ಮೇ 14ಕ್ಕೆ ಎಸ್‌ಯುಸಿಐನಿಂದ ಜನ ಹೋರಾಟ: ಸಂಘಟನೆಯ ಮಂಜುಳಾ

| Published : May 11 2025, 11:45 PM IST

ಸಾರಾಂಶ

ಬೆಲೆ ಏರಿಕೆ, ಸಾರ್ವಜನಿಕ ಆರೋಗ್ಯ ಸೇವೆಗಳ ಕುಸಿತ ಸೇರಿದಂತೆ ಅನಾರೋಗ್ಯಕರ ಬೆಳವಣಿಗಳ ಖಂಡಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಮೇ 14ರಂದು ಬೆಂಗಳೂರಿನ ಸ್ವಾತಂತ್ರ್ಯಉದ್ಯಾನದಲ್ಲಿ ಬೃಹತ್ ಜನ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಯುಸಿಐ ರಾಜ್ಯ ಸಮಿತಿ ಸದಸ್ಯೆ ಎಂ.ಎನ್ ಮಂಜುಳಾ ಹೇಳಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜನೆ । 10 ಸಾವಿರ ಮಂದಿ ಭಾಗಿ ಸಾಧ್ಯತೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬೆಲೆ ಏರಿಕೆ, ಸಾರ್ವಜನಿಕ ಆರೋಗ್ಯ ಸೇವೆಗಳ ಕುಸಿತ ಸೇರಿದಂತೆ ಅನಾರೋಗ್ಯಕರ ಬೆಳವಣಿಗಳ ಖಂಡಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಮೇ 14ರಂದು ಬೆಂಗಳೂರಿನ ಸ್ವಾತಂತ್ರ್ಯಉದ್ಯಾನದಲ್ಲಿ ಬೃಹತ್ ಜನ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಯುಸಿಐ ರಾಜ್ಯ ಸಮಿತಿ ಸದಸ್ಯೆ ಎಂ.ಎನ್ ಮಂಜುಳಾ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಮೈಸೂರು, ಬೆಂಗಳೂರು, ತುಮಕೂರು, ಧಾರವಾಡ, ಕೊಪ್ಪಳ, ದಾವಣಗೆರೆ, ಬಳ್ಳಾರಿ, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ವಿಜಯನಗರ ಮೊದಲಾದ ಜಿಲ್ಲೆಗಳಲ್ಲಿ ಈಗಾಗಲೇ ಪ್ರಚಾರ, ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ. ಹೋರಾಟದ ಮುಂದುವರಿಕೆಯಾಗಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ಸಂಘಟಿಸಲಾಗಿದೆ ಎಂದರು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪರ್ಧೆಗೆ ಬಿದ್ದಂತೆ ಬೆಲೆ ಏರಿಕೆಯ ಮೂಲಕ ಜನರನ್ನು ದೋಚುತ್ತ, ಪರಸ್ಪರ ಆರೋಪ ಹೊರಿಸುತ್ತಿದ್ದಾರೆ. ಅಡುಗೆ ಅನಿಲ, ಔಷಧಿಗಳು, ವಿದ್ಯುತ್, ಹಾಲು, ಡೀಸೆಲ್, ಮೆಟ್ರೋ, ನೀರು, ಆಸ್ತಿ ತೆರಿಗೆ ಎಲ್ಲವೂ ದುಬಾರಿಯಾಗಿವೆ. ಎಲ್ಲಾ ತೆರಿಗೆಗಳ ಹೊರೆ ಹೊರುವ ನಾವು, ನಮ್ಮ ಮಕ್ಕಳ ಶಿಕ್ಷಣಕ್ಕೆ ನಾವೇ ಖರ್ಚು ಮಾಡಬೇಕಾದ, ನಮ್ಮ ಆರೋಗ್ಯದ ವೆಚ್ಚವನ್ನು ನಾವೇ ಭರಿಸಬೇಕಾದ ದುರ್ಗತಿಯನ್ನು ಅನುಭವಿಸುತ್ತಿದ್ದೇವೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನೂರಾರು ಬಾಣಂತಿಯರು ಮೃತಪಟ್ಟಿರುವ ದುರಂತ ನಮ್ಮ ಕಣ್ಣ ಮುಂದಿದೆ. ಜನರ ತೆರಿಗೆಯ ಹಣ ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ, ದೊಡ್ಡ ಗುತ್ತಿಗೆದಾರರ, ಕೆಂಪು ಗೂಟದ ರಾಜಕಾರಣಿಗಳ ಮತ್ತು ಹಿರಿಯ ಅಧಿಕಾರಿಗಳ ಜೇಬು ಸೇರುತ್ತಿದೆ ಎಂದು ದೂರಿದರು.

ಜನರ ನೈಜ ಸಮಸ್ಯೆಗಳನ್ನು ಮುನ್ನೆಲೆಗೆ ತರುವುದಕ್ಕಾಗಿ ಎಸ್‌ಯುಸಿಐ ರಾಜ್ಯ ಸಮಿತಿ ರಾಜ್ಯ ಮಟ್ಟದ ಬೃಹತ್ ಜನ ಹೋರಾಟವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿಸಿರುವ ಎಲ್ಲಾ ಬೆಲೆಗಳನ್ನು ಈ ಕೂಡಲೇ ಹಿಂತೆಗೆದುಕೊಳ್ಳಬೇಕು, ಎಲ್ಲಾ ಸರಕಾರಿ ಆಸ್ಪತ್ರೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ. ಜೊತೆಗೆ ಅವಶ್ಯಕ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಬೇಕು, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಗ್ರಾಮೀಣ ಕೃಷಿ ಕಾರ್ಮಿಕರಿಗೆ ಕೆಲಸದ ದಿನಗಳನ್ನು 200 ಕ್ಕೆ ಹೆಚ್ಚಿಸಿ ಅವರ ಕೂಲಿಯನ್ನು ರು. 600ಕೆ ನಿಗದಿಗೊಳಿಸಬೇಕು ಎಂಬುದು ಪ್ರಮುಖ ಆಗ್ರಹ ಎಂದರು.

ವಿದ್ಯುತ್ ಮಸೂದೆ-2022 (ತಿದ್ದುಪಡಿ)ನ್ನು ಹಿಂತೆಗೆದುಕೊಳ್ಳಬೇಕು, ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು,6 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರವನ್ನು ಕೂಡಲೇ ಕೈಬಿಟ್ಟು ಮೂಲಭೂತ ಸೌಲಭ್ಯ, ಶಿಕ್ಷಕ ಸಿಬ್ಬಂದಿಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಘೋಷಿಸಿ ಕನಿಷ್ಟ ವೇತನ ಪಾವತಿಸಬೇಕು. ಎಲ್ಲಾ ಇಲಾಖೆಗಳಲ್ಲಿರುವ ಗುತ್ತಿಗೆ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಶೀಘ್ರವೇ ಪಟ್ಟಾ ಒದಗಿಸಿ ಕಾಡಂಚಿನ ಊರುಗಳಲ್ಲಿ ಮಾನವ ಕಾಡುಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟಬೇಕೆಂದು ಆಗ್ರಹಿಸಿದರು. ಎಸ್‌ಯುಸಿಐನ ಕುಮುದಾ, ರವಿಕುಮಾರ್ ಇದ್ದರು.