ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಇದರ 2025-26ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ ಪಣಂಬೂರಿನ ಬಿಸಿನೆಸ್ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ನಡೆಯಿತು.2025–26ನೇ ಹಣಕಾಸು ವರ್ಷದಲ್ಲಿ 50 ಮಿಲಿಯನ್ ಮೆಟ್ರಿಕ್ ಟನ್‌ಗಿಂತ ಅಧಿಕ ಸರಕು ನಿರ್ವಹಣೆ ಎಂಬ ಐತಿಹಾಸಿಕ ಸಾಧನೆ ದಾಖಲಿಸಲು ಅಮೂಲ್ಯ ಕೊಡುಗೆ ನೀಡಿದ ಬಂದರು ಬಳಕೆದಾರರು, ಟರ್ಮಿನಲ್ ನಿರ್ವಾಹಕರು, ಶಿಪ್ಪಿಂಗ್ ಏಜೆಂಟ್‌ಗಳು, ಸ್ಟೀವೆಡೋರ್‌ಗಳು, ಆಮದುದಾರರು, ರಫ್ತುದಾರರು ಹಾಗೂ ಇತರೆ ಪಾಲುದಾರರನ್ನು ಸಮಾರಂಭದಲ್ಲಿ ಗೌರವಿಸಿ, ಸನ್ಮಾನಿಸಲಾಯಿತು.

ನವ ಮಂಗಳೂರು ಬಂದರು ಪ್ರಾಧಿಕಾರ, ದೀನ್‌ದಯಾಳ್ ಬಂದರು ಪ್ರಾಧಿಕಾರ ಹಾಗೂ ಭಾರತೀಯ ಬಂದರುಗಳ ಸಂಘದ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ಮಾತನಾಡಿ, 2025-26ನೇ ಹಣಕಾಸು ವರ್ಷದಲ್ಲಿ 50 ಎಂಎಂಟಿ ಸರಕು ನಿರ್ವಹಣೆ ಐತಿಹಾಸಿಕ ಮೈಲಿಗಲ್ಲು ತಲುಪಿದ್ದು ಅಭಿನಂದನೀಯ. 2026–27ನೇ ಹಣಕಾಸುವರ್ಷದಲ್ಲಿ 53 ಎಂಎಂಟಿ ಗುರಿಯನ್ನು ಸಾಧಿಸುವುದರೊಂದಿಗೆ ಭಾರತದ ಪ್ರಮುಖ ಬಂದರುಗಳ ಪೈಕಿ ಎನ್‌ಎಂಪಿಎ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮ್ಯಾರಿಟೈಮ್ ಇಂಡಿಯಾ ವಿಷನ್–2030 ಹಾಗೂ ಅಮೃತ ಕಾಲ್ ವಿಷನ್–2047 ಅಡಿಯಲ್ಲಿ ಭಾರತ ಸರ್ಕಾರ ರೂಪಿಸಿರುವ ದೂರದೃಷ್ಟಿಯ ಯೋಜನೆಗಳನ್ನು ಉಲ್ಲೇಖಿಸಿ, ಆಧುನೀಕರಣ, ಯಾಂತ್ರೀಕರಣ, ಡಿಜಿಟಲೀಕರಣ, ಸಾಮರ್ಥ್ಯ ವೃದ್ಧಿ ಹಾಗೂ ವ್ಯಾಪಾರ ಸುಗಮೀಕರಣ ದೇಶದ ಕಡಲ ವಲಯದ ಅಭಿವೃದ್ಧಿಗೆ ಪ್ರಮುಖ ಅಂಶಗಳಾಗಿವೆ ಎಂದರು.

ಎನ್‌ಎಂಪಿಎ ಉಪಾಧ್ಯಕ್ಷೆ ಎಸ್.ಶಾಂತಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಂಪಿಎ ಮುಖ್ಯ ಜಾಗೃತಾಧಿಕಾರಿ ಪದ್ಮನಾಭಾಚಾರ್ ಕೆ. ಮತ್ತಿತರರು ಇದ್ದರು.ಸಂಜೆಯ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಆಮದುದಾರರು, ರಫ್ತುದಾರರು, ಟರ್ಮಿನಲ್ ನಿರ್ವಾಹಕರು, ಶಿಪ್ಪಿಂಗ್ ಏಜೆಂಟ್‌ಗಳು, ಸ್ಟೀವೆಡೋರ್‌ಗಳು, ಕಸ್ಟಮ್ಸ್ ಹೌಸ್ ಏಜೆಂಟ್‌ಗಳು, ಲಾಜಿಸ್ಟಿಕ್ಸ್ ಪಾಲುದಾರರು ಹಾಗೂ ಇತರ ಬಂದರು ಬಳಕೆದಾರರಿಗೆ ಪ್ರಶಸ್ತಿ ಪ್ರದಾನಿಸಲಾಯಿತು.

ಎನ್‌ಎಂಪಿಎ ಸಂಚಾರ ವ್ಯವಸ್ಥಾಪಕ ರಾಜೇಂದ್ರ ಕುಮಾರ್ ಸ್ವಾಗತಿಸಿದರು. ಎನ್‌ಎಂಪಿಎ ಉಪಸಂಚಾರ ವ್ಯವಸ್ಥಾಪಕ ರವಿಕಿರಣ್ ವಂದಿಸಿದರು.