ದುರ್ಬಲರಿಗೆ ಶಕ್ತಿ ತುಂಬುವುದೇ ಸಂಘಟನೆ: ಮಾಧುಸ್ವಾಮಿ

| Published : Aug 26 2024, 01:40 AM IST

ದುರ್ಬಲರಿಗೆ ಶಕ್ತಿ ತುಂಬುವುದೇ ಸಂಘಟನೆ: ಮಾಧುಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನೊಳಂಬ ವೀರಶೈವ ಲಿಂಗಾಯತ ಸಮಾಜದ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿ ಪ್ರತಿಯೊಬ್ಬರನ್ನೂ ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಕೆಲಸವಾಗಲಿ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ನೊಳಂಬ ವೀರಶೈವ ಲಿಂಗಾಯತ ಸಮಾಜದ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿ ಪ್ರತಿಯೊಬ್ಬರನ್ನೂ ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಕೆಲಸವಾಗಲಿ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘದ ಉದ್ಘಾಟನೆ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಾವಣಗೆರೆಯಲ್ಲಿ ನೊಳಂಬ ವೀರಶೈವ ಲಿಂಗಾಯತ ಸಮಾಜದ ಸಂಘವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ. ಸಂಘ ಯಾರ ವಿರುದ್ಧವಾಗಿ, ಪರ್ಯಾಯವಾಗಿ ಅಸ್ತಿತ್ವಕ್ಕೆ ತರುತ್ತಿಲ್ಲ. ಎಲ್ಲ ಸಮಾಜದವರೊಂದಿಗೆ ಸಾಮರಸ್ಯ ಬೆಸೆದುಕೊಂಡು ಸಾಗುವುದು ಶರಣ ಧರ್ಮ. ಎಲ್ಲ ಸಮಾಜದವರೊಂದಿಗೆ ಒಂದಾಗಿ ಮುಂದೆ ಸಾಗಬೇಕು. ಶಕ್ತಿ ಇಲ್ಲದವರಿಗೆ ಶಕ್ತಿ ತುಂಬುವುದೇ ನಿಜವಾದ ಸಂಘಟನೆ ಎಂದು ತಿಳಿಸಿದರು.

ಪ್ರತಿಯೊಬ್ಬರೂ ಸಮಾಜದಲ್ಲಿ ಸ್ವಾಭಿಮಾನದಿಂದ, ಯಾರ ಹಂಗಿನಲ್ಲೂ ಇಲ್ಲದೆ ಶಕ್ತಿಶಾಲಿಯಾಗಿ ಬೆಳೆಯಲು ಶಿಕ್ಷಣ ಅತಿ ಅಗತ್ಯ. ಬರೀ ಉದ್ಯೋಗ ಸಂಪಾದನೆ ದೃಷ್ಟಿಯಿಂದ ಶಿಕ್ಷಣ ಪಡೆಯಬಾರದು. ಅಂಕಗಳಿಗಾಗಿಯೇ ಓದಬಾರದು. ಪ್ರತಿಯೊಂದನ್ನೂ ಅರ್ಥ ಮಾಡಿಕೊಂಡು ಓದಿದಾಗ ಮಾತ್ರ ಜೀವನದಲ್ಲಿ ಯಶಸ್ಸು ದೊರೆಯಲು ಸಾಧ್ಯ. ಓದಿ ಪರೀಕ್ಷೆ ಬರೆಯುವುದಕ್ಕಿಂತಲೂ ಅರ್ಥ ಮಾಡಿಕೊಂಡು ಬರೆದಲ್ಲಿ ನೀಟ್, ಸಿಇಟಿ ಹೀಗೆ ಎಲ್ಲದರಲ್ಲೂ ಯಶ ದೊರೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಡಾ. ಈ.ವಿರೂಪಾಕ್ಷಪ್ಪ, ನೊಳಂಬ ಸಮಾಜದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಬಹುದಿನಗಳ ನಂತರ ಸಂಘ ಅಸ್ತಿತ್ವಕ್ಕೆ ತರಲಾಗುತ್ತಿದೆ. ವಿದ್ಯಾಕೇಂದ್ರ, ವಿದ್ಯಾರ್ಥಿ ನಿಲಯ, ಬಡ ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಅನುಕೂಲಕ್ಕಾಗಿ ವಿದ್ಯಾರ್ಥಿ ವೇತನ ನಿಧಿ ಸ್ಥಾಪನೆ, ಉಚಿತ ಶಿಕ್ಷಣ, ಸಮುದಾಯ ಭವನ ನಿರ್ಮಾಣ ಇತರೆ ಸಾಮಾಜಿಕ ಕಾರ್ಯ ಚಟುವಟಿಕೆ ಜೊತೆಗೆ ಕೇಂದ್ರ, ರಾಜ್ಯ ಸರ್ಕಾರದಿಂದ ದೊರೆಯುವ ಸೌಲಭ್ಯ ಒದಗಿಸುವ ಇತರೆ ಕಾರ್ಯಗಳ ಉದ್ದೇಶದೊಂದಿಗೆ ಸಂಘ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

ಹಳೇಬೀಡಿನ ಶ್ರೀ ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಡಾ.ಅಶೋಕ ವಿ.ಪಾಳೇದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎನ್. ಕೆಂಪೇಗೌಡರ, ಎಂ.ಸಿ. ಭುವನೇಶ್ವರ, ಡಾ. ಬಿ.ಸಿ. ರಾಕೇಶ, ಜಿ.ಎಂ.ರುದ್ರಗೌಡ, ಟಿ.ಎ. ಕುಸಗಟ್ಟಿ, ಎನ್.ಪಿ. ಮೌನೇಶಪ್ಪ, ಡಾ.ಮಂಜುನಾಥ ಪಾಟೀಲ್, ಸತೀಶ ಸಣ್ಣಗೌಡ ಹಿಂಡೇರ್, ಡಾ. ಎನ್.ಆರ್. ದಿನೇಶಕುಮಾರ ಇತರರು ಇದ್ದರು. ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ 49 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.