ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಕ್ಫ್ ವಿರುದ್ಧದ ಹೋರಾಟದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಾನು (ಇಬ್ರಾಹಿಂ) ವಕ್ಫ್ ಆಸ್ತಿ ತಿಂದಿದ್ದೇನೆ ಎಂದು ಆರೋಪಿಸಿದ್ದು, ನಾನು ಅವರ ಮೇಲೆ ₹5 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಯತ್ನಾಳಗೆ ಲಾಯರ್ ನೋಟಿಸ್ ಕೊಟ್ಟು ₹5 ಕೋಟಿ ಮೊತ್ತದ ಮಾನಹಾನಿ ಕೇಸ್ ಹಾಕಿದ್ದೇನೆ. ನಾನು ಎಲ್ಲಿ ಆಸ್ತಿ ತಿಂದಿದ್ದೇನೆ? ಅದರ ಸರ್ವೇ ನಂಬರ್ ಸಮೇತ ದಾಖಲೆ ಕೊಡಬೇಕು. ಆಡಿದ ಮಾತಿಗೆ ತಪ್ಪಾಗಿದೆ ಎಂದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಪ್ರಕರಣ ಎದುರಿಸಲು ಸಿದ್ಧವಾಗಿ ಎಂದು ಎಚ್ಚರಿಸಿದರು. ಹೀಗೆ ಮಾಡಿದ್ದಕ್ಕೆ ಈ ಹಿಂದೆ ಅನ್ವರ ಮಾನಿಪ್ಪಾಡಿ ಮೇಲೂ ಕೇಸ್ ಹಾಕಿದ್ದೆ. ಅವನು ಕೋರ್ಟ್‌ಗೆ ಬರಲಿಲ್ಲ ಎಂದರು. ಯತ್ನಾಳ ಕೂಡಿಸುವ ಕೆಲಸ ಮಾಡಲಿ:
ಬಸವಣ್ಣನ ಜನ್ಮಭೂಮಿಯಲ್ಲಿ ಹುಟ್ಟಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡಿಸುವ ಕೆಲಸ ಮಾಡಬೇಕು. ಒಡೆಯುವ ಕೆಲಸ ಮಾಡಬಾರದು. ಹಾಗೆ ಮಾಡಿದರೆ ಬಸವಣ್ಣನಿಗೆ ಮಾಡಿದ ದೊಡ್ಡ ಅವಮಾನ. ಇಂದು ಪರಸ್ಪರ ಸಮಾಜಗಳ ಮಧ್ಯದಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಾಹಿತಿ ಎಂ.ಎಂ.ಕಲಬುರಗಿ ಹಾಗೂ ಚಿಂತಕಿ ಗೌರಿ ಲಂಕೇಶ ಅವರನ್ನು ಕೊಂದವರು ಯಾರು?, ಯತ್ನಾಳ ಇದನ್ನು ಹೇಳ್ತಾರಾ? ಯತ್ನಾಳ ಯಾರ ಸೃಷ್ಟಿ?, ಯತ್ನಾಳನನ್ನು ಸೃಷ್ಟಿ ಮಾಡಿದವರು ಯಾರು? ಇದನ್ನು ಹೇಳ್ತಾರಾ? ಯತ್ನಾಳ ಅವರೇ ಜಾತಿ ಆಧಾರದ ಮೇಲೆ ವಿಷಯ ಬಿಟ್ಟು, ಜನತೆ ಸಮಸ್ಯೆಗಳ ಆಧಾರದ ಮೇಲೆ ಹೋರಾಟ ಮಾಡಿ ಎಂದು ಸಲಹೆ ನೀಡಿದರು.ಜಗತ್ತಿನಲ್ಲಿಯೇ ಮೊಟ್ಟ ಮೊದಬಾರಿಗೆ 1400 ವರ್ಷಗಳ ಹಿಂದೆ ಉಮರ ಫಾರೂಕ್ ಎಂಬಾತ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಿದ್ದಾರೆ. ಯಾವುದೇ ನಿರುಪಯುಕ್ತ ಭೂಮಿಯಲ್ಲಿ ಪೈರು ಬೆಳೆಯುವವನೇ ಒಡೆಯ ಎಂದು ಆಗಲೇ ಅವರು ಹೇಳಿದ್ದರು ಎಂದರು.ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾಗ 242 ರೈತರಿಗೆ ನೋಟಿಸ್ ಕೊಟ್ಟಿದ್ದರು. ಇವರು ಅದನ್ನೇ ಮುಂದುವರಿಸಿದ್ದಾರೆ. ನಾನು ಕೋಡಿಹಳ್ಳಿ ಚಂದ್ರಶೇಖರ ಸೇರಿ ಈ ಭಾಗಕ್ಕೆ ಇನ್ನೊಮ್ಮೆ ಪ್ರವಾಸಕ್ಕೆ ಬರಲಿದ್ದೇವೆ. ರೈತರ ಭೂಮಿ ಯಾರೂ ಕಸಿಯಲು ಸಾಧ್ಯವಿಲ್ಲ. ರೈತರು ತಮ್ಮ ತಮ್ಮ ಭೂಮಿಯಲ್ಲಿ ಆರಾಮಾಗಿ ಜೀವನೋಪಾಯ ಮಾಡಿಕೊಂಡಿರಬೇಕು ಎಂದು ಧೈರ್ಯ ತುಂಬಿದರು.ವಾಪಸ್ ಪಡೆಯುವ ಬದಲು ಸರಿಪಡಿಸಬೇಕಿತ್ತು:
ರೈತರಿಗೆ ನೋಟಿಸ್ ಕೊಟ್ಟ ಮೇಲೆ ಒಕ್ಕಲೆದ್ದ ರೈತರು ಹಾಗೂ ಬಿಜೆಪಿಯವರ ಆರ್ಭಟಕ್ಕೆ ಸರ್ಕಾರ ಗಾಬರಿಗೆ ಬಿದ್ದು ಎಲ್ಲ ನೋಟಿಸ್ ವಾಪಸ್ ಪಡೆಯಿತು. ಆದರೆ ಸಿಎಂ ಸಿದ್ಧರಾಮಯ್ಯ ನೋಟಿಸ್ ವಾಪಸ್ ಪಡೆಯುವ ಅಗತ್ಯ ಇರಲಿಲ್ಲ. ಅದನ್ನು ಸರಿಪಡಿಸಿದ್ದರೆ ಸಾಕಾಗಿತ್ತು. ಏಕೆಂದರೆ ಇದರಲ್ಲಿ ಕಮರ್ಶಿಯಲ್ (ವಾಣಿಜ್ಯ) ಭೂಮಿ ಹೊಡೆದುಕೊಂಡು ಇಟ್ಟುಕೊಂಡವರ ನೋಟಿಸ್ ಸಹ ವಾಪಸ್ ಬಂತು. ಅದಕ್ಕೆ ಇವರ ಬಳಿ ದಾರಿ ಏನಿದೆ? ನೀವು ಕಾಂಗ್ರೆಸ್ ಹಾಗೂ ಬಿಜೆಪಿಯವರು ನಿಮ್ಮ ನಿಮ್ಮ ರಾಜಕೀಯದಲ್ಲಿ ಸಾಬರನ್ನು ಯಾಕೆ ತರ್ತಿರಪ್ಪಾ ಎಂದು ಪ್ರಶ್ನಿಸಿದರು.ವಕ್ಫ್ ಬೋರ್ಡ್ ಚುನಾವಣೆ ಬಂದಿದ್ದು, ಇ ಬೋರ್ಡ್‌ನಲ್ಲಿ ಅವ್ಯವಸ್ಥೆಗಳನ್ನು ಸುಧಾರಿಸಲು ಈ ಬಾರಿ ನಾವು ಬಂದೆನವಾಜ್ ದರ್ಗಾದ ಧರ್ಮಾಧಿಕಾರಿ ಸೈಯದ ಮಹಮ್ಮದಅಲಿ ಅಲ್ ಹುಸೇನಿ ಅವರಿಗೆ ಸ್ಪರ್ಧಿಸಲು ಹೇಳಿದೆವು. ಅವರನ್ನು ಒಪ್ಪಿಸಿ ನ.19ರಂದು ನಡೆಯುವ ವಕ್ಫ್ ಬೋರ್ಡ್ ಚುನಾವಣೆಗೆ ನಿಲ್ಲಿಸಿದ್ದೇವೆ. ಮುತುವಲ್ಲಿಗಳೇ ಓಟು ಹಾಕಿ ಅವರನ್ನು ಚುನಾಯಿಸಬೇಕು ಎಂದು ಕರೆ ನೀಡಿದರು. ಇದರಲ್ಲಿ ಯಾವುದೇ ಪಕ್ಷ ಇಲ್ಲ, ಎಲ್ಲರೂ ಪಕ್ಷಾತೀತವಾಗಿ ಮತ ಚಲಾಯಿಸಬೇಕು. ರಾಜ್ಯದ 1.40 ಕೋಟಿ ಜನತೆ ಹಾಗೂ 27 ಸಾವಿರ ವಕ್ಫ್ ಸಂಸ್ಥೆಗಳ ಸಂರಕ್ಷಣೆ ಆಗಲು ಸಜ್ಜನರು ಬರಬೇಕು ಎಂದು ಪ್ರಯತ್ನ ಮಾಡುತ್ತಿದ್ದೇವೆ ಎಂದರು.ವಕ್ಫ್‌ಗೆ ನಾನೇ ₹50 ಕೋಟಿ ಬೆಲೆ ಬಾಳುವ 50 ಎಕರೆ ಜಮೀನು ಕೊಟ್ಟಿದ್ದೇನೆ. ಅದೇ ರೀತಿ ದೇವಸ್ಥಾನಕ್ಕೂ ಕೊಟ್ಟಿದ್ದೇನೆ. ಒಮ್ಮೆ ಕೊಟ್ಟ ಮೇಲೆ ಅದು ಕೆಳಹಂತದ ಅಧಿಕಾರಗಳಿಂದ ಹಿಡಿದು, ಮೇಲ್ಮಟ್ಟದವರೆಗೆ ಫೈಲ್ ಮೂವ್ ಆಗಿ ವಕ್ಫ್‌ಗೆ ಆಸ್ತಿ ಹೋಗಲಿದ್ದು, ಮತ್ತೆ ಕೇಳಿದರೆ ವಾಪಸ್ ಬರಲ್ಲ. ನಾವು ವಕ್ಫ್‌ಗೆ ಆಸ್ತಿ ಕೊಟ್ಟ ಮೇಲೆ ಅದು 12 ತಿಂಗಳ ಮೇಲೆ ಗೆಜೆಟ್ ನೊಟಿಫೀಕೇಷನ್ ಆಗುತ್ತದೆ ಎಂದು ತಿಳಿಸಿದರು.ರಾಜರು ಆಸ್ತಿ ಕೊಟ್ಟಿದ್ದಾರೆ: ವಕ್ಫ್‌ಗೆ ಮುಸ್ಲಿಮರು ಸೇರಿದಂತೆ ಮೈಸೂರಿನ ಶ್ರೀಕೃಷ್ಣರಾಜ ಒಡೆಯರು ಸೇರಿದಂತೆ ಅನೇಕ ಕಡೆ ಹಿಂದೂ ಮಹಾರಾಜರು ಆಸ್ತಿಗಳನ್ನು ಕೊಟ್ಟಿದ್ದಾರೆ ಎಂದ ಅವರು, ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಎಚ್.ಡಿ.ದೇವೇಗೌಡರು ನನಗೆ 86 ವರ್ಷ ಎಂದು ಹೇಳಿ ಚನ್ನಪಟ್ಟಣದಲ್ಲಿ ಹೋಗಿ ಕಣ್ಣೀರಿಡುತ್ತಿದ್ದಾರೆ. ಯಾಕೆ ಅಳುತ್ತೀರಿ? ನಿಮಗೆ ನಿಲ್ಲು ಎಂದವರು ಯಾರು ಎಂದು ಪ್ರಶ್ನಿಸಿದರು? ರಾಮನಗರ ಆಯ್ತು, ಮಂಡ್ಯ ಆಯ್ತು, ಯೋಗಿಶ್ವರನಿಗೆ ಮನೆನೆ ಖಾಲಿ ಮಾಡಿಸಿದರು ಎಂದು ವ್ಯಂಗ್ಯವಾಡಿದರು.ಕರ್ನಾಟಕದಲ್ಲಿ ಮೂರನೇ ಶಕ್ತಿಯಂತೆ ಶಿವನ ಕಣ್ಣು ತೆರೆಯಬೇಕಿದೆ. ನಾನು ಕೋಡಿಹಳ್ಳಿ ಚಂದ್ರಶೇಖರ ಒಳಗೊಂಡು ಹಲವರೆಲ್ಲ ಸೇರಿ ಈಗಾಗಲೇ ಮೂರುಸಭೆ ಮಾಡಲಾಗಿದೆ. ಮುಂದೇನು ಮಾಡಬೇಕು ಎಂದು ಗೋಪಿ ಅವರ ಅಧ್ಯಕ್ಷತೆಯಲ್ಲಿ ನಿರ್ಧಾರ ಮಾಡಲಾಗುವುದು. ರಾಜ್ಯಕ್ಕೆ ಮೂರನೇ ಶಕ್ತಿ ಅವಶ್ಯಕತೆ ಇದೆ. ಇದು ಹೆಚ್ಚುಕಮ್ಮಿ ಡಿಸೆಂಬರ್‌ನಲ್ಲಿ ಅನೌನ್ಸ್ ಆಗಲಿದೆ ಎನ್ನುವ ಮೂಲಕ ಹೊಸಪಕ್ಷದ ಸೂಚನೆ ನೀಡಿದರು.ಗೋಷ್ಠಿಯಲ್ಲಿ ಮುಖಂಡರಾದ ಎಲ್.ಎಲ್.ಉಸ್ತಾದ, ಬಡೇಪೀರ ಜುನೇದಿ, ಬಿ.ಹೆಚ್.ಮಹಾಬರಿ, ಇಸ್ಮಾಯಲ್, ಯುನೂಸ್ ಖಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.