ಬ್ಯಾಡಗಿ: ಸಚಿವ ಸ್ಥಾನಕ್ಕಾಗಿ ದೆಹಲಿ ಮಟ್ಟದಲ್ಲಿ ಲಾಬಿ ನಡೆಸುವುದಿಲ್ಲ, ನನ್ನ ಹೈಕಮಾಂಡ ಏನಿದ್ದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಸೇವಾ ಹಿರಿತನ ನೋಡಿ ಅವಕಾಶ ಮಾಡಿಕೊಟ್ಟಲ್ಲಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಾದಿ ತಳಹದಿಯನ್ನಿಟ್ಟುಕೊಂಡು ರಾಜಕಾರಣಕ್ಕೆ ಬಂದಿರುವ ನಾನು ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ರೂಢಿಸಿದ್ದೇನೆ. ಮೊದಲ 3 ವರ್ಷದ ಅವಧಿಯಲ್ಲೇ ನನಗೆ ಸಚಿವ ಸ್ಥಾನ ಸಿಗಬೇಕಾಗಿತ್ತು. ಆದರೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನಿದ್ದೇನೆ ನಿನಗೇಕೆ..? ಎಂಬುದಾಗಿ ಹೇಳುವ ಮೂಲಕ ನನ್ನನ್ನು ಸುಮ್ಮನಿರಿಸಿದ್ದರು. ಆದರೆ ಇದೀಗ ಅವರು ಯಾವುದೇ ಹುದ್ದೆಯಲ್ಲಿಲ್ಲ. ಈಗಲಾದರೂ ಸಚಿವ ಸ್ಥಾನಕ್ಕೆ ಶಿಫಾರಸು ಮಾಡಬೇಕು ಎಂದರು.

ನಾವು ಸನ್ಯಾಸಿಗಳಲ್ಲ: ಜಿಲ್ಲೆಯ ಶಾಸಕರಾರು ರಾಜಕೀಯ ನನ್ಯಾಸತ್ವ ಸ್ವೀಕರಿಸಿಲ್ಲ.ಎಲ್ಲರೂ ಅವರದೇ ಹಾದಿಯಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದೇವೆ, ಹೀಗಿದ್ದರೂ ಸಹ ಮೊದಲ 3 ವರ್ಷದ ಅವಧಿಯಲ್ಲಿ ಮಂತ್ರಿ ಸ್ಥಾನದಿಂದ ವಂಚಿತರಾಗಿದ್ದೇವೆ. ನಾವೇನು ರಾಜಕೀಯ ಸನ್ಯಾಸತ್ವ ಸ್ವೀಕರಿಸಿಲ್ಲ ಎಂದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರಸ್ತುತ ಸರ್ಕಾರದ ಅವಧಿ ಕೇವಲ 2 ವರ್ಷ ಉಳಿದಿದೆ. ಉತ್ತರ ಕರ್ನಾಟಕ ಭಾಗದಿಂದ ಅತೀ ಹೆಚ್ಚು ಕಾಂಗ್ರೆಸ್ ಶಾಸಕರನ್ನು ಕೊಟ್ಟಿದ್ದೇವೆ. ಮುಂದಿನ ಚುನಾವಣೆ ಉದ್ದೇಶವನ್ನಿಟ್ಟುಕೊಂಡು ಜಿಲ್ಲೆಗೆ ಪ್ರಾತಿನಿಧ್ಯ ನೀಡಿದಲ್ಲಿ ನನಗೆ ಮಂತ್ರಿ ಸ್ಥಾನ ಲಭಿಸುವ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಚನ್ನಬಸಪ್ಪ ಹುಲ್ಲತ್ತಿ, ದುರ್ಗೇಶ ಗೋಣೆಮ್ಮನವರ ನ್ಯಾಯವಾದಿ ಗೌರಪುರ, ಮುನ್ನಾ ಎರೇಸೀಮಿ, ಡಿ.ಎಚ್. ಬುಡ್ಡನಗೌಡ್ರ, ಮಲ್ಲಿಕಾರ್ಜುನ ಕರಲಿಂಗಪ್ಪನವರ ಸೇರಿದಂತೆ ಇನ್ನಿತರರಿದ್ದರು.