ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಮಾಜ, ಆರೋಗ್ಯ ಸೇವೆ ಮಾಡುವುದು ರಾಜಕಾರಣಕ್ಕೋಸ್ಕರವಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ಜನರ ಸೇವೆಯೇ ಮುಖ್ಯ ಎಂದು ಎಸ್. ಎಸ್. ಕೇರ್ ಟ್ರಸ್ಟ್ ನ ಆಜೀವ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ನಗರದ ಎಂಸಿಸಿ ಬಿ ಬ್ಲಾಕ್‌ನ ಐಎಂಎ ಹಾಲ್‌ನಲ್ಲಿ ಎಸ್.ಎಸ್. ಕೇರ್ ಟ್ರಸ್ಟ್ ಹಾಗೂ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ದಾವಣಗೆರೆ ಜನರ ಆರೋಗ್ಯವೇ ನಮಗೆ ಮುಖ್ಯ. ರಾಜಕೀಯ ಉದ್ದೇಶಕ್ಕೋಸ್ಕರ ಈ ಕಾರ್ಯ ಮಾಡುತ್ತಿಲ್ಲ. 2019ರಿಂದಲೂ ಎಸ್. ಎಸ್. ಕೇರ್ ಟ್ರಸ್ಟ್ ನಿಂದ ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದ್ರೆ, ಜನರ ಪ್ರೀತಿ, ವಿಶ್ವಾಸ ಮುಖ್ಯ ಎಂದರು.
ಡಯಾಬಿಟಿಸ್, ಬಿಪಿ, ಕ್ಯಾನ್ಸರ್ ಸೇರಿ ಹಲವು ರೀತಿಯಲ್ಲಿ ತಪಾಸಣೆ ಮಾಡಲಾಗುತ್ತಿದೆ. ಜನರು ಆರೋಗ್ಯ ಕಾಪಾಡಿಕೊಂಡರೆ ಎಲ್ಲವೂ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತಾರೆ. ಬಡವರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು ಎಂಬ ಸದುದ್ದೇಶದಿಂದ ಉಚಿತ ತಪಾಸಣೆ ಶಿಬಿರ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಕೊರೊನಾದಂಥ ಸಂಕಷ್ಟದ ಸಂದರ್ಭದಲ್ಲಿ ಎಸ್.ಎಸ್. ಕೇರ್ ಹಾಗೂ ಎಸ್.ಎಸ್.ಹೈಟೆಕ್ ಆಸ್ಪತ್ರೆಯ ವತಿಯಿಂದ ಲಸಿಕೆ ನೀಡುವ ಮೂಲಕ ಸಹಾಯ ಮಾಡಿದ್ದರು. ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಅವರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದೇವೆ. ಇದಕ್ಕೆ ಜನರಿಂದಲೂ ಉತ್ತಮ ಸಹಕಾರ, ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಾ. ಪ್ರಭಾ ಅವರು, ಎಸ್.ಎಸ್. ಕೇರ್ ಟ್ರಸ್ಟ್‌ನ ಹೆಲ್ತ್ ಕಾರ್ಡ್ ವಿತರಿಸಿದರು. ಈ ವೇಳೆ ವಾರ್ಡ್ನ ಪ್ರಮುಖರಿದ್ದರು.