ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಉಪನೋಂದಣಾ ಕಚೇರಿಯಲ್ಲಿ ಎರಡ್ಮೂರು ಮಂದಿ ಸರ್ಕಾರಿ ನೌಕರರು ಮಾತ್ರ ಕರ್ತವ್ಯನಿರ್ವಹಿಸುತ್ತಿದ್ದಾರೆ. ಬಹುತೇಕ ಖಾಸಗಿ ನೌಕರರು ತುಂಬಿತುಳುಕುತ್ತಿದೆ. ಕಚೇರಿಯಲ್ಲಿರುವ ಅಮೂಲ್ಯ ದಾಖಲಾತಿಗಳು ಕಳುವಾದರೆ ಹೊಣೆಯಾರು ಎಂಬ ಪ್ರಶ್ನೆ ಎದುರಾಗಿದೆ.ಈ ಕುರಿತು ರೈತ ಮುಖಂಡ ಕಿರಂಗೂರು ಪಾಪು ಪತ್ರಿಕಾ ಹೇಳಿಕೆ ನೀಡಿ, ಕೋಟ್ಯಂತರ ರು.ರಿಜಿಸ್ಟ್ರರ್, ಕ್ರಯ, ಭೋಗ್ಯ ವಗೈರೆ, ಅಮೂಲ್ಯ ಹಳೇ ಕ್ರಯಪತ್ರಗಳಿಂದ ಹಾಗೂ ಇಸಿ, ಮಾಡ್‌ಗೇಜ್ ಮಾಡಿಸಲು ದಿನನಿತ್ಯ ರೈತರು, ಸಾರ್ವಜನಿಕರು ಬರುತ್ತಾರೆ. ಆದರೆ, ಕಚೇರಿಯಲ್ಲಿ ಖಾಸಗಿ ನೌಕರರೇ ಹೆಚ್ಚಾಗಿದ್ದು ಇವರದೇ ಕಾರುಬಾರು. ಇವರಿಂದ ಭ್ರಷ್ಟಾಚಾರ ತುಂಬಿತುಳುಕುತ್ತಿದೆ ಎಂದು ದೂರಿದ್ದಾರೆ.
ಖಾಸಗಿಯವರ ನೇಮಕಾತಿಗೆ ಯಾರು ಆದೇಶ ಕೊಟ್ಟಿದ್ದಾರೆ, ಸಂಬಳ ನೀಡುತ್ತಾರೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಬೇಕು. ಕಚೇರಿಯಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಉಪನೋಂದಣಾಧಿಕಾರಿ ಮಂಜು ದರ್ಶಿನಿ ರೈತರ, ಸಾರ್ವಜನಿಕರ ಸಮಸ್ಯೆ ಆಲಿಸಲು ಸೌಜನ್ಯ ತೋರುತ್ತಿಲ್ಲ. ಖಾಸಗಿ ನೌಕರರು ಬಾಸ್‌ಗಳಂತೆ ವರ್ತಿಸುತ್ತಾರೆ ಎಂದು ಆರೋಪಿಸಿದ್ದಾರೆ.ಕಚೇರಿಯಲ್ಲಿ ಸೂಕ್ತ ಭದ್ರತೆ ಇಲ್ಲ. ಕೋಟ್ಯಂತರ ರು.ಗಳ ವಹಿವಾಟು ನಡೆಯುವ ಸ್ಥಳದಲ್ಲಿ ಒಂದು ಸಿ.ಸಿ.ಕ್ಯಾಮೆರಾ ಇಲ್ಲ. ಕಡತಗಳಿಗೆ ಸರ್ಕಾರಿ ನೌಕರರಿಂದ ಭದ್ರತೆ ವ್ಯವಸ್ಥೆ ಇಲ್ಲ. ಅಮೂಲ್ಯ ದಾಖಲೆಗಳನ್ನು ಖಾಸಗಿ ನೌಕರರ ಕೊಟ್ಟುಬಿಟ್ಟಿದ್ದಾರೆ. ಇವರು ರಿಯಲ್ ಎಸ್ಟೇಟ್ ಉದ್ಯಮಿಗಳು, ರಾಜಕಾರಣಿಗಳು, ಅವರ ಹಿತ ಕಾಯುವವರಿಗೆ ಕೂಡಲೇ ಬೇಕಾದ ಡಾಕ್ಯುಮೆಂಟನ್ನು ಕ್ಷಣ ಮಾತ್ರದಲ್ಲೆ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.
ಬಡ ರೈತರು, ಸಾರ್ವಜನಿಕರು ಅರ್ಜಿ ಕೊಟ್ಟರೆ, ಮಾಹಿತಿ ಕೇಳಿದರೆ ಅವರಿಗೆ ಒಂದಲ್ಲಾ ಒಂದು ಸಬೂಬು ಹೇಳಿ ಸಾಗಿಹಾಕುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಖಾಸಗಿ ಅಥವಾ ಸರ್ಕಾರಿ ನೌಕರರು ಯಾರು ಎಂಬುದೇ ಗೊತ್ತಾಗುವುದಿಲ್ಲ. ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದೆ. ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿದ್ದಾರೆ.ಹಲವು ವರ್ಷಗಳಿಂದ ಇರುವ ಉಪನೋಂದಣಾಧಿಕಾರಿ ವರ್ಗಾವಣೆ ಮಾಡಬೇಕು. ಮೂಲ ಸೌಕರ್ಯ ಒದಗಿಸಬೇಕು. ಈ ಬಗ್ಗೆ ಶಾಸಕರು, ಜಿಲ್ಲಾ ನೋಂದಣಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೂಡಲೇ ಕಂದಾಯ ಸಚಿವ ಕೃಷ್ಣಭೈರೇಗೌಡ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.