ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪಾರಂಪರಿಕ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ತನ್ನ ನೀತಿ ನಿರ್ಧರಿಸಿ ಕಾನೂನು ಮೂಲಕ ಅವರ ಸಂರಕ್ಷಣೆಗೆ ಮುಂದಾಗಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ತಿಳಿಸಿದರು.ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಭಾರತೀಯ ವೈದ್ಯಕೀಯ ಮಾನವಶಾಸ್ತ್ರ ಸಂಘವು ಶನಿವಾರ ಆಯೋಜಿಸಿದ್ದ ಭಾರತದ ಜನಾಂಗಗಳಿಗೆ ಸಂಬಂಧಿಸಿದಂತೆ ಪಾರಂಪರಿಕ ವೈದ್ಯ ಪದ್ಧತಿಗಳ ಬಗ್ಗೆ ನಡೆದ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ನಶಿಸುತ್ತಿರುವ ಗಿಡಮೂಲಿಕೆಗಳ ವೈದ್ಯ ಪದ್ಧತಿಗಳ ದಾಖಲೀಕರಣ ಅಗತ್ಯವಾಗಿದ್ದು, ಮಾನವಶಾಸ್ತ್ರಜ್ಞರು ಈ ಕೆಲಸದಲ್ಲಿ ತೊಡಗಿಸಬೇಕಾಗಿದೆ. ಈಗಾಗಲೇ ಭಾರತ ಸರ್ಕಾರ ಭಾರತೀಯ ಜ್ಞಾನ ಪದ್ಧತಿಗಳ ಮೇಲೆ ಸಂಶೋಧನೆಗೆ ಒತ್ತು ನೀಡುತ್ತಿದೆ ಅಲ್ಲದೆ, ಅನುದಾನವನ್ನು ಕೊಡುತ್ತಿದೆ ಎಂದರು.ಸಮ್ಮೇಳನ ಸಂಚಾಲನಾ ಸಮಿತಿಯ ಅಧ್ಯಕ್ಷ ಡಾ.ಎಚ್. ಕೃಷ್ಣಭಟ್ಟ ಮಾತನಾಡಿ, ಬಹುಶಾಸ್ತ್ರೀಯ ವೈದ್ಯಕೀಯ ವ್ಯವಸ್ಥೆಯಲ್ಲಿ ಪಾರಂಪರಿಕ ವೈದ್ಯರ ಪಾತ್ರ ಪಾರಂಪರಿಕ ವೈದ್ಯ ಪದ್ಧತಿಯ ಅಧ್ಯಯನ ಸಂಶೋಧನಾ ವಿಧಿ ವಿಧಾನಗಳ ಬಗ್ಗೆ, ಪಾರಂಪರಿಕ ವೈದ್ಯಪದ್ಧತಿಗೆ ವೈಜ್ಞಾನಿಕ ಮಾನ್ಯತೆ ನೀಡುವ ಬಗ್ಗೆ ಸಂಶೋಧನಾ ಪ್ರಬಂಧಗಳು 3 ದಿನಗಳಲ್ಲಿ ಪ್ರಸ್ತುತಿಗೊಳ್ಳಲಿವೆ ಎಂದರು.
ಸೀಮಾ ಅಧ್ಯಕ್ಷ ಡಾ.ಪಿ.ಸಿ. ಜೋಶಿ ಮಾತನಾಡಿ, ಜಾಮನಗರದಲ್ಲಿ ಸ್ಥಾಪಿತವಾದ ವಿಶ್ವ ಸ್ವಾಸ್ಥ್ಯ ಸಂಘಟನೆಯ ಪಾರಂಪರಿಕ ವೈದ್ಯ ಪದ್ಧತಿಗಳ ಜಾಗತೀಕ ಕೇಂದ್ರದ ಬಗ್ಗೆ ಪ್ರಸ್ತಾಪಿಸಿ, ನಮ್ಮ ಪಾರಂಪರಿಕ ವೈದ್ಯ ಪದ್ಧತಿಗಳ ಜ್ಞಾನವನ್ನು ವಿಶ್ವಕ್ಕೆ ಹಂಚುವುದರೊಂದಿಗೆ ಆಧುನಿಕ ವಿಜ್ಞಾನದ ಜ್ಞಾನವನ್ನು ಪಾರಂಪರಿಕ ವೈದ್ಯರಿಗೆ ಕೊಟ್ಟು, ಅವರನ್ನು ಬಲ ಪಡಿಸಬೇಕು ಎಂದರು.ಈ ಸಮ್ಮೇಳನದಲ್ಲಿ ನೇಪಾಳ, ಶ್ರೀಲಂಕಾ, ರಷ್ಯಾ ದೇಶಗಳ ವಿದ್ವಾಂಸರು ಪಾಲ್ಗೊಂಡಿದ್ದರು. ರಾಜ್ಯ ಬುಟಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಲ್. ಶ್ರೀನಿವಾಸ್, ಯುಐಎಎಫ್ ನ ಪ್ರೊ. ಗ್ರೆಗರಿ, ಪ್ರೊ. ಅನಿಲ್ ಕುಮಾರ್, ಡಾ. ವಿಜಯೇಂದ್ರ ಇದ್ದರು. ಶಾಶ್ವತ ಪ್ರಕಾಶ್ ಪ್ರಾರ್ಥಿಸಿದರು.