ಸಾರಾಂಶ
ಶಿವಮೊಗ್ಗ: ಸ್ವಾಮಿನಿಷ್ಠೆ ಮತ್ತು ತ್ಯಾಗದ ಪ್ರತೀಕವೇ ಒನಕೆ ಓಬವ್ವ. ಚಿತ್ರದುರ್ಗ ಕೋಟೆಯನ್ನು ಶತ್ರು ಸೈನ್ಯದಿಂದ ಸಂರಕ್ಷಣೆ ಮಾಡುವ ಮೂಲಕ ಧೈರ್ಯ, ಶೌರ್ಯ ಮೆರೆದಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಓಬವ್ವನವರ ಜೀವನ ಯೋಶೋಗಾಥೆಯನ್ನು ಮಕ್ಕಳಿಗೆ ತಿಳಿಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಜಗನ್ನಾಥ ಕೆ. ಡಾಂಗೆ ಹೇಳಿದರು,
ಕುವೆಂಪು ರಂಗಮಂದಿರಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎದುರಾಳಿ ಸೈನಿಕರು ಕೋಟೆಯನ್ನು ಮುತ್ತಿದಾಗ ತನ್ನ ಮನೆಯಲ್ಲಿ ಆಹಾರ ತಯಾರಿಗೆ ಬಳಸುವಂತಹ ಒನಕೆಯನ್ನೇ ಆಯುಧವಾಗಿ ಬಳಸಿ ನೂರಾರು ಸೈನಿಕರ ರುಂಡಗಳನ್ನು ಚೆಂಡಾಡಿ, ಕೋಟೆಯನ್ನು ರಕ್ಷಿಸಿದ ವೀರ ವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ಎಂದರು.ನಮ್ಮ ದೇಶದಲ್ಲಿ ಅನೇಕ ರಾಣಿಯರು ಹೋರಾಟವನ್ನು ಮಾಡಿರುವ ಕುರಿತು ಓದಿದ್ದೇವೆ ಆದರೆ ಒಬ್ಬ ಸಾಮಾನ್ಯ ಮಹಿಳೆಯಾದ ಒನಕೆ ಓಬವ್ವ ಹೋರಾಟ ಅತ್ಯಂತ ರೋಮಾಂಚಕವಾಗಿದೆ. ಮಹಿಳೆಯರಿಗೆ ಗೌರವ ಸ್ಥಾನಮಾನ ಗೌರವ ಇಲ್ಲದ ಸಂದರ್ಭದಲ್ಲಿ ಹೈದಾರ್ ಆಲಿ ಸೈನ್ಯದ ವಂಚನೆಯ ದಾಳಿಯಿಂದ ಚಿತ್ರದುರ್ಗ ಸಂಸ್ಥಾನವನ್ನು ರಕ್ಷಿಸುವ ಮೂಲಕ ಇಂದಿಗೂ ಒನಕೆ ಓಬವ್ವನ ಹೆಸರು ಅಜರಾಮರವಾಗಿದೆ ಎಂದು ಹೇಳಿದರು.
ಸರ್ಕಾರ ಪಠ್ಯ ಪುಸ್ತಕದಲ್ಲಿ ಪಾಠಗಳ ಮೂಲಕ ಮಕ್ಕಳಿಗೆ ಹೋರಾಟಗಾರನ್ನು ಪರಿಚಯಿಸಬೇಕು. ಮಹಿಳಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹೆಣ್ಣು ಮಕ್ಕಳಿಗೆ ಓಬವ್ವನ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಬೇಕು. ಈ ಮೂಲಕ ಅವರ ಹೆಸರನ್ನು ಶಾಶ್ವತವಾಗಿಸುವಂತೆ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಚಿತ್ರದುರ್ಗದ ಒನಕೆ ಓಬವ್ವ ಒಬ್ಬ ವೀರ ಮಹಿಳೆ. ಅವರ ಹೋರಾಟ ಅವಿಸ್ಮರಣಿಯ. ಒಬ್ಬ ಸಾಮಾನ್ಯ ಮಹಿಳೆ ಶತ್ರುಗಳ ದಾಳಿಯಿಂದ ಒಂದು ಸಂಸ್ಥಾನವನ್ನು ಉಳಿಸಿ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಗೌರವಿಸಲ್ಪಟಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಎಚ್.ಉಮೇಶ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರತ್ನ ಮತ್ತು ಛಲವಾದಿ ಸಮಾಜದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.