ದಾಬಸ್‍ಪೇಟೆ: ನೆಲಮಂಗಲ ತಾಲೂಕಾದ್ಯಂತ ನೆಲಮಂಗಲ ಉತ್ಸವದ ಅಂಗವಾಗಿ ಮಹಿಳೆಯರ ಉತ್ತೇಜನಕ್ಕಾಗಿ ರಂಗೋಲಿ ಸ್ಪರ್ದೇ ಕಾರ್ಯಕ್ರಮ ಏರ್ಪಡಿಸುತ್ತಿದ್ದು, ಈಗಾಗಲೇ 18 ಗ್ರಾ.ಪಂ.ಗಳಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಮಹಿಳೆಯರು ರಂಗೋಲಿ ಬಿಡಿಸಿದ್ದಾರೆ. ಆದರೆ ರಂಗೋಲಿ ವಿಚಾರದಲ್ಲಿಯೂ ರಾಜಕೀಯ ಮಾಡಿ ರಂಗೋಲಿ ಬಿಡದಂತೆ ಅಡ್ಡಿಪಡಿಸುವುದು, ದೌರ್ಜನ್ಯ ಮಾಡುವುದು, ಬೆದರಿಕೆ ಹಾಕುವುದು ತಪ್ಪು, ಅಂತಹವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಶಾಸಕ ಎನ್.ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.
ಸೋಂಪುರ ಹೋಬಳಿಯ ಭಾರತೀಪುರ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಂಗೋಲಿ ನಮ್ಮ ಹಿಂದೂ ಧರ್ಮದ ಪವಿತ್ರ ಸಂಕೇತಗಳಲ್ಲಿ ಒಂದಾಗಿದೆ. ಪಕ್ಷಾತೀತವಾಗಿ, ಧರ್ಮಾತೀತವಾಗಿ, ಜಾತ್ಯಾತೀತವಾಗಿ ಪ್ರತಿಯೊಂದು ಗ್ರಾಮಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಭಾರತೀಪುರ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಹೋಬಳಿ ಅಧ್ಯಕ್ಷರು, ಸಹೋದರ ಸಮಾನರು ಆಗಿರುವ ಮೋಹನ್ ಕುಮಾರ್ ರವರು ಹಾಗೂ ಸ್ನೇಹಿತರುಗಳು ರಂಗೋಲಿ ಬಿಡದಂತೆ ಲಾರಿಗಳನ್ನು ಅಡ್ಡನಿಲ್ಲಿಸಿರುವುದನ್ನು ಕೇಳಿ ಮನಸ್ಸಿಗೆ ಬಹಳ ಬೇಸರವಾಯಿತು. ಚುನಾವಣಾ ಪೂರ್ವದಿಂದಲೂ ಅವರಿಗೆ ಗೌರವ ಪ್ರೀತಿ, ಅಭಿಮಾನ ಕೊಡುತ್ತಿದ್ದೇನೆ, ಮುಂದೆಯೂ ಗೌರವದಿಂದ ಕಾಣುತ್ತೇನೆ. ಆದರೆ ಈ ರೀತಿ ತೊಂದರೆಯನ್ನು ಯಾಕೆ ಮಾಡಿದ್ದಾರೆಂದು ಗೊತ್ತಿಲ್ಲ, ಅವರೇ ಉತ್ತರ ನೀಡಬೇಕು ಎಂದರು.ಈಗಾಗಲೇ ಭಾರತೀಪುರ ಗ್ರಾಮದ ಅಭಿವೃದ್ದಿಗೆ 1 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿದ್ದೇನೆ. ಭಾರತಿಪುರ ಕಾಲೋನಿಯಲ್ಲಿ 50 ಲಕ್ಷ ರೂಗಳ ಕಾಮಗಾರಿ ಚಾಲನೆಯಲ್ಲಿದೆ. ಇನ್ನೆರಡು ವರ್ಷಗಳಲ್ಲಿ ಇನ್ನಷ್ಟು ಅನುದಾನ ತಂದು ಸಮಗ್ರ ಅಭಿವೃದ್ದಿಗೆ ಮುಂದಾಗುತ್ತೇನೆ. ಮಹಿಳೆಯರು ಗಮನಕ್ಕೆ ತಂದಿರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುತ್ತೇನೆ ಎಂದರು.
ಮಹಿಳೆಯರಿಂದ ಮನವಿ : ಭಾರತೀಪುರ ಗ್ರಾಮದಲ್ಲಿ ಪಡಿತರ ವಿತರಣಾ ಕೇಂದ್ರವಿಲ್ಲದೆ ಬೇರೆ ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗಬೇಕು ಹಾಗಾಗಿ ಪಡಿತರ ವಿತರಣಾ ಕೇಂದ್ರ ವಿತರಿಸುವಂತೆ ಮನವಿ ಮಾಡಿದಾಗ ಮುಂದಿನ ಎರಡು ತಿಂಗಳಲ್ಲಿ ಆರಂಭಿಸಿ ನಾನೇ ಉದ್ಘಾಟನೆ ಮಾಡುತ್ತೇನೆಂದು ಶಾಸಕರು ಭರವಸೆ ನೀಡಿದರು. ಬಸ್ ಒದಗಿಸುವಂತೆ ಮನವಿ ಮಾಡಿದಾಗ ಪಟ್ಟಣಕ್ಕೆ ಹತ್ತಿರವಿದೆ ಸಾಧ್ಯವಾದರೆ ಬಸ್ ಸೌಲಭ್ಯ ಒದಗಿಸುತ್ತೇನೆ. ಮುಂದಿನ ದಿನಗಳಲ್ಲಿ ಆಶ್ರಯ ಯೋಜನೆಯಡಿ ಅರ್ಹರಿಗೆ ನಿವೇಶನ, ಮನೆ ಸೌಲಭ್ಯ ಒದಗಿಸಿಕೊಡುತ್ತೇನೆ. ವಾರದೊಳಗೆ ಬೊರ್ ವೆಲ್ ಕೊರೆಯಿಸಿ ನೀರಿನ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.ಜನರ ಅನುಕೂಲಕ್ಕಾಗಿ ಮನೆಗೆ ಬರಲು ಸಿದ್ದ : ತಿಮ್ಮನಾಯ್ಕನಹಳ್ಳಿ ಗ್ರಾಮದಲ್ಲಿ ರಸ್ತೆ ಸಮಸ್ಯೆಯಿದ್ದು, ಖಾಸಗಿ ವ್ಯಕ್ತಿಯೊಬ್ಬರು ರಸ್ತೆ ಬಿಡಲು ನಿರಾಕರಿಸುತ್ತಿದ್ದಾರೆ ಜನತೆಗೆ ಓಡಾಡಲು ಸಮಸ್ಯೆಯಾಗುತ್ತಿದೆ ಎಂದು ಮಹಿಳೆಯರು ಮನವಿ ಮಾಡಿದಾಗ ಸರ್ಕಾರಿ ಜಮೀನಾಗಿದ್ದರೆ ತೆರವು ಮಾಡಿಸುತ್ತಿದ್ದೆ ಆದರೆ ಖಾಸಗಿ ಜಮೀನು ಆದ ಕಾರಣ ಅವರೇ ಒಪ್ಪಿ ಬಿಡಬೇಕು. ಜನರಿಗೆ ಅನುಕೂಲವಾಗುವುದಾದರೆ ಅವರ ಬಳಿ ಬಂದು ನಾನು ಮನವಿ ಮಾಡಲು ಸಿದ್ದನಿದ್ದೇನೆ ಎಂದರು.
ಬಹುಮಾನ ವಿತರಣೆ : ಭಾರತೀಪುರ, ಭಾರತೀಪುರ ಕಾಲೋನಿ, ತಿಮ್ಮನಾಯ್ಕನಹಳ್ಳಿ ಗ್ರಾಮಗಳಲ್ಲಿ ಅಂದವಾಗಿ ರಂಗೋಲಿ ಬಿಡಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಎನ್ ಪಿಎ ಸದಸ್ಯರಾದ ಅಂಚೆಮನೆ ಪ್ರಕಾಶ್, ವೆಂಕಟೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಶಿವಕುಮಾರ್, ರಾಮಾಂಜೀನೇಯ, ನಗರಸಭೆ ಸದಸ್ಯ ಪ್ರದೀಪ್, ಮುಖಂಡರುಗಳಾದ ಬೀರಗೊಂಡನಹಳ್ಳಿ ಮಲ್ಲೇಶ್, ಕೃಷ್ಣಮೂರ್ತಿ, ಚಂದ್ರಶೇಖರ್, ನಯಾಜ್ ಖಾನ್, ಯೋಗನಂದೀಶ್, ಪಾರ್ಥ, ಸಿದ್ದರಾಜು, ಗಂಗರುದ್ರಯ್ಯ, ಟಗರುಶಿವಸ್ವಾಮಿ, ಹನುಮಂತರಾಜು, ಚಿಕ್ಕಣ್ಣ ಸೇರಿದಂತೆ ಮುಖಂಡರುಗಳು, ಕಾರ್ಯಕರ್ತರು, ಗ್ರಾಮಸ್ಥರು, ಮಹಿಳೆಯರು ಉಪಸ್ಥಿತರಿದ್ದರು.
ಪೋಟೋ 6 : ಸೋಂಪುರ ಹೋಬಳಿಯ ಭಾರತೀಪುರ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಶಾಸಕ ಎನ್.ಶ್ರೀನಿವಾಸ್ ರಂಗೋಲಿ ಬಿಡಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಿದರು.