ಸಾರಾಂಶ
ಕುಷ್ಟಗಿ: ತಾಲೂಕಿನ ಕಂದಕೂರ ಹಾಗೂ ಕಿಲ್ಲಾರಹಟ್ಟಿ ವಿವಿಧ ಗ್ರಾಪಂ ಸದಸ್ಯರು ಹಾಗೂ ಕೆಲವು ರೈತರು ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಮಾಡಿರುವ ಎಫ್‌ಟಿಒ ಪೇಮೆಂಟ್ ದತ್ತಾಂಶವು ಡಿಲೀಟ್ ಆಗಿರುವ ಸುದ್ದಿ ತಿಳಿದು ವಿಷದ ಬಾಟಲಿಯನ್ನು ಕೈಯಲ್ಲಿ ಹಿಡಿದು ದಿಢೀರನೇ ತಾಪಂ ಮುಂಭಾಗ ಆಕ್ರೋಶ ಹೊರಹಾಕಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಕ್ಷಾಂತರ ರುಪಾಯಿ ಸಾಲ ಮಾಡಿ ನರೇಗಾ ಯೋಜನೆಯಲ್ಲಿ ಭೋಜನಾಲಯ, ದನದದೊಡ್ಡಿ ಸೇರಿದಂತೆ ಅನೇಕ ಕಾಮಗಾರಿಗಳನ್ನು ಮಾಡಿಕೊಂಡಿದ್ದು ಈಗ ಅಧಿಕಾರಿಗಳು ಎಫ್‌ಟಿಒ ದತ್ತಾಂಶವು ಡಿಲೀಟ್ ಮಾಡಲಾಗಿದೆ. ಹೀಗಾದರೆ ಬಿಲ್ ಮಾಡುವುದು ಯಾವಾಗ? ನಾವು ಮಾಡಿರುವ ಸಾಲ ತೀರಿಸುವುದು ಯಾವಾಗ? ಎಂದು ವಿಷದ ಬಾಟಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.ತಾಪಂ ಇಒ ನಿಂಗಪ್ಪ ಮಸಳಿ ಗ್ರಾಪಂ ಸದಸ್ಯರು ಹಾಗೂ ರೈತರ ಮನವಿ ಸ್ವೀಕರಿಸಿ ಎಫ್‌ಟಿಒದಲ್ಲಿ ಡಿಲೀಟ್ ಆಗಿರುವ ಕುರಿತು ಸಮರ್ಪಕ ಮಾಹಿತಿ ಪಡೆದುಕೊಂಡು ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕಂದಕೂರ ಗ್ರಾಪಂ ಅಧ್ಯಕ್ಷ ಶೇಖಪ್ಪ ಹರಿಜನ, ಉಪಾಧ್ಯಕ್ಷೆ ರೇಣುಕಮ್ಮ ಮಡಿವಾಳ, ಶರಣಗೌಡ ಪಾಟೀಲ್, ಭೀಮಣ್ಣ ಬಿಜಕಲ್, ಶಾಂತಮ್ಮ ತಳವಾರ, ದೊಡ್ಡಪ್ಪ, ಸಲೀಂಸಾಬ ಟೆಂಗುಂಟಿ, ದುರಗಮ್ಮ ಸತ್ಯಪ್ಪ, ಸಿದ್ದಲಿಂಗಯ್ಯ ಸಾಹುಕಾರ, ಶಂಕ್ರಪ್ಪ ಪ್ಯಾಟಿನ್, ಶರಣಪ್ಪ ಪವಾಡೆಪ್ಪನವರು, ನಾಗಪ್ಪ ವಾಲ್ಮೀಕಿ ಉಪಸ್ಥಿತರಿದ್ದರು.