ಕನ್ನಡಪ್ರಭ ವಾರ್ತೆ ತುಮಕೂರು ಸಾಮಾಜಿಕ ಬದಲಾವಣೆಗೆ ಬಸವಣ್ಣನವರು ತಮ್ಮ ವಚನಗಳ ಮೂಲಕ ಕೈಗೊಂಡ ವಿಚಾರಧಾರೆ ಭಾರತ ಸಂವಿಧಾನದಲ್ಲಿ ಅಡಕವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ‌.ಎನ್.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ತುಮಕೂರಿನ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ತುಮಕೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಹಾಗೂ ತುಮಕೂರು ಜಿಲ್ಲೆಯ ಸಮಸ್ತ ವೀರಶೈವ ಲಿಂಗಾಯತ ಸಮಾಜದ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

12 ನೇ ಶತಮಾನದಲ್ಲಿ ಸಾಮಾಜಿಕ ಅಸಮತೋಲನ ನಿವಾರಿಸುವ ಬಸವಾದಿ ಶರಣರ ವಚನ ಕ್ರಾಂತಿಯಲ್ಲಿ ಜಾತ್ಯತೀತತೆ, ಸಮಸಮಾಜ ನಿರ್ಮಾಣ, ಸ್ತ್ರೀ ಸಂವೇದಿ ಧೋರಣೆಯಂತಹ ವಿಚಾರಧಾರೆಗಳು ಭಾರತ ಸಂವಿಧಾನದಲ್ಲಿ ಅಡಕವಾಗಿವೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಯಥಾವತ್ ಅನುಸರಣೆ ಮೂಲಕ ಬಸವಾದಿ ಶರಣರಿಗೆ ಗೌರವ ಸಲ್ಲಿಸಬೇಕು ಎಂದರು.ಶರಣರ ಅಗ್ರಪಂಕ್ತಿಯಲ್ಲಿರುವ ಬಸವಣ್ಣನವರ ಕಳಬೇಡ ಕೊಲಬೇಡ ವಚನವೂ ಸಂವಿಧಾನದ ಪೀಠಿಕೆ ಹಾಗೂ ಮೂಲಭೂತ ತತ್ವಗಳಿದ್ದಂತಿದೆ. ಈ ಹಿನ್ನೆಲೆಯಲ್ಲಿ ಅವರ ವಚನಗಳನ್ನು ಹಾಗೂ ಭಾರತದ ಸಂವಿಧಾನವನ್ನು ಅನುಸರಿಸುವ ಮೂಲಕ ಸಾಮಾಜಿಕ ಸುಧಾರಣೆಗೆ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕು. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ತುಮಕೂರು ತಹಸೀಲ್ದಾರ್ ರಾಜೇಶ್ವರಿ, ಪಾಲಿಕೆ ಉಪಾಯುಕ್ತೆ ಸುಪ್ರಿಯಾ ಬಣಕಾರ್ ಸೇರಿದಂತೆ ಲಿಂಗಾಯತ ಸಮುದಾಯದ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.