ಗದಗ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ಯಾವುದೇ ರಸಗೊಬ್ಬರ ಮಾರಾಟಗಾರರು ನಿಗದಿಗಿಂತ ಹೆಚ್ಚಿನ ದರ ವಸೂಲಿ ಮಾಡಿದರೆ ಅಥವಾ ಕೃತಕ ಅಭಾವ ಸೃಷ್ಟಿಸಲು ಯತ್ನಿಸಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಮುಂಗಾರು ಹಂಗಾಮಿನ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ ರೈತರು ಕೃಷಿ ಭೂಮಿಯಲ್ಲಿ ರಸಗೊಬ್ಬರಗಳನ್ನು ಅತಿಯಾಗಿ ಬಳಸದೇ ಮಣ್ಣಿನ ಆರೋಗ್ಯ ದೃಷ್ಟಿಯಿಂದ ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಇತ್ತೀಚಿನ ದಿನಗಳಲ್ಲಿ ಮಣ್ಣಿನ ಪರೀಕ್ಷೆ ಮಾಡಿಸದೇ ರಸಗೊಬ್ಬರಗಳನ್ನು ವಿಶೇಷವಾಗಿ ಯೂರಿಯಾ ಮತ್ತು ಡಿಎಪಿ ಗೊಬ್ಬರಗಳನ್ನು ಅತಿಯಾಗಿ ಬಳಸುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುವುದಲ್ಲದೇ ಅನಗತ್ಯವಾಗಿ ಕೃಷಿ ವೆಚ್ಚವೂ ಹೆಚ್ಚಾಗುತ್ತಿದೆ. ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷಾ ವರದಿಯ ಆಧಾರದ ಮೇಲೆ ಕೃಷಿ ಅಧಿಕಾರಿಗಳ ಸಲಹೆಯಂತೆ ಶಿಫಾರಸು ಮಾಡಿದ ಪ್ರಮಾಣದಲ್ಲಿಯೇ ರಸಗೊಬ್ಬರಗಳನ್ನು ನೀಡಬೇಕು. ಕೇವಲ ರಾಸಾಯನಿಕ ಗೊಬ್ಬರಗಳನ್ನೇ ಅವಲಂಭಿಸದೇ ತೇವಾಂಶ ಉಳಿಸಿಕೊಳ್ಳಲು ಮತ್ತು ಮಣ್ಣಿನ ಜೈವಿಕ ಗುಣಮಟ್ಟವನ್ನು ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರು ಗೊಬ್ಬರ ಹಾಗೂ ಜೀವಾಮೃತದಂತಹ ನೈಸರ್ಗಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಸಾಂಪ್ರದಾಯಿಕ ಮೂಟೆ ಯೂರಿಯಾ ಗೊಬ್ಬರದ ಬದಲಾಗಿ ದ್ರವ ರೂಪದ ನ್ಯಾನೋ ಯೂರಿಯಾವನ್ನು ಬಳಸುವುದರಿಂದ ಬೆಳೆಗೆ ಸಾರಜನಕದ ಲಭ್ಯತೆ ಹೆಚ್ಚುತ್ತದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಎಂದರು.
ಜಿಲ್ಲೆಯಲ್ಲಿ ಅಗತ್ಯವಿರುವಷ್ಟು ರಸಗೊಬ್ಬರಗಳ ದಾಸ್ತಾನು ಲಭ್ಯವಿದೆ. ರೈತರು ಯಾವುದೇ ಆತಂಕಕ್ಕೆ ಒಳಗಾಗದೇ ಜಾಗರೂಕತೆಯಿಂದ ರಸಗೊಬ್ಬರವನ್ನು ಖರೀದಿಸಿ ಸಮರ್ಪಕವಾಗಿ ಬಳಸಿ ಉತ್ತಮ ಇಳುವರಿ ಪಡೆಯಬೇಕು ಎಂದು ತಿಳಿಸಿದರು.ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಜನವರಿ 2026ರಿಂದ ಜೂನ್ 2026ರ ವರೆಗೆ ವಾಡಿಕೆ ಮಳೆ 118.9 ಮಿ.ಮೀ ಇದ್ದು, 150.4 ಮಿ.ಮೀ ಮಳೆ ಆಗಿರುತ್ತದೆ. ಹೆಸರು, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ಶೇಂಗಾ ಬೆಳೆಗಳು ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾಗಿವೆ. ಎಲ್ಲ ವರ್ಗದ ರೈತರಿಗೆ ಗರಿಷ್ಠ 2 ಹೆಕ್ಟೇರ್ ಅಥವಾ ಅವರ ಹಿಡುವಳಿ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಬಿತ್ತನೆ ಬೀಜಗಳನ್ನು ರಿಯಾಯತಿ ದರದಲ್ಲಿ ವಿತರಿಸಲಾಗುವುದು ಎಂದರು.
2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಬಿತ್ತನೆಯಾಗಬಹುದಾದ 305975 ಹೆಕ್ಟೇರ್ ಪ್ರದೇಶವಿದ್ದು, 67598 ಕ್ವಿಂಟಲ್ ಬಿತ್ತನೆ ಬೀಜ ಬೇಕಾಗುತ್ತದೆ. ಬೀಜ ಬದಲಾವಣೆ ಅನುಪಾತದನ್ವಯ 11624 ಕ್ವಿಂಟಲ್ ಬಿತ್ತನೆ ಬೀಜ ಬೇಕಾಗುತ್ತದೆ. ಜಿಲ್ಲೆಯಲ್ಲಿ 11706 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆಯಿದ್ದು 11706 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದೆ. 1337.8 ಕ್ವಿಂಟಲ್ ಬೀಜ ವಿತರಣೆಯಾಗಿದ್ದು 10368.2 ಕ್ವಿಂಟಲ್ ಉಳಿಕೆಯಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ 67536 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು, ಜೂನ್ ಅಂತ್ಯಕ್ಕೆ 32833 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇರುತ್ತದೆ. ಏಪ್ರಿಲ್ ನಿಂದ ಇಲ್ಲಿ ವರೆಗೆ 21055 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದ್ದು, ಆರಂಭಿಕ ಶಿಲ್ಕು 16647 ಮೆ.ಟನ್ ಸೇರಿ 37702 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಿದೆ. ಏಪ್ರಿಲ್ ದಿಂದ ಇಲ್ಲಿ ವರೆಗೆ 23037 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ. ಮಾರಾಟ ಮಳಿಗೆಯಲ್ಲಿ 13842 ಮೆಟ್ರಿಕ್ ಟನ್, ಕೆಎಸ್‌ಎಸ್‌ಸಿ - 1533.02 ಮೆಟ್ರಿಕ್ ಟನ್, ಕೆಎಸ್‌ಎಂಎಫ್‌ದಲ್ಲಿ 951 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇರುತ್ತದೆ ಎಂದು ವಿವರಿಸಿದರು.
ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್, ಪ್ರಧಾನ ಮಂತ್ರಿ ಧನ್–ಧಾನ್ಯ ಕೃಷಿ ಯೋಜನೆ, ಆತ್ಮ ಯೋಜನೆಯ 2026-27ರ ಕ್ರಿಯಾ ಯೋಜನೆ, ದ್ವಿ-ದಳ ಧಾನ್ಯಗಳಲ್ಲಿ ಆತ್ಮ ನಿರ್ಭರತಾ ಅಭಿಯಾನ, ರಾಷ್ಟ್ರೀಯ ಆಹಾರ ಭಧ್ರತಾ ಮತ್ತು ಪೌಷ್ಟಿಕ ಅಭಿಯಾನ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆ ಕುರಿತು ಚರ್ಚಿಸಲಾಯಿತು.ಡಿಡಿಎಲ್ ಆರ್. ರುದ್ರಣ್ಣಗೌಡ ಸೇರಿದಂತೆ ಉಪ ಕೃಷಿ ನಿರ್ದೇಶಕರು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರು, ಆತ್ಮ ಜಿಲ್ಲಾ ಯೋಜನಾ ನಿರ್ದೇಶಕರು, ಎನ್‌ಆರ್‌ಎಲ್‌ಎಂ ಯೋಜನಾ ನಿರ್ದೇಶಕರು, ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು ಹಾಗೂ ಇತರರು ಇದ್ದರು.