ಕನ್ನಡಪ್ರಭ ವಾರ್ತೆ ಆಳಂದ
ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಕನ್ನಡ ಭಾಷೆಯ ಬಳಕೆ ಕುಸಿಯುತ್ತಿದ್ದು, ಕಲಿಯಲು ಕೋಟಿ ಭಾಷೆಗಳಿದ್ದರೂ ಮಾತನಾಡಲು ಕನ್ನಡವೇ ಪ್ರಧಾನವಾಗಬೇಕು ಎಂಬ ಕವಿ ಹಾಗೂ ನಟ ಸಾಮ್ರಾಟರ ಆಶಯ ಸಾಕಾರಗೊಳಿಸಲು ಪ್ರತಿಯೊಬ್ಬರೂ ಕನ್ನಡ ಹೆಚ್ಚು ಬಳಸಬೇಕು ಎಂದು ಧುತ್ತರಗಾಂವ ಪ್ರೌಢಶಾಲೆಯ ಸಹ ಶಿಕ್ಷಕಿ ರಾಜೇಶ್ರೀ ಎಸ್. ಒಂಟಿ ಹೇಳಿದರು.ಪಟ್ಟಣದ ತಾಲೂಕು ಆಡಳಿತ ವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಣಮಂತ ಶೇರಿ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಪಶುಸಂಗೋಪನಾ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಮತ್ತು ಅಪಾರ ಸಾಹಿತ್ಯಿಕ ಶ್ರೇಷ್ಠತೆ ಇದೆ. ಹಿಂದಿ ಭಾಷೆ ಅಂಬೆಗಾಲಿಡುತ್ತಿದ್ದ ಹಾಗೂ ಇಂಗ್ಲಿಷ್ ಭಾಷೆ ತೊಟ್ಟಿಲಲ್ಲಿದ್ದ ಕಾಲದಲ್ಲೇ ಕನ್ನಡ ಸಮೃದ್ಧವಾಗಿ ಬೆಳೆದು ನಿಂತಿತ್ತು. ಕನ್ನಡಕ್ಕೆ ದೊರೆತಿರುವ ಜ್ಞಾನಪೀಠ ಪ್ರಶಸ್ತಿಗಳು ಹಾಗೂ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಅದರ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ ಎಂದರು.ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ರಾಷ್ಟ್ರಧ್ವಜಾರೋಹಣವನ್ನು ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ನೆರವೇರಿಸಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಂದ್ರನಾಥ ಹೊನ್ನಪಗೊಳ, ಕ್ಷೇತ್ರ ಶಿಕ್ಷಣಾಧಿಕಾರಿ ಗೋವರ್ಧನ, ಪಿಡಬ್ಲ್ಯೂಡಿ ಎಇಇ ಹೊನ್ನೇಶ ವೇದಿಕೆಯಲ್ಲಿದ್ದರು. ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಸಂತೋಷ ಸಿಂಧೆ, ರಮೇಶ ಪಾತ್ರೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ವೆಂಕಟೇಶ ಮರಾಠೆ, ಅರವಿಂದ ಜಾಫಳ, ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ನೋಡಲ್ ಅಧಿಕಾರಿ ಪಂಕಜ ಪಾಟೀಲ, ಆರ್ಐ ಶರಣಬಸಪ್ಪ ಹಕ್ಕೆ, ಆನಂದ ಪೂಜಾರಿ, ಆಕಾಶ ಸಜ್ಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ ನಿರೂಪಿಸಿದರು. ಶಿರಸ್ತೇದಾರ ರಾಕೇಶ ಶೀಲಂತ ಸ್ವಾಗತಿಸಿದರು.
ಅಧಿಕಾರಿಗಳ ಗೈರಿಗೆ ಆಕ್ರೋಶ: ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಶಾಸಕರು ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದಕ್ಕೆ ಕನ್ನಡ ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಕರವೇ ಜಿಲ್ಲಾ ಸಂಘಟಕ ವೆಂಕಟೇಶ ರಾಠೋಡ ಹಾಗೂ ಮುಖಂಡ ಮಹಾಂತೇಶ ಸಣ್ಣಮನಿ ಮಾತನಾಡಿ, ನಾಡು-ನುಡಿ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಮಹತ್ವದ ಕಾರ್ಯಕ್ರಮಕ್ಕೆ ಅಧಿಕಾರಿಗಳು ಗೈರಾಗಿರುವುದು ಕನ್ನಡದ ಬಗ್ಗೆ ಅವರ ನಿರ್ಲಕ್ಷ್ಯತೋರಿಸುತ್ತದೆ. ಗೈರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಾರಂಭದಲ್ಲೇ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ಪ್ರತಿಕ್ರಿಯಿಸಿ, ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಅಧಿಕಾರಿಗಳಿಗೆ ಮುಂಚಿತವಾಗಿಯೇ ಸೂಚನೆ ನೀಡಲಾಗಿತ್ತು. ಗೈರಾದವರಿಂದ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಕನ್ನಡದ ಕಾರ್ಯಕ್ರಮಗಳಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದರು.