ಗಂಗಾ ಮತಸ್ಥ ಸಮಾಜದ ಅಭಿವೃದ್ಧಿಗೆ ಬದ್ಧ

ಹಗರಿಬೊಮ್ಮನಹಳ್ಳಿ: ಅಪೂರ್ಣಗೊಂಡಿರುವ ಗಂಗಾದೇವಿಯ ದೇಗುಲ ಹಾಗೂ ಪುತ್ಥಳಿ ಸಹಿತ ಅಂಬಿಗರ ಚೌಡಯ್ಯ ವೃತ್ತ ನಿರ್ಮಾಣ ಮತ್ತು ಸಮುದಾಯ ಭವನದ ಕಾಮಗಾರಿಗಳನ್ನು ಪೂರಕ ಅನುದಾನ ಒದಗಿಸಿ ೨೦೨೭ರೊಳಗೆ ಪೂರ್ಣಗೊಳಿಸಲಾಗುವುದು. ಜೊತೆಗೆ ಗಂಗಾ ಮತಸ್ಥ ಸಮಾಜದ ಅಭಿವೃದ್ಧಿಗೆ ಬದ್ಧ ಎಂದು ಶಾಸಕ ನೇಮರಾಜ್ ನಾಯ್ಕ ಭರವಸೆ ನೀಡಿದರು.

ಪಟ್ಟಣದ ಶ್ರೀಕೃಷ್ಣ ಚಿತ್ರ ಮಂದಿರದಲ್ಲಿ ಗಂಗಾಮತ ಸಮಾಜದ ಜಿಲ್ಲಾ ಘಟಕ ಭಾನುವಾರ ಆಯೋಜಿಸಿದ್ದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಮಹರ್ಷಿ ವೇದವ್ಯಾಸಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೋಷಕರು, ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸುತ್ತಾರೆ. ಮಕ್ಕಳು, ಪೋಷಕರ ನಂಬಿಕೆಯನ್ನು ಹುಸಿಗೊಳಿಸದೇ ಶಿಕ್ಷಣದಲ್ಲಿ ಗಮನಾರ್ಹ ಸಾಧನೆಗೈಯಬೇಕು. ಶಿಕ್ಷಣದಿಂದ ಬರೀ ಕುಟುಂಬದ ಅಭಿವೃದ್ಧಿಯಾಗುವುದಿಲ್ಲ. ದೇಶದ ಅಭಿವೃದ್ಧಿಗೂ ಶಿಕ್ಷಣ ಪೂರಕವಾಗಿದೆ ಎಂಬ ಕಿವಿಮಾತು ಹೇಳಿದರು.

ವಿಧಾನಪರಿಷತ್ತಿನ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸುವ ಮೂಲಕ ಶಿಕ್ಷಣದ ಗುರಿ ಮುಟ್ಟಬೇಕು. ಪಕ್ಷಾತೀತವಾಗಿ ಸಮಾಜವನ್ನು ಸಂಘಟಿಸಬೇಕು ಎಂದು ಕಿವಿಮಾತು ಹೇಳಿದರು. ಗಂಗಾವತಿಯ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಈ.ಧನಂಜಯ ಮಾರ್ಗದರ್ಶಿ ಉಪನ್ಯಾಸ ನೀಡಿದರು.

ಸಮಾಜದ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ ಮಾತನಾಡಿ, ಜಿಲ್ಲೆಯಲ್ಲಿ ಸಮಾಜ ಬಲಿಷ್ಠವಾಗಿದೆ. ಆದರೂ ಪಕ್ಷಾತೀತವಾಗಿ ಪರಸ್ಪರ ಸಮನ್ವಯದೊಂದಿಗೆ ರಾಜಕೀಯ ಪ್ರಾತಿನಿಧ್ಯ ಪಡೆಯಬೇಕು ಎಂದು ಆಶಿಸಿದರು. ಇದಕ್ಕೂ ಮುನ್ನ ಸುಕ್ಷೇತ್ರ ನರಸೀಪುರ ಶಾಂತ ಭೀಷ್ಮ ಚೌಡಯ್ಯ ಶ್ರೀಗಳು ಪಟ್ಟಣದ ಬಂಡಿಹಳ್ಳಿ ಮತ್ತು ಚಿಂತ್ರಪಳ್ಳಿ ಕೂಡು ರಸ್ತೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೃತ್ತದ ನಾಮಫಲಕ ಅನಾವರಣಗೊಳಿಸಿದರು.

ಸಮಾರಂಭದಲ್ಲಿ ಡಾ.ಸೋಮಶೇಖರ ಕಬ್ಬೇರ, ಡಾ.ಬಿ.ಬಿ.ಹೊಸೂರಪ್ಪ, ಭೀಮಣ್ಣ ಗಜಾಪುರ, ವೆಂಕಟೇಶ್ ಬಾರಿಕೇರ ಮತ್ತು ಗಾಳೆಪ್ಪ ಗಾದಿಗನೂರು ಅವರಿಗೆ ಮಹರ್ಷಿ ವೇದವ್ಯಾಸಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.

ನಂದೀಪುರ ಡಾ.ಮಹೇಶ್ವರ ಶ್ರೀಗಳು, ಕಡಲಬಾಳು ಶಾಖಾ ಗವಿಮಠದ ಪ್ರಶಾಂತ ಶ್ರೀಗಳು, ಹಾಲಶಿದ್ದೇಶ್ವರ ಶ್ರೀಗಳು ಮತ್ತು ಹಂಪಸಾಗರ ನವಲಿ ಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಿದ್ದರು.

ಸಮಾಜದ ತಾಲೂಕು ಅಧ್ಯಕ್ಷ ಅಂಬಾಡಿ ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ದಾರ್ ಯಮನೂರಪ್ಪ, ಮುಖಂಡರಾದ ಜಿ.ಕೆ.ಮಂಜುನಾಥ್, ಶಿವಕುಮಾರ್ ನಾಟೀಕರ್, ವೈ.ಮಲ್ಲಿಕಾರ್ಜುನ, ಸಿ.ಎಚ್.ಸಿದ್ಧರಾಜು, ನಾಗರಾಜ ಜನ್ನು ಮತ್ತಿತರೇ ಮುಖಂಡರು ಉಪಸ್ಥಿತರಿದ್ದರು. ಶಾರದಾ ಮಂಜುನಾಥ್, ಶಿಕ್ಷಕ ಶಿವಶಂಕರ್ ನಿರ್ವಹಿಸಿದರು.