ಶಿಗ್ಗಾಂವಿ: ನಾನು ಸಕಾರಾತ್ಮಕ ರಾಜಕಾರಣದ ಮೇಲೆ ನಂಬಿಕೆ ಇಟ್ಟುಕೊಂಡು ಬಂದಿದ್ದೇನೆ. ಸಕಾರಾತ್ಮಕ ರಾಜಕಾರಣವನ್ನೇ ಮಾಡುತ್ತೇನೆ. ನಾನು ಮುಖ್ಯಮಂತ್ರಿಯಾದರೂ ಯಾರ ವಿರುದ್ಧವೂ ದ್ವೇಷ ರಾಜಕಾರಣ ಮಾಡಿಲ್ಲ. ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ. ನಮಗೆ ಅನ್ಯಾಯ ಮಾಡಿದವರಿಗೆ ಒಳ್ಳೆಯದನ್ನೇ ಮಾಡಿದ್ದೇನೆ. ಕಿರುಕುಳ ಅನ್ನುವುದು ನನ್ನ ಜೀವನದಲ್ಲಿಯೇ ಇಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಶಿಗ್ಗಾಂವಿ- ಸವಣೂರ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್.ಆರ್. ಬೊಮ್ಮಾಯಿ ಅವರ ೧೦೨ನೇ ಜನ್ಮದಿನೋತ್ಸವದ ಅಂಗವಾಗಿ ಶಿಗ್ಗಾಂವಿ - ಸವಣೂರ ವಿಧಾನಸಭಾ ಮತಕ್ಷೇತ್ರದ ಪದವಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಎಸ್. ಆರ್. ಬೊಮ್ಮಾಯಿಯವರು ಕುಂದಗೋಳದ ಕಮಡೊಳ್ಳಿಯಲ್ಲಿ ಕನ್ನಡದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದರೂ ಅವರು ಇಂಗ್ಲಿಷ್‌ನಲ್ಲಿ ಮಂಚೂಣಿಯಲ್ಲಿದ್ದರು. ಅವರ ಹೆಸರಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಿದ್ದೇವೆ ಎಂದು ಹೇಳಿದರು.ಶಿಕ್ಷಣ ಮೂಲಭೂತ ಹಕ್ಕು: ಎಸ್. ಆರ್.ಬೊಮ್ಮಾಯಿಯವರು ಕೇಂದ್ರದಲ್ಲಿ ಶಿಕ್ಷಣ ಮಂತ್ರಿಯಾಗಿದ್ದರು. ಶಿಕ್ಷಣ ಮೂಲಭೂತ ಹಕ್ಕು ಅಂದರೆ ಬಡವರು, ದೀನ ದಲಿತರು ಯಾರೇ ಇರಲಿ ಅವರಿಗೆ ಶಿಕ್ಷಣ ಪಡೆಯುವ ಹಕ್ಕು ಇದೆ ಎಂದು ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಮಾಡಿದರು. ಆಗ ಚುನಾವಣೆ ಬಂದು ಮುಂದಿನ ಸರ್ಕಾರ ಅದನ್ನು ಜಾರಿ ಮಾಡಿತು. ನಾನು ಒಂದು ಸಾರಿ ಅವರ ಎದುರು ನಿಂತು ಮಾತನಾಡಿದ್ದೆ. ಒಂದು ಹರಿಜನರ ಜಮೀನನ್ನು ಬೇರೆಯವರಿಗೆ ವರ್ಗಾವಣೆ ಮಾಡುವ ವಿಚಾರದಲ್ಲಿ ವಾದ ಮಾಡಿದೆ. ಅವರು ನಾನು ಹೇಳಿದ್ದನ್ನು ಮಾಡಿರಲಿಲ್ಲ. ಬೇರೆಯವರು ಹೇಳಿದ್ದನ್ನು ಮಾಡಿದ್ದರು ಅಂತ ವಾದ ಮಾಡಿದ್ದೆ. ಆದರೆ, ಆ ಮೇಲೆ ಗೊತ್ತಾಯಿತು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ವಿಶೇಷ ಪ್ರಕರಣ ಅಂತ ಮಾಡುವಂತೆ ಸೂಚಿಸಿದ್ದರು. ನರಗುಂದ, ನವಲಗುಂದ ರೈತ ಹೋರಾಟ ನಡೆದಾಗ ಮುಂಚೂಣಿಯಲ್ಲಿದ್ದರು ಎಂದು ಹೇಳಿದರು.ಅವರು ಮೌಲ್ಯ ಬಿಡದೆ ರಾಜಕಾರಣ ಮಾಡಿದ್ದರು. ಅವರ ಹೆಸರಿನಲ್ಲಿ ಮಕ್ಕಳಿಗೆ ಪ್ರಶಸ್ತಿ ಕೊಟ್ಟರೆ ಅಂತಹ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ಪಡೆದಿದ್ದೇವೆ ಎನ್ನುವುದು ವಿದ್ಯಾರ್ಥಿಗಳಿಗೆ ಹೆಮ್ಮೆ ಆಗುತ್ತದೆ ಎಂದು ಹೇಳಿದರು.ಈ ಪ್ರಶಸ್ತಿಯಿಂದ ನಿಮಗೆ ಸ್ಫೂರ್ತಿ ಸಿಗಲಿ. ನನ್ನ ಲೋಕಸಭಾ ಕ್ಷೇತ್ರದಲ್ಲಿ ಈ ವರ್ಷ ಸಾವಿರ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡಲು ತೀರ್ಮಾನಿಸಿದ್ದೇವೆ. ಹಾವೇರಿ-ಗದಗ ಜಿಲ್ಲೆಗಳ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಶಿಗ್ಗಾಂವಿ ಮಂಡಳದ ಅಧ್ಯಕ್ಷ ಈಶ್ವರ ಹರವಿ, ಸವಣೂರ ಮಂಡಳದ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಹಾವೇರಿ ಗ್ರಾಮೀಣ ಮಂಡಳದ ಅಧ್ಯಕ್ಷ ಮಾರುತಿ ಗೊರವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೀಲಪ್ಪ ಚವಡಿ, ಮುಖಂಡರುಗಳಾದ ಗವಿಸಿದ್ದಪ್ಪ ದ್ಯಾಮಣ್ಣವರ, ಶಿವಾನಂದ ಮ್ಯಾಗೇರಿ, ಡಿ.ಎಸ್. ಮಾಳಗಿ, ಸುಭಾಸ್ ಗಡೆಪ್ಪನವರ, ಗಂಗಣ್ಣ ಸಾತಣ್ಣವರ, ಧರೆಪ್ಪಗೌಡ ಪಾಟೀಲ್, ತಿಪ್ಪಣ್ಣ ಸಾತಣ್ಣವರ, ಎಂ.ಎನ್ .ಹೊನಕೇರಿ, ನವೀನ ಸವಣೂರ, ದೇವಣ್ಣ ಚಾಕಲಬ್ಬಿ, ಶೋಭಾ ನಿಸ್ಸಿಮಗೌಡ್ರ, ಯಶೋದಾ ಪಾಟೀಲ್ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.