ಹಾವೇರಿ: ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ಕರ್ತವ್ಯನಿಷ್ಠೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ಶಾಲಾ ಸಂಸತ್ ಮಹತ್ವದ ವೇದಿಕೆಯಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜ ಇಚಂಗಿ ಹೇಳಿದರು.

ನಗರದ ಬಿಎಂ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ನಡೆದ ಶಾಲಾ ಸಂಸತ್ ಉದ್ಘಾಟನೆ ಹಾಗೂ ನೂತನ ಶಾಲಾ ಸಂಸತ್ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕರ್ತವ್ಯ, ಪ್ರಾಮಾಣಿಕತೆ ಹಾಗೂ ಮಾನವೀಯತೆಯಿಂದ ಬದುಕಿದಾಗ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯ. ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯಗಳನ್ನು ವಿದ್ಯಾರ್ಥಿಗಳು ಅರಿತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಾಲಾ ಸಂಸತ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ವ್ಯಕ್ತಿತ್ವ ವಿಕಸನ, ಜವಾಬ್ದಾರಿ ಮತ್ತು ಸೇವಾ ಮನೋಭಾವ ಬೆಳೆಸಲು ನೆರವಾಗಲಿದ್ದು, ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಸಂಸತ್ತಿನ ನಾಯಕನಾಗಿ ತರುಣ ಬಂಕಾಪುರ, ನಾಯಕಿಯಾಗಿ ಸಿರಿ ಬನ್ನಿಹಳ್ಳಿ, ಉಪನಾಯಕನಾಗಿ ಸುಹಾಸ್ ಹೊಸಮನಿ ಹಾಗೂ ಉಪನಾಯಕಿಯಾಗಿ ಸಿರಿ ಅಳ್ಳಪ್ಪನವರ ಸೇರಿದಂತೆ ವಿವಿಧ ವಿಭಾಗಗಳ ಪದಾಧಿಕಾರಿಗಳಿಗೆ ಅತಿಥಿಗಳು ಪ್ರಮಾಣವಚನ ಬೋಧಿಸಿದರು.

ರಜನಿ ಸಿದ್ದರಾಜ ಕಲಕೋಟಿ, ಶಿಕ್ಷಕ ಸಿಬ್ಬಂದಿ ಇದ್ದರು. ಶಿಕ್ಷಕಿ ಕಾವ್ಯಾ ಸ್ವಾಗತಿಸಿದರು. ಡಾ. ಸಂತೋಷ ಕೃಷ್ಣಾಪುರ ವಂದಿಸಿದರು. ಸುನೀತಾ ನಿರ್ವಹಿಸಿದರು.