ಸಾರಾಂಶ
ಪೊಲೀಸ್, ಅಗ್ನಿಶಾಮಕ, ಆರೋಗ್ಯ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳು ಸಮನ್ವಯದಿಂದ ನಿರ್ವಹಿಸಬೇಕಾದ ಕೆಲಸಗಳು ಹಾಗೂ ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆ ಕುರಿತು ಅಣಕು ಪ್ರದರ್ಶನ ಅನಾವರಣಗೊಳಿಸಲಾಯಿತು.
ಮಂಡ್ಯ : ಜಿಲ್ಲಾಡಳಿತದಿಂದ ಭಾನುವಾರ ಕೆಆರ್‌ಎಸ್‌ನಲ್ಲಿ ಆಪರೇಷನ್ ಅಭ್ಯಾಸ್ ಏರ್ಪಡಿಸಿ ಬೋಟಿಂಗ್ ಅವಘಡ, ಬೆಂಕಿ ಅವಘಡ, ಬಾಂಬ್ ಸ್ಫೋಟದಂತಹ ಘಟನೆಗಳು ಸಂಭವಿಸಿದ ಸಮಯದಲ್ಲಿ ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕ, ಆರೋಗ್ಯ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳು ಸಮನ್ವಯದಿಂದ ನಿರ್ವಹಿಸಬೇಕಾದ ಕೆಲಸಗಳು ಹಾಗೂ ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆ ಕುರಿತು ಅಣಕು ಪ್ರದರ್ಶನ ಅನಾವರಣಗೊಳಿಸಲಾಯಿತು.
ಕೆಆರ್‌ಎಸ್ ಉದ್ಯಾನ ವನದಲ್ಲಿರುವ ಬೋಟಿಂಗ್ ಪಾಯಿಂಟ್‌ನಲ್ಲಿ ಬೋಟ್ ಮಗುಚಿಕೊಂಡ ಸಂದರ್ಭದಲ್ಲಿ ಕಂಟ್ರೋಲ್ ರೂಂಗೆ ಘಟನೆ ವಿವರ ಬಂದ ತಕ್ಷಣ ಕಂಟ್ರೋಲ್ ರೂಂನಿಂದ ವಿವಿಧ ಇಲಾಖೆಗಳಿಗೆ ಮಾಹಿತಿ ನೀಡಿ ಎಚ್ಚರಿಸಲಾಯಿತು.
ಅಗ್ನಿಶಾಮಕ ದಳದವರು ಮೊದಲು ನೀರಿನಲ್ಲಿ ಮುಳುಗುತ್ತಿರುವ ವ್ಯಕ್ತಿಗಳ ರಕ್ಷಣೆಗಾಗಿ ತಮ್ಮ ಇಲಾಖೆ ಬೋಟ್, ರಕ್ಷಣಾ ಸಲಕರಣೆಗಳನ್ನು ಬಳಸಿಕೊಂಡು ಮುಳುಗುತ್ತಿರುವ ವ್ಯಕ್ತಿಗಳನ್ನು ದಡಕ್ಕೆ ಕರೆತರುತ್ತಾರೆ. ಪೊಲೀಸ್ ಇಲಾಖೆಯವರು ಸಾರ್ವಜನಿಕರನ್ನು ನಿಯಂತ್ರಿಸಲು ಹಾಗೂ ಅಗ್ನಿಶಾಮಕ ಇಲಾಖೆ ವಾಹನಗಳು ಹಾಗೂ ಅಂಬ್ಯೂಲೆನ್ಸ್ ಗಳ ಚಲನ- ವಲನಗಳಿಗೆ ತೊಂದರೆಯಾಗದಂತೆ ಬಂದೋಬಸ್ತ್ ಒದಗಿಸುತ್ತಾರೆ. ಆರೋಗ್ಯ ಇಲಾಖೆಯಿಂದ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅವಶ್ಯಕವಿರುವವರನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಬೆಂಕಿ ಅವಘಡದಿಂದ ರಕ್ಷಣೆ:
ಪೊಲೀಸ್ ಗೆಸ್ಟ್ ಹೌಸ್‌ನಲ್ಲಿ ಬೆಂಕಿ ಅವಘಡವಾದ ತಕ್ಷಣ ಸೈರನ್ ಶಬ್ಧ ಚಾಲನೆ ಮಾಡಿ ಎಚ್ಚರಿಕೆ ನೀಡಲಾಯಿತು. ಕಂಟ್ರೋಲ್ ರೂಂಗೆ ವಿಷಯ ರವಾನಿಸಿ ಎಲ್ಲಾ ಇಲಾಖೆಗಳನ್ನು ಎಚ್ಚರಿಸಲಾಯಿತು.
ಪೊಲೀಸ್ ಗೆಸ್ಟ್ ಹೌಸ್ ನಲ್ಲಿ ಬೆಂಕಿ ಅನಾಹುತದಲ್ಲಿ ಸಿಲುಕಲಾಗಿದ್ದ ವ್ಯಕ್ತಿಗಳನ್ನು ರಕ್ಷಿಸುವ ಅಣುಕು ಪ್ರದರ್ಶನದಲ್ಲಿ ಮೊದಲನೇ ಮಹಡಿಯಿಂದ ಗಾಯಾಳುಗಳನ್ನು ಕೆಳಗೆ ಇಳಿಸಿ ಚಿಕಿತ್ಸೆ ನೀಡುವುದು ವಿಶೇಷವಾಗಿತ್ತು.
ಬಾಂಬ್ ಸ್ಫೋಟದ ಅವಘಡ:
ಬಾಂಬ್ ಸ್ಫೋಟವಾದ ತಕ್ಷಣ ಸೈರನ್ ಮೂಲಕ ಎಚ್ಚರಿಕೆ ನೀಡಿ ಕಂಟ್ರೋಲ್ ರೂಂಗೆ ವಿಷಯ ರವಾನಿಸಿ ಎಲ್ಲಾ ಇಲಾಖೆಗಳಿಗೆ ಕ್ರಮಕ್ಕೆ ಮಾಹಿತಿ ನೀಡಲಾಯಿತು. ಬಾಂಬ್ ನಿಷ್ಕ್ರಿಯ ತಂಡ ಶ್ವಾನದಳದೊಂದಿಗೆ ಆಗಮಿಸಿ ಉದ್ಯಾನವನದ ಪರಿಶೀಲನೆ ಪ್ರಾರಂಭಿಸಲಾಯಿತು.
ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಎನ್‌ಸಿಸಿ ವಿದ್ಯಾರ್ಥಿಗಳು, ಅಪಘಾತಕ್ಕೀಡಾದವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದರೆ ವೈದ್ಯರ ತಂಡ ಪ್ರಥಮ ಚಿಕಿತ್ಸೆ ನೀಡುವ ಕಾರ್ಯದಲ್ಲಿ ತೊಡಗಿತ್ತು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಯಲ್ಲಿ ಯಾವುದೇ ಲೋಪವಾಗದಂತೆ ನಿಗಾ ವಹಿಸಿದರು.
ಅಣುಕು ಪ್ರದರ್ಶನದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಗಂಗಾಧರ್, ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಆರೋಗ್ಯ, ಪೊಲೀಸ್, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಗೃಹರಕ್ಷಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಯುದ್ಧದ ಕುರಿತು ಜನರ ಪ್ರತಿಕ್ರಿಯೆಗಳು...
ಕುತಂತ್ರಕ್ಕೆ ಮತ್ತೊಂದು ಹೆಸರೇ ಪಾಕಿಸ್ತಾನ. ನರಿಬುದ್ಧಿಯಿಂದಲೇ ಭಾರತವನ್ನು ಕೆರಳಿಸುತ್ತಿದೆ. ತಿರುಗಿಬಿದ್ದಾಗ ಎದುರಿಸುವ ತಾಕತ್ತಿಲ್ಲದಿದ್ದರೂ ದುರಹಂಕಾರ, ಉದ್ಧಟತನಕ್ಕೇನೂ ಕಡಿಮೆ ಇಲ್ಲ. ಉಗ್ರರನ್ನು ಪೋಷಿಸಿಕೊಂಡೇ ಬರುತ್ತಿರುವ ಪಾಕಿಸ್ತಾನದ ಸೊಲ್ಲಡಗಿಸಲು ಆಪರೇಷನ್ ಸಿಂದೂರ ಮಹತ್ವದ ಹೆಜ್ಜೆಯಾಗಿದೆ. ಭಾರತ ಅಂದುಕೊಂಡಿರುವುದನ್ನು ಸಾಧಿಸುವುದಕ್ಕೂ ಸಕಾಲ. ಈಗಲೇ ೭೫ ವರ್ಷಗಳ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು.
- ಕೆ.ಸುರೇಂದ್ರ, ಗ್ರಾಪಂ ಸದಸ್ಯ, ಹಲಗೂರುಮುಂಬೈ ದಾಳಿ, ಪುಲ್ವಾಮಾ ಈಗ ಪಹಲ್ಗಾಂ ದಾಳಿಯ ಹಿಂದೆ ಇರೋದು ಪಾಕಿಸ್ತಾನ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ದಾಳಿಗಳಿಂದ ಆಗಿರುವ ಸಾವು-ನೋವುಗಳು ಅಷ್ಟಿಷ್ಟಲ್ಲ. ಇದಕ್ಕೆಲ್ಲಾ ಭಾರತ ಆಪರೇಷನ್ ಸಿಂದೂರದ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಯಶಸ್ವಿಯಾಗಿಯೂ ಮುನ್ನಡೆಯುತ್ತಿದೆ. ಕೇಂದ್ರ ಸರ್ಕಾರ ಕದನ ವಿರಾಮ ಘೋಷಿಸದೆ ಪಾಕಿಸ್ತಾನದ ವಿರುದ್ಧದ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿ ಬಗ್ಗುಬಡಿಯಬೇಕು. ಭಯೋತ್ಪಾದನೆ ವಿಷಯದಲ್ಲಿ ಕಠಿಣ ನಿಲುವನ್ನು ಪ್ರದರ್ಶಿಸಬೇಕಿದೆ.
- ಎಚ್.ಎಸ್.ಮಂಜು, ಮಾಜಿ ಅಧ್ಯಕ್ಷರು, ನಗರಸಭೆ
ಪಾಕಿಸ್ತಾನದೊಂದಿಗೆ ಮಾತುಕತೆ, ಸಂಧಾನ ಇವುಗಳಿಗೆಲ್ಲಾ ಯಾವುದೇ ಬೆಲೆ ಇಲ್ಲ. ಕದನ ವಿರಾಮ ಘೋಷಿಸಿದ ಮೂರು ಗಂಟೆಯಲ್ಲೇ ಉಲ್ಲಂಘನೆ ಮಾಡಿರುವ ಪಾಕಿಸ್ತಾನದ ಸಹವಾಸವೇ ನಮಗೆ ಬೇಡ. ಅವರು ಹೇಗೆ ನೂರಾರು ಡ್ರೋನ್, ಶೆಲ್‌ಗಳನ್ನು ನಮ್ಮ ಕಡೆ ಹಾರಿಬಿಡುತ್ತಿದ್ದಾರೋ ನಮ್ಮಿಂದಲೂ ನೂರಾರು ಡ್ರೋನ್‌ಗಳು, ಕ್ಷಿಪಣಿಗಳನ್ನು ಪಾಕಿಸ್ತಾನದ ಕಡೆ ಕಳುಹಿಸಬೇಕು. ಶಾಂತಿಪ್ರಿಯ ಭಾರತವನ್ನು ಕೆಣಕಿದರೆ ಏನಾಗುತ್ತದೆಂಬುದಕ್ಕೆ ಪಾಕಿಸ್ತಾನ ಉದಾಹರಣೆಯಾಗಬೇಕು.
- ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರ, ಮಂಡ್ಯ
ಭಾರತ ಕದನ ವಿರಾಮ ಘೋಷಿಸಿದರೆ ಏನು ಸಾಧಿಸಿದಂತಾಗುತ್ತದೆ. ಯುದ್ಧದಿಂದ ಭಾರತ ಪಡೆದುಕೊಂಡಿದ್ದಾದರೂ ಏನು. ಪಾಕಿಸ್ತಾನ ಕಲಿತ ಪಾಠವಾದರೂ ಏನು. ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಆಪರೇಷನ್ ಸಿಂದೂರದ ಬಗ್ಗೆ ಹೆಮ್ಮೆ ಇದೆ. ಮೂರು ದಿನದ ಬಳಿಕ ಕದನ ವಿರಾಮಕ್ಕೆ ಮಣಿದರೆ ಸಿಂದೂರಕ್ಕೆ ಸಾರ್ಥಕತೆ ಸಿಗುವುದಿಲ್ಲ. ಈ ಸಮಯದಲ್ಲಿ ಏನಾದರೂ ಪಡೆದುಕೊಂಡರಷ್ಟೇ ಭಾರತಕ್ಕೆ ವಿಶ್ವಮಟ್ಟದಲ್ಲಿ ಗೌರವ ಹೆಚ್ಚಲಿದೆ.
- ಡಾ.ಪಿ.ಸುಮಾರಾಣಿ ಶಂಭು, ಪ್ರಾಂಶುಪಾಲರು, ಮಾಂಡವ್ಯ ಬಿಎಡ್ ಕಾಲೇಜು
ಕದನ ವಿರಾಮ ಪ್ರತೀಕಾರದ ಕ್ರಮವಲ್ಲ. ಅಮೆರಿಕ ಒತ್ತಡಕ್ಕೆ ಭಾರತ ಎಂದಿಗೂ ಮಣಿಯಬಾರದು. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕಾದರೆ ಯುದ್ಧವೊಂದೇ ಸರಿಯಾದ ಮಾರ್ಗ. ಆಪರೇಷನ್ ಸಿಂದೂರ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಮಯದಲ್ಲಿ ಕದನ ವಿರಾಮ ಎನ್ನುವುದು ಸರಿಯಲ್ಲ. ಭಾರತದ ವಿರುದ್ಧ ಇನ್ನೆಂದಿಗೂ ಸೊಲ್ಲೆತ್ತದಂತೆ ಪಾಕಿಸ್ತಾನದ ಹುಟ್ಟಡಗಿಸಿದಾಗ ಮಾತ್ರ ಭಾರತದ ಭಯೋತ್ಪಾದನಾ ವಿರೋಧಿ ಹೋರಾಟಕ್ಕೆ ಜಾಗತಿಕ ಮಟ್ಟದಲ್ಲಿ ವಿಶೇಷ ಮಾನ್ಯತೆ ದೊರಕಲಿದೆ.
- ನಟರಾಜು, ಅಧ್ಯಕ್ಷರು, ಜೀವಧಾರೆ ಟ್ರಸ್ಟ್