ಹಗರಿಬೊಮ್ಮನಹಳ್ಳಿ: ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇದೆ. ಈಗ ನಡೆಯುತ್ತಿರುವುದು ಮತಪಟ್ಟಿಯ ಶುದ್ಧೀಕರಣ. ಯಾರ ಮತಗಳನ್ನೂ ಕಿತ್ತುಕೊಳ್ಳುವ, ಹೆಸರು ಅಳಿಸುವ ದುರುದ್ದೇಶ ಎಸ್‌ಐಆರ್ ಉದ್ದೇಶವಲ್ಲ ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಎನ್.ರವಿಕುಮಾರ್ ಪ್ರತಿಪಾದಿಸಿದರು.
ಪಟ್ಟಣದ ಅಂಬಾಭವಾನಿ ದೇಗುಲದ ಬಳಿ ಭಾನುವಾರ ಸಂಜೆ ಮತದಾರರಿಗೆ ಗಣತಿ ನಮೂನೆ ಪ್ರತಿ ವಿತರಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿದರು.ಪರಿಶುದ್ಧ ಮತದಾರರ ಪಟ್ಟಿ ಪ್ರಜಾಪ್ರಭುತ್ವದ ಹಿತ ಕಾಯುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಒಬ್ಬ ವ್ಯಕ್ತಿಯ ಹೆಸರು ಎರಡು ಮತ ಕೇಂದ್ರಗಳಲ್ಲಿ ದಾಖಲಾಗಿವೆ. ಸತ್ತ ವ್ಯಕ್ತಿಗಳ ಹೆಸರುಗಳು ಮತಪಟ್ಟಿಯಲ್ಲಿವೆ. ಇಂಥಹವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕುವ ಜೊತೆಗೆ ೧೮ ವರ್ಷ ಮೇಲ್ಪಟ್ಟ ಎಲ್ಲರ ಹೆಸರನ್ನೂ ನೋಂದಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವದ ಉಳಿವಿಗೆ ಮತದಾರರ ಪಟ್ಟಿ ಪರಿಷ್ಕರಣೆ ತೀವ್ರ ಅಗತ್ಯವಾಗಿದೆ ಎಂದರು.
ಅರ್ಹ ಮತದಾರರ ಹೆಸರು ಪಟ್ಟಿಯಿಂದ ಬಿಟ್ಟು ಹೋಗದಂತೆ ಎಲ್ಲ ಪಕ್ಷದವರೂ ಶ್ರಮಿಸಬೇಕು. ಬಿಜೆಪಿ ಪಕ್ಷದವರು ಒಂದೇ ಅಲ್ಲ; ಎಲ್ಲ ಪಕ್ಷದವರನ್ನು ಒಳಗೊಂಡು ಎಸ್.ಐ.ಆರ್. ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಬೆಣಕಲ್ ಪ್ರಕಾಶ್, ನಗರ ಘಟಕದ ಅಧ್ಯಕ್ಷ ಮಂಜುನಾಥ್ ಹಿರೇಮಠ್, ಉಪಾಧ್ಯಕ್ಷ ಮಲ್ಲಯ್ಯ ಸ್ವಾಮಿ, ಪುರಸಭೆಯ ಸದಸ್ಯರಾದ ದೀಪಕ್ ಕಠಾರೆ, ರವೀಂದ್ರಗೌಡ, ಜಿಲ್ಲಾ ಕಾರ್ಯದರ್ಶಿ ಕನಕಪ್ಪ, ಬಿ.ಎಲ್.ಓ. ಲಿಂಗರಾಜ್, ಬಿ.ಎಲ್.ಎ೧ ಮಲ್ಲಯ್ಯ ಸ್ವಾಮಿ, ಎಂ.ಸುರೇಶ್, ಮಂಜುನಾಥ್, ಕಾಳೇಶ್, ಸಾಲ್ಮಿನಿ ನಾಗರಾಜ್, ಮಂಡಲ ಪ್ರದಾನ ಕಾರ್ಯದರ್ಶಿ ದಿವಾಕರ್ ಇದ್ದರು.
ಹಗರಿಬೊಮ್ಮನಹಳ್ಳಿಯ ಅಂಬಾಭವಾನಿ ದೇಗುಲದ ಬಳಿ ಭಾನುವಾರ ಸಂಜೆ ಮತದಾರರಿಗೆ ಗಣತಿ ನಮೂನೆ ಪ್ರತಿ ವಿತರಿಸುವ ಪ್ರಕ್ರಿಯೆಯಲ್ಲಿ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಎನ್.ರವಿಕುಮಾರ್ ಪಾಲ್ಗೊಂಡಿದ್ದರು.