ಕೊಟ್ಟೂರು: ಎಲ್ಲ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದಿರುವ ಮಾದಿಗ ಸಮುದಾಯದಲ್ಲಿ ಸಂಘಟನೆ ಅಗತ್ಯವಾಗಿದ್ದು, ಸಮುದಾಯದ ಪ್ರತಿಯೊಬ್ಬರೂ ಮಾದರ ಮಹಾಸಭಾದ ಸದಸ್ಯತ್ವ ಪಡೆಯಬೇಕು ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ನಿಂಬಗಲ್ ರಾಮಕೃಷ್ಣ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ರಾಜ್ಯ ಮಾದಾರ ಮಹಾಸಭಾದ ಸದಸ್ಯತ್ವ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು. ದೇಶವನ್ನು ಆಳಿ ರಾಜ ಮನೆತನದವರಾದ, ಭೂ ಮಂಡಲದ ಮೂಲ ನಿವಾಸಿಗಳಾದ ನಾವು ನಮ್ಮ ಜಾತಿ ಹೆಸರನ್ನು ಹೇಳಲು ಹಿಂಜರಿಯಬಾರದು. ನೂರಾರು ವರ್ಷಗಳಿಂದ ಎಲ್ಲ ಕ್ಷೇತ್ರಗಳಲ್ಲಿ ತುಳಿತಕ್ಕೊಳಗಾಗಿರುವ ನಾವು ಸಂಘಟಿತರಾಗುವುದು ಅತ್ಯವಶ್ಯವಾಗಿದೆ. ಸದಸ್ಯತ್ವ ಪಡೆದು ನೋಂದಣಿಯ ಕಾರ್ಡ್ ಹೊಂದಬೇಕು. ಸದಸ್ಯತ್ವ ಅಭಿಯಾನದಲ್ಲಿ ಎಲ್ಲರೂ ಒಟ್ಟಾಗಿ ಜಾಗೃತಿ ಮೂಡಿಸಿ ಸಂಘಟನೆಯನ್ನು ಪ್ರಬಲಗೊಳಿಸಬೇಕು ಎಂದರು.ಜಿಲ್ಲಾ ಕಾರ್ಯದರ್ಶಿ ಬದ್ದಿ ಮರಿಸ್ವಾಮಿ ಮಾತನಾಡಿ, ನಮ್ಮ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಶಾಲೆ-ಕಾಲೇಜುಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು. ರಾಜ್ಯಾದ್ಯಂತ ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ನಿಲಯಗಳನ್ನು ತೆರೆಯಬೇಕಾಗಿದೆ. ಯುಪಿಎಸ್, ಕೆಪಿಎಸ್‌ಸಿ ಸೇರಿ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ತೋರಲು ಉತ್ತಮ ತರಬೇತಿ ಕೇಂದ್ರಗಳನ್ನು ತೆರೆಯುವುದು ಅವಶ್ಯವಿದೆ. ಮಹಾಸಭಾದ ಮೂಲ ಉದ್ದೇಶದಂತೆ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಸದಸ್ಯತ್ವ ನೋಂದಣಿ ಮಾಡಿಸುವೆ ಎಂದರು.
ಮಹಾಸಭಾದ ತಾಲೂಕು ಅಧ್ಯಕ್ಷ ಕನ್ನಾಕಟ್ಟಿ ಶಿವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಮುಖಂಡರಾದ ಹಡಗಲಿ ಪುತ್ರೇಶ್, ಜಿಲ್ಲಾ ಉಪಾಧ್ಯಕ್ಷ ಎಚ್. ಪೂಜಪ್ಪ, ಖಜಾಂಚಿ ದುರೇಶ, ವಿಶಾಲಾಕ್ಷಿ ರಾಜಣ್ಣ, ಬೇವೂರು ಕೊಟ್ರೇಶ್, ಅಕ್ಷಯ್‌ಕುಮಾರ, ರಾಂಪುರ ಶ್ರೀನಿವಾಸ, ಪೂಜಾರ್ ಅಜ್ಜಯ್ಯ, ಗುಲಾಲಿ ದುರುರೇಶ, ಹನುಮಂತ, ಮಹೇಶ್, ಪರುಸಪ್ಪ, ರಾಜಣ್ಣ, ಕೊಟ್ರೇಶ್, ಶಂಕರಪ್ಪ, ಸುರೇಶ್, ರಾಮಣ್ಣ ಇತರರು ಇದ್ದರು.