ಕನ್ನಡಪ್ರಭ ವಾರ್ತೆ ಶಿರಾ ನಿಷ್ಠೆ, ಪ್ರಾಮಾಣಿಕತೆ ಮನುಷ್ಯನ ಜೀವನದಲ್ಲಿ ಅತ್ಯವಶ್ಯಕ, ದ್ವೇಷ ಅಸೂಯೆ ಬಿಟ್ಟು ಪ್ರೀತಿ ವಿಶ್ವಾಸದೊಂದಿಗೆ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಿದಾಗ ಮನುಷ್ಯ ಜನ್ಮ ಸಾರ್ಥಕತೆ ಕಾಣಲಿದೆ. ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.ಅವರು ಸೋಮವಾರ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಕ್ಯಾದಿಗುಂಟೆ ಗ್ರಾಮದಲ್ಲಿ ೩ ಕೋಟಿ ರುಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಬುನಾದಿ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಗುರು ಹಿರಿಯರನ್ನು ಗೌರವಿಸುವಂತಹ ಸಂಸ್ಕಾರವನ್ನು ಕಲಿಸಿದಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ. ಪ್ರಸಿದ್ಧ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಮಹಿಳೆಯರು ಕೂಡ ಆರ್ಥಿಕ ಸಹಕಾರ ನೀಡಬೇಕು. ಪ್ರತಿಷ್ಠೆ ಬದಿಗಿಟ್ಟು ಭವ್ಯ ದೇಗುಲ ನಿರ್ಮಾಣ ಮಾಡಲೇಬೇಕೆಂಬ ಸಂಕಲ್ಪದೊಂದಿಗೆ ಮುನ್ನಡೆದಾಗ ಯಶಸ್ಸು ತಾನಾಗಿಯೇ ಲಭಿಸಲಿದೆ. ನೂತನ ದೇವಸ್ಥಾನ ನಿರ್ಮಾಣಕ್ಕೆ ಭಕ್ತರು ಹೆಚ್ಚಿಗೆ ದೇಣಿಗೆ ನೀಡುವ ಮೂಲಕ ಭವ್ಯ ದೇಗುಲ ನಿರ್ಮಾಣಕ್ಕೆ ಸಹಕರಿಸಿ ಎಂದರು.
ಗೃಹ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ.ಕೆ. ನಾಗಣ್ಣ ಮಾತನಾಡಿ ಅಳುನವರು ಕುಟುಂಬ ಹೃದಯ ಶ್ರೀಮಂತಿಕೆ ಉಳ್ಳವರು, ನಾನು ಕೂಡ ಅಳುನವರ ಅಳಿಯ ಎಂಬುದು ಹೆಮ್ಮೆ ಎನಿಸುತ್ತದೆ. ದೈವ ಪ್ರೇರಣೆಯಿಂದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ನಿರ್ಮಾಣ ಕೆಲಸ ಕೈಗೂಡಿದ್ದು, ಎಲ್ಲರೂ ಗುಡಿ ಕಟ್ಟಲೇ ಬೇಕೆಂಬ ಸಂಕಲ್ಪದೊಂದಿಗೆ ಮುನ್ನಡೆದಾಗ ದೇವಸ್ಥಾನ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ. ಸಮಾಜ ಉತ್ತಮ ಮಾರ್ಗದಲ್ಲಿ ನಡೆಯಲು ಮಠಮಾನ್ಯಗಳು ಹಾಗೂ ಶ್ರೀಗಳ ಸಲಹೆ ಸಹಕಾರ ಅಗತ್ಯ ಎಂದರು.ಈ ಸಂದರ್ಭದಲ್ಲಿ ಶ್ರೀ ರಂಗನಾಥ ಸ್ವಾಮಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ವಿ.ನಾಗರಾಜು ಉಪಾಧ್ಯಕ್ಷ ಅಂಬರೀಶ್, ಕಾರ್ಯದರ್ಶಿ ಟಿ.ರಮೇಶ್, ಖಜಾಂಚಿ ಓ.ಮೂಡ್ಲಪ್ಪ, ಮುಖಂಡರಾದ ಪ್ರಕಾಶಣ್ಣ, ಟಿ. ರಂಗನಾಥ್, ಶ್ರೀನಿವಾಸ್, ದೇವರಾಜು, ರಾಜು ಕೆಎಂಜಿ ನವೀನ್ ,ರಾಜಶೇಖರ್, ಸುರೇಶ್, ರಂಗನಾಥ್, ನಟರಾಜು, ರಂಗಸ್ವಾಮಿ, ನಾಗರಾಜು , ಮೂಡಲಗಿರಿಯಪ್ಪ, ಪಾಂಡುರಂಗ, ಗೋವಿಂದರಾಜು, ಗಿರೀಶ್ ಸೇರಿದಂತೆ ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರು, ಭಕ್ತರು ಹಾಜರಿದ್ದರು.