ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
೪೮ ಹಳ್ಳಿಗಳಿಗೆ ಸೇರಿದ ಕೆಂಚಾಂಬ ದೇವಿ ವರ್ಷದ ದೊಡ್ಡ ಜಾತ್ರೆ ಕಟ್ಟುನಿಟ್ಟಿನಿಂದ ಅತ್ಯಂತ ವೈಭವ, ಭಯ, ಭಕ್ತಿಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಈ ಜಾತ್ರೆಯಲ್ಲಿ ಮಾತ್ರ ದೇವಿ ಪಾದ ಮುಟ್ಟಿ ನಮಸ್ಕರಿಸಲು ಅವಕಾವಿರುತ್ತದೆ.ಇತ್ತೀಚೆಗೆ ಆರಂಭವಾದ ಜಾತ್ರೆಗೆ ಭಾನುವಾರ ದೊಡ್ಡ ಜಾತ್ರೆ ನಡೆಯುವುದರೊಂದಿಗೆ ನಾಂದಿ ಹಾಡಲಾಯಿತು.೪೮ ಹಳ್ಳಿಗೊಳಪಡುವ ಈ ಜಾತ್ರೆ ವಿಶೇಷವೆಂದರೆ ಪ್ರತಿ ಹಳ್ಳಿಗಳಲ್ಲಿ ಕೆಂಚಮ್ಮ ದೇವಿ ಮುಖ ಧರಿಸಿ ಕೂರಿಸಿ, ಪ್ರತಿದಿನ ಸಂಜೆ ದೇವರ ಉತ್ಸವ ಮತ್ತು ಸುಗ್ಗಿ ಕುಣಿತದಿಂದ ಸಂಭ್ರಮಿಸಿದರು. ಶನಿವಾರ ರಾತ್ರಿ ಹರಿಹಳ್ಳಿ ಗ್ರಾಮದ ಮೂಲ ದೇವಸ್ಥಾನದಲ್ಲಿ ಸಪ್ತಮಾತೃಕೆಯರ ಮುಖವಾಡವನ್ನಿಟ್ಟು ರಾತ್ರಿ ೧೦ ಗಂಟೆ ವರೆಗೆ ಅಲಂಕಾರ ಮಾಡಿ ಸುಗ್ಗಿ ಕುಣಿತ ಕುಣಿದರು. ಬೆಳಗಿನ ಜಾವ ಪ್ರತಿ ಹಳ್ಳಿಗಳಲ್ಲಿ ಮಹಿಳೆಯರು ಕಳಸ ತೆಗೆದುಕೊಂಡು ಹೊಳೆ ಬಳಿ ತೆರಳಿ ಕೆಂಚಾಂಬಿಕೆ ದೇವಿಗೆ ಪೂಜೆ ಸಲಿಸಿದರು. ನಂತರ ಮೆರೆ ದೇವರನ್ನು ಕೆಂಚಾಂಬಿಕೆ ದೇವಸ್ಥಾನದವರೆಗೆ ವಾದ್ಯಗೋಷ್ಟಿಯೊಂದಿಗೆ ಮೆರವಣಿಗೆಯಲ್ಲಿಬಂದು ದೇವಸ್ಥಾನದಲ್ಲಿ ಕುಳ್ಳಿರಿಸಿದರು.ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ಮಹಾಮಂಗಳಾರತಿ ನೆರವೇರಿತು. ನಂತರ ಅನ್ನ ಬಲಿ ಸಮರ್ಪಿಸಿದರು. ನಂತರ ಭಕ್ತರಿಗೆ ದೇವಿ ಪಾದ ಮುಟ್ಟಿ ನಮಸ್ಕರಿಸಲ ಅವಕಾಶ ಕಲ್ಪಿಸಲಾಯಿತು. ರಾತ್ರಿ ೧೦ ರವರೆಗೆ ಭಕ್ತರು ದೇವಿ ಪಾದ ಮುಟ್ಟಿ ನಮಸ್ಕರಿಸಿದರು. ಪ್ರತಿ ವರ್ಷಕ್ಕಿಂತ ಈ ವರ್ಷ ಭಕ್ತರ ಸಂಖ್ಯೆ ಅತ್ಯಧಿಕವಾಗಿತ್ತು. ಜಾತ್ರೆಯಲ್ಲಿ ಮಣ್ಣಿನ ಮಡಿಕೆ ವ್ಯಾಪಾರ ಬಲು ಜೋರು. ಜಾತ್ರೆಗೆ ಬಂದ ಪ್ರತಿಯೊಬ್ಬರೂ ಮಡಿಕೆ ಕೊಂಡು ಹೋಗುವುದು ವಾಡಿಕೆಯಾಗಿದೆ. ಜಾತ್ರೆ ಪ್ರಾರಂಭವಾಗುವ ಒಂದು ವಾರ ಮೊದಲು ೪೮ ಹಳ್ಳಿಗಳಲ್ಲೂ ಸುಗ್ಗಿ ಸಾರು ಹಾಕುತ್ತಾರೆ. ಸಾರು ಹಾಕಿದ ನಂತರ ೪೮ ಹಳ್ಳಿಗಳ ವ್ಯಾಪ್ತಿಯಲ್ಲಿ ಹಸಿ ಕೊನೆ ಕಡಿಯುವಂತಿಲ್ಲ, ಮುರಿಯುವಂತಿಲ್ಲ, ಒಗ್ಗರಣೆ ಹಾಕುವಂತಿಲ್ಲ. ರೊಟ್ಟಿ ಮಾಡುವುದು, ಹೊಲಸು ಮಾಡುವುದು ನಿಷೇಧ. ಅಲ್ಲದೆ, ಗ್ರಾಮದಿಂದ ಹೊರಗಿದ್ದವರು ಹೊರಗೆ, ಊರೊಳಗಿದ್ದವರು ಹೊರಗೆ ಹೋಗುವಂತಿಲ್ಲ. ದೇವಿ ನಿಯಮ ಪಾಲಿಸದಿದ್ದರೆ ತಪ್ಪಿಗೆ ತಕ್ಕ ಶಿಕ್ಷೆ ನೀಡುವಳು ಎಂದು ಪುರಾತನ ಕಾಲದಿಂದ ನಡೆದು ಬಂದಿದೆ. ಸೋಮವಾರದಿಂದ ಪ್ರತಿ ಹಳ್ಳಿಗಳಲ್ಲಿ ಎಂದಿನ ಜೀವನ ಪ್ರಾರಂಭಿಸಿದರು.ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಸಿಮೆಂಟ್ ಮಂಜು, ವಿದಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ತಹಸೀಲ್ದಾರ್ ಮಲ್ಲಿಕಾರ್ಜುನ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ರವರು ದೇವಿ ದರ್ಶನ ಪಡೆದರು. ಪಿಐ ಮೋಹನರೆಡ್ಡಿ, ಸಬ್ ಇನ್ಸ್‌ಪೆಕ್ಟರ್ ಜನಾಬಾಯಿ ಕಡಪಟ್ಟಿ, ಕಂದಾಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆ ಹಾವಳಿ ಎದುರಾಗದಂತೆ ಮುಂಜಾಗ್ರತೆ ವಹಿಸಿದ್ದರು. ಪ್ರಧಾನ ಅರ್ಚಕರಾದ ರಾಮಸ್ವಾಮಿಯವರ ನೇತೃತ್ವದಲ್ಲಿ ಪೂಜೆ ಪುನಸ್ಕಾರಗಳು ನಡೆದವು.