ಸಲ್ಲಿಸಿದ ಕೀರ್ತಿ ಮಮ್ಮಡಿ ನಿರ್ವಾಣ ಶ್ರೀಗಳಿಗೆ ಸಲ್ಲುತ್ತದೆ. ರಾಜ್ಯ ಸೇರಿದಂತೆ ತಮಿಳುನಾಡು ಭಾಗದಲ್ಲೂ ಅಪಾರ ಭಕ್ತರನ್ನು ಹೊಂದಿದ್ದರು ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಲಿಂಗೈಕ್ಯ ನಿರ್ವಾಣ ಶ್ರೀಗಳು ದೇಗುಲ ಮಠವನ್ನು ಸಾಮಾಜಿಕ ಕಳಕಳಿಯಿಂದ ಧರ್ಮ, ಸಂಸ್ಕೃತಿ, ಧಾರ್ಮಿಕ ಪರಂಪರೆಗಳನ್ನು ನೈತಿಕ ಮೌಲ್ಯಗಳೊಂದಿಗೆ ಮುನ್ನಡೆಸಿಕೊಂಡು ಬಂದಿರುವ ಆದರ್ಶವಾದಿಗಳು. ಅವರ ದಾರಿಯಲ್ಲಿ ಕಿರಿಯ ಶ್ರೀಗಳು ಮಠವನ್ನು ಮುನ್ನಡೆಸಲಿ ನಮ್ಮೆಲ್ಲರ ಸಹಕಾರ ಸದಾ ಇರುತ್ತದೆ. ಸ್ವಾಮೀಜಿ ನಡೆದು ಬಂದ ದಾರಿಯಲ್ಲಿ ಅವರ ತತ್ವಾದರ್ಶಗಳಲ್ಲಿ ನಾವು ಸಾಗಿದರೆ, ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಪೂಜ್ಯ ಶ್ರೀಗಳ ಆಶೀರ್ವಾದ ನಾಡಿನ ಜನತೆಯ ಮೇಲಿರಲಿ ಎಂದು ತಿಳಿಸಿದರು.

ಕೇಂದ್ರ ಸಚಿವ ಸೋಮಣ್ಣ ಮಾತನಾಡಿ, ಲಿಂಗೈಕ್ಯ ಶ್ರೀಗಳು 50 ವರ್ಷ ಪೀಠಾಧಿಪತಿಯಾಗಿ ಮಠವನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಸಾಮಾಜಿಕಗಿ, ಶೈಕ್ಷಣಿಕ, ಧಾರ್ಮಿಕ ಕೆಲಸ ಮಾಡಿದ್ದಾರೆ. ಮಠದಲ್ಲಿ ಹೊಸ ಬದಲಾವಣೆಗಳನ್ನು ತಂದು ಅನೇಕ ಕಾರ್ಯಕ್ರಮಗಳಿಂದ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದ್ದಾರೆ ಎಂದು ಹೇಳಿದರು.


ಕೆ ಕೆ ಪಿ ಸುದ್ದಿ 03: : ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.