ಜಾಗತಿಕ ಸಮಸ್ಯೆಗಳು ಒಂದಡೆಯಾದರೆ ನಮ್ಮ ಭಾರತೀಯ ಸಂಸ್ಕೃತಿಯ ವಿನಾಶ ಮತ್ತೊಂದು ಕಡೆ.

ಹೊಸಪೇಟೆ: ಭಯೋತ್ಪಾದನೆ, ಜಾತಿ ಕಲಹ, ಅತ್ಯಾಚಾರ, ಅನಾಚಾರ ಸೇರಿದಂತೆ ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಭಗವದ್ಗೀತೆ ಶಾಶ್ವತ ಪರಿಹಾರವಾಗಲಿದೆ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸ್ಥಳೀಯ ಕೊಟ್ಟೂರು ಸ್ವಾಮಿ ಮಠದಲ್ಲಿ ಶ್ರೀಮಠ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನ ಕುರಿತ ರಾಜ್ಯಮಟ್ಟದ ಕಾರ್ಯಾಗಾರದ ಮಾಹಿತಿಗಾಗಿ ಆಯೋಜಿಸಿದ್ದ ಭಕ್ತರ ಸಭೆಯಲ್ಲಿ ಮಾತನಾಡಿದ ಪೂಜ್ಯರು, ಜಾಗತಿಕ ಸಮಸ್ಯೆಗಳು ಒಂದಡೆಯಾದರೆ ನಮ್ಮ ಭಾರತೀಯ ಸಂಸ್ಕೃತಿಯ ವಿನಾಶ ಮತ್ತೊಂದು ಕಡೆ. ಅದರ ಜೊತೆಯಲ್ಲಿಯೇ ನಮ್ಮ ದೈಹಿಕ, ಮಾನಸಿಕ ಸ್ವಾಸ್ಥ್ಯ ಹದಗೆಡುವುದು ಸೇರಿದಂತೆ ಸಕ್ಕರೆ ಕಾಯಿಲೆ ರಕ್ತದೊತ್ತಡದಂತಹ ಸಮಸ್ಯೆಗಳು ಸಹ ವಿಶ್ವದಲ್ಲಿಯೇ ಹೆಚ್ಚಾಗಿ ಭಾರತದಲ್ಲಿ ಕಂಡು ಬರುತ್ತಿದೆ. ಇತ್ತೀಚೆಗಂತೂ ಯುವ ಜನಾಂಗ ಇಂತಹ ಸಮಸ್ಯೆಗಳಿಗೆ ಒಳಗಾಗುತ್ತಿದ್ದು, ಭಗವದ್ಗೀತಾ ಪಾರಾಯಣ ಮಾನಸಿಕ ದೈಹಿಕ ಸ್ವಾಸ್ಥ್ಯದ ಜೊತೆ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಲಿದೆ ಎಂದರು.

ನವೆಂಬರ್‌ನಲ್ಲಿ ಅಭಿಯಾನದ ಕಲಿಕಾ ಕಾರ್ಯಕ್ರಮ, ಡಿಸೆಂಬರ್‌ನಲ್ಲಿ ಅಭಿಯಾನದ ಕುರಿತು ತಾಲೂಕು ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳು ನಡೆಯಲಿವೆ ಎಂದರು.

ಶಾರದಾ ಗೀತಾಶ್ರಮದ ಸಮೇದಾನಂದ ಜಿ.ಮಹಾರಾಜ, ಅಂಜನಾನಂದ ಸರಸ್ವತಿ ಸ್ವಾಮೀಜಿ ವೇದಿಕೆಯಲ್ಲಿದ್ದು ಆಶೀರ್ವಚನ ನೀಡಿದರು. ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ದಿವಾಕರ್, ವೀರಶೈವ ಸಮಾಜದ ಶರಣಸ್ವಾಮಿ, ಆರ್ಯವೈಶ್ಯ ಸಮಾಜದ ಕೆ.ರಾಜೇಂದ್ರ, ವಿಶ್ವಕರ್ಮ ಸಮಾಜದ ರಾಜಣ್ಣ, ಪಿ.ಎನ್. ಶ್ರೀಪಾದ್, ಭೂಪಾಲ್ ಶ್ರೀಪಾದ್, ಪತ್ರಕರ್ತ ಕೆ.ಲಕ್ಷ್ಮಣ್, ಅನಿಲ್ ಜೋಶಿ, ರವಿಶಂಕರ್, ಪಿ.ಡಿ. ಗೌತಮ್, ಎಲ್‌.ಡಿ. ಜೋಶಿ, ವಿಎಚ್ಪಿ ನರಸಿಂಹಮೂರ್ತಿ, ನಗರಸಭಾ ಮಾಜಿ ಉಪಾಧ್ಯಕ್ಷ ರಮೇಶ್ ಗುಪ್ತ, ಮಾತೆಯರಾದ ಭಾರತಿ, ಸುಷ್ಮಾ, ಮೀರಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮ ನಿರ್ವಹಣೆಗೆ ರಾಜ್ಯಮಟ್ಟದ ಸಮಿತಿ ರಚಿಸಲಾಯಿತು.‌