ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದ ಕಾಂಗ್ರೆಸ್‌ನಿಂದ ಮಹಾದ್ರೋಹ । ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ಕರೆ
ಕನ್ನಡಪ್ರಭ ವಾರ್ತೆ ಕೋಲಾರಕೇಂದ್ರದ ಮೋದಿ ನೇತೃತ್ವದ ಸರ್ಕಾರ ಸಂಸತ್‌ನಲ್ಲಿ ಮಂಡಿಸಿದ್ದ ‘ನಾರಿಶಕ್ತಿ ವಂದನ್’ಮಸೂದೆಗೆ ಅಡ್ಡಿಪಡಿಸುವ ಮೂಲಕ ದೇಶದ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದು ಮಹಾದ್ರೋಹ ಬಗೆದಿರುವ ಭ್ರಷ್ಟ ಕಾಂಗ್ರೆಸ್ ಮತ್ತವರ ಬೆಂಬಲಿಗ ಪಕ್ಷಗಳನ್ನು ಚುನಾವಣೆಯಲ್ಲಿ ಬಹಿಷ್ಕರಿಸಲು ಬಿಜೆಪಿ ಮುಖಂಡರು ಕರೆ ನೀಡಿದರು.ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಸಂಸದ ಎಸ್.ಮುನಿಸ್ವಾಮಿ ಪತ್ನಿ ಶೈಲಜ ಮುನಿಸ್ವಾಮಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅರುಣಮ್ಮ ಮತ್ತಿತರರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಮಾನವ ಸರಪಳಿ ನಿರ್ಮಿಸಿದ್ದಲ್ಲದೇ ರಾಹುಲ್ ಗಾಂಧಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಘೋಷಣೆ ಕೂಗಿದರು.ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. ೩೩ರಷ್ಟು ಮೀಸಲಾತಿ ವಿಧೇಯಕ ಮಂಡಿಸಲಾಗಿದ್ದು, ಈ ವಿಧೇಯಕ ಸೋಲಿಗೆ ಪ್ರಮುಖ ಪಾತ್ರ ವಹಿಸಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಮಹಿಳೆಯರು ಹೋರಾಟ ನಡೆಸುವುದು ಮಾತ್ರವಲ್ಲ ಮುಂದಿನ ಚುನಾವಣೆಯಲ್ಲಿ ಬಹಿಷ್ಕರಿಸಬೇಕು ಎಂದು ಕರೆ ನೀಡಿದರು.ಮಹಿಳೆಯರನ್ನು ಅಧಿಕಾರದಿಂದ ದೂರವಿಡಬೇಕು ಎಂಬುದು ಕಾಂಗ್ರೆಸ್‌ನ ಸಿದ್ಧಾಂತವಾಗಿದೆ, ಇಂತಹ ಸಂದರ್ಭದಲ್ಲಿ ಮಹಿಳೆಯರು ಏಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಪ್ರಶ್ನಿಸಿದ ಅವರು, ಹೆತ್ತತಾಯಿಗೂ ಗೌರವ ನೀಡದ ಸಂಸ್ಕೃತಿ ಈ ಕಾಂಗ್ರೆಸ್ಸಿಗರದ್ದು ಎಂದು ಖಂಡಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ದಶಕಗಳ ಕಾಲದಿಂದ ಮಹಿಳಾ ಮೀಸಲಾತಿ ಮಸೂದೆ ಮೂಲೆ ಗುಂಪು ಮಾಡಿದ್ದ ಕಾಂಗ್ರೆಸ್ ಪಕ್ಷ ಇದೀಗ ಪ್ರಧಾನಿ ನರೇಂದ್ರ ಮೋದಿ ಇಚ್ಛಾಶಕ್ತಿ ಹಾಗೂ ಮಹಿಳೆಯರ ಮೇಲಿನ ಗೌರವದಿಂದ ಸಂಸತ್‌ನಲ್ಲಿ ನಾರಿಶಕ್ತಿ ವಂದನ್ ಮಸೂದೆ ಮೂಡಿಸಿದಾಗ ಅದನ್ನು ವಿರೋಧಿಸುವ ಮೂಲಕ ತಮ್ಮ ಕೀಳು ಮಟ್ಟದ ರಾಜಕೀಯ ಸಂಸ್ಕೃತಿಗೆ ಸಾಕ್ಷಿಯಾಗಿದ್ದಾರೆ ಎಂದು ಟೀಕಿಸಿದರು. ಮಹಿಳಾ ಮೀಸಲಾತಿಯ ಬಿಲ್ ವಿರೋಧಿಸಿರುವ ಕಾಂಗೇಸ್ ಪಕ್ಷದ ವಿರುದ್ಧ ರಾಜ್ಯ ಮಟ್ಟದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆಯನ್ನು ನಡೆಸಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಮಹಿಳೆಯರಿಗಾದ ಅನ್ಯಾಯದ ವಿರುದ್ಧ ಎಚ್ಚೆತ್ತುಕೊಳ್ಳುವಂತೆ ಮಹಿಳೆಯರವನ್ನು ಸಂಘಟಿಸಿ ಹೋರಾಟ ಮಾಡಲಾಗುವುದು ಎಂದರು.ಸ್ತ್ರೀ ಸ್ವಾಭಿಮಾನಕ್ಕೆ ಅಪಚಾರ:ಮಾಜಿ ಸಂಸದ ಎಸ್. ಮುನಿಸ್ವಾಮಿ ಅವರ ಪತ್ನಿ ಶೈಲಜಾ ಮುನಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳ ಇಂಡೀ ಕೂಟ ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನ ಹೊಂದಿರುವ ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ಖಂಡಿಸಿದರು.ಪ್ರಧಾನಿ ಮೋದಿಯವರು ‘ನಾರಿಶಕ್ತಿ ವಂದನ್’ ಮಹಿಳೆಯರಿಗೆ ವಂದಿಸುವ ಪ್ರತೀಕವಾಗಿ ಮಸೂದೆ ಮಂಡಿಸಿದ್ದು, ಬಿಜೆಪಿಯ ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ಆದರೆ ಕಾಂಗ್ರೆಸ್ ಮುಖಂಡರು ಇದಕ್ಕೆ ಧಕ್ಕೆ ತಂದು ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದರು. ಇದೇ ಕಾಂಗ್ರೆಸ್ ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದರು.ಮಹಿಳೆಯರಿಂದ ನಿರಂತರ ಹೋರಾಟ
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅರುಣಮ್ಮ ಮಾತನಾಡಿ, ಮಹಿಳೆಯರು ಕಾಂಗ್ರೆಸ್ ಮಾಡಿರುವ ಈ ಮಹಾದ್ರೋಹದ ಕುರಿತು ಎಚ್ಚೆತ್ತುಕೊಳ್ಳಬೇಕು, ಬೀದಿಗಿಳಿದು ಹೋರಾಟ ಮಾಡುವ ಸಂಕಲ್ಪ ಮಾಡಬೇಕು, ನಿಮ್ಮೊಂದಿಗೆ ಬಿಜೆಪಿ ಮಹಿಳಾ ಮೋರ್ಚಾ ಸದಾ ನಿಲ್ಲುತ್ತದೆ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಮಮತಮ್ಮ, ಅಶ್ವಿನಿ, ಗೀತಾ, ಶ್ವೇತಾ, ನಗರಸಭೆ ಮಾಜಿ ಸದಸ್ಯ ಪ್ರವೀಣ್‌ಗೌಡ, ಬಿಜೆಪಿ ಮುಖಂಡರಾದ ವಿಜಯಕುಮಾರ್, ಎಂಪಿ.ನಾರಾಯಣಸ್ವಾಮಿ, ಅಪ್ಪಿನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ಒಬಿಸಿ ಮೋರ್ಚಾ ಬಾಲಾಜಿ, ತಿಮ್ಮರಾಯಪ್ಪ, ಮಾಲೂರು ಕೃಷ್ಣಪ್ಪ, ಮುಳಬಾಗಿಲು ಮಂಜುನಾಥಗೌಡ, ಶಿವಣ್ಣ, ಲಕ್ಷ್ಮಣಗೌಡ, ಸುರೇಶ್,ಕಿರಣ್,ಬಂಗಾರಪೇಟೆ ಮಹೇಶ್, ಮಾಲೂರು ಅಪ್ಪಿರಾಜು, ಸಾ.ಮಾ. ಅನಿಲ್‌ಬಾಬು ಇದ್ದರು.