ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ.
ಹೊಸಪೇಟೆ: ಮಹಿಳೆಯರ ರಾಜಕೀಯ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ತಂದಿರುವ ನಾರಿ ಶಕ್ತಿ ವಂದನಾ ಅಧಿನಿಯಮ ಜಾರಿಯಾಗದಂತೆ ತಡೆಯುತ್ತಿರುವ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಧೋರಣೆಯನ್ನು ಖಂಡಿಸಿ ಹೊಸಪೇಟೆಯ ಥಿಯೋಸಾಫಿಕಲ್ ಕಾಲೇಜಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಜನಾಕ್ರೋಶ ಮಹಿಳಾ ಸಭೆ’ ಶನಿವಾರ ನಡೆಯಿತು.ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಆರುಂಡಿ ಸುವರ್ಣ, ಮಹಿಳೆಯು ಇಂದು ಎಲ್ಲ ಕ್ಷೇತ್ರಗಳಲ್ಲೂ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದಾಳೆ. ಇತಿಹಾಸದಲ್ಲಿ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಅಪ್ರತಿಮ ಶೌರ್ಯ ತೋರಿದರೆ, ಇಂದು ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ, ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಿ ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಸಾಧನೆ ಮಾಡಿದ್ದಾರೆ. ಹೀಗಿದ್ದರೂ ರಾಜಕೀಯದಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಮಹಿಳೆಯರಿಗೆ ರಾಜಕೀಯದಲ್ಲಿ ಶೇ.33 ಮೀಸಲಾತಿ ನೀಡಲು ಮುಂದಾಗಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಇದನ್ನು ವಿರೋಧಿಸುತ್ತಿವೆ. ಮಹಿಳಾ ಮೀಸಲಾತಿಯು ನಮ್ಮ ಹಕ್ಕು, ಇದನ್ನು ಪಡೆದೇ ತೀರುತ್ತೇವೆ ಎಂದು ಅವರು ಗುಡುಗಿದರು.ಸಭೆಯ ನಂತರ ಥಿಯೋಸಾಫಿಕಲ್ ಕಾಲೇಜಿನಿಂದ ಲಕ್ಷ್ಮಿ ಟಾಕೀಸ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಮಹಿಳೆಯರು, ವಿರೋಧ ಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯ ಮಾಜಿ ಅಧ್ಯಕ್ಷೆ ಸುಂಕಮ್ಮ, ಮಂಡಲ ಅಲ್ಪಸಂಖ್ಯಾತರ ಅಧ್ಯಕ್ಷ ಇಮ್ತಿಯಾಜ್, ಮಹಿಳಾ ಮೋರ್ಚಾ ಅಧ್ಯಕ್ಷ ಉಮಾದೇವಿ, ಪ್ರಮುಖರಾದ ಪೂರ್ಣಿಮಾ, ಶೋಭಾ, ಶೈಲಜಾ ಭವಾನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೀರಾಬಾಯಿ, ಮಾಧ್ಯಮ ಸಂಚಾಲಕಿ ಅನುರಾಧ, ಮಂಡಲ ಪ್ರಧಾನ ಕಾರ್ಯದರ್ಶಿ ಮಧುರ ಚನ್ನ ಶಾಸ್ತ್ರಿ, ನಟರಾಜ್, ಗೌಳಿ ಬಸವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಹೊಸಪೇಟೆಯ ಥಿಯೋಸಾಫಿಕಲ್ ಕಾಲೇಜಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಜನಾಕ್ರೋಶ ಮಹಿಳಾ ಸಭೆ ಶನಿವಾರ ನಡೆಯಿತು.