ನಾಸಿನ್ ಅಕಾಡೆಮಿ ಸಾಕಾರಕ್ಕೆ ಶ್ರಮಿಸಿದ ಕನ್ನಡಿಗ ನಾರಾಯಣಸ್ವಾಮಿ

| Published : Jan 24 2024, 02:02 AM IST

ನಾಸಿನ್ ಅಕಾಡೆಮಿ ಸಾಕಾರಕ್ಕೆ ಶ್ರಮಿಸಿದ ಕನ್ನಡಿಗ ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಅಂಚಿನಲ್ಲಿ ಆಂಧ್ರಪ್ರದೇಶದ ಪಾಲಾಸಮುದ್ರಂನಲ್ಲಿ ಸ್ಥಾಪಿತವಾದ ನಾಸಿನ್ ಅಕಾಡೆಮಿಯು ಭಾರತದಲ್ಲೇ ಇದೀಗ ವಿಶಾಲ ಹಾಗೂ ಶ್ರೀಮಂತ ತಂತ್ರಜ್ಞಾನ ಹೊಂದಿದ ಅಕಾಡೆಮಿ ಎನ್ನಲಾಗುತ್ತಿದೆ.ಆಂಧ್ರಪ್ರದೇಶದ ಪಲಾಸಮುದ್ರಂನಲ್ಲಿ 500 ಎಕರೆ ವಿಸ್ತೀರ್ಣದಲ್ಲಿ ಐಆರ್ ಎಸ್ ಅಧಿಕಾರಿಗಳಿಗೆ ಅಂತಲೇ ತರಬೇತಿ ಅಕಾಡೆಮಿಯನ್ನು ನಿರ್ಮಿಸಲು ದಕ್ಷ ಹಾಗೂ ಪ್ರಾಮಾಣಕ ಅಧಿಕಾರಿ ನಾರಾಯಣಸ್ವಾಮಿ ಅವರನ್ನು ಕೇಂದ್ರ ಸರ್ಕಾರವು ನೇಮಿಸಿತ್ತು.

- ಐಆರ್ ಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಅಕಾಡೆಮಿ ನಾಸಿನ್

- ಐಆರ್ ಎಸ್ ಅಧಿಕಾರಿ ನಾರಾಯಣಸ್ವಾಮಿ ಚಾಮರಾಜನಗರ ಜಿಲ್ಲೆಯವರು----

ಬಿ. ಶೇಖರ್ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಐಆರ್ ಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ನಾಸಿನ್ (ನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್, ಇಂಡೈರೆಕ್ಟ್ ಟ್ಯಾಕ್ಸಸ್ ಮತ್ತು ನಾರ್ಕೋಟಿಕ್ಸ್) ಸಾಕಾರಕ್ಕೆ ಕರ್ನಾಟಕ ಮೂಲದ ಐಆರ್ ಎಸ್ ಅಧಿಕಾರಿ ನಾರಾಯಣಸ್ವಾಮಿ ಅವರು ಶ್ರಮಿಸಿದ್ದಾರೆ.

ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಸವಕನಪಾಳ್ಯ ಗ್ರಾಮದವರಾದ ನಾರಾಯಣಸ್ವಾಮಿ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಸಫಲರಾಗಿದ್ದಾರೆ.

ಕರ್ನಾಟಕದ ಅಂಚಿನಲ್ಲಿ ಆಂಧ್ರಪ್ರದೇಶದ ಪಾಲಾಸಮುದ್ರಂನಲ್ಲಿ ಸ್ಥಾಪಿತವಾದ ನಾಸಿನ್ ಅಕಾಡೆಮಿಯು ಭಾರತದಲ್ಲೇ ಇದೀಗ ವಿಶಾಲ ಹಾಗೂ ಶ್ರೀಮಂತ ತಂತ್ರಜ್ಞಾನ ಹೊಂದಿದ ಅಕಾಡೆಮಿ ಎನ್ನಲಾಗುತ್ತಿದೆ.

ಆಂಧ್ರಪ್ರದೇಶದ ಪಲಾಸಮುದ್ರಂನಲ್ಲಿ 500 ಎಕರೆ ವಿಸ್ತೀರ್ಣದಲ್ಲಿ ಐಆರ್ ಎಸ್ ಅಧಿಕಾರಿಗಳಿಗೆ ಅಂತಲೇ ತರಬೇತಿ ಅಕಾಡೆಮಿಯನ್ನು ನಿರ್ಮಿಸಲು ದಕ್ಷ ಹಾಗೂ ಪ್ರಾಮಾಣಕ ಅಧಿಕಾರಿ ನಾರಾಯಣಸ್ವಾಮಿ ಅವರನ್ನು ಕೇಂದ್ರ ಸರ್ಕಾರವು ನೇಮಿಸಿತ್ತು. 2022ರಲ್ಲಿ ಆರಂಭವಾದ ಅಕಾಡೆಮಿಯ 2024ರ ಪೂರ್ಣಗೊಂಡಿದ್ದು, ಕಳೆದ ಜ.16 ರಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಲೋಕಾರ್ಪಣೆಗೊಂಡಿದೆ.

ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಂತಹ ಕಠಿಣ ಲೀಡರ್ ಶಿಪ್ ನಲ್ಲಿ ಕೆಲಸ ಮಾಡುವುದೆಂದರೆ ಕಷ್ಠ ಸಾಧ್ಯವೇ ಸರಿ. ಆದರೆ, 1500 ಕೋಟಿ ರೂ. ಮೊತ್ತದ ಯೋಜನೆಯನ್ನು ನಾರಾಯಣಸ್ವಾಮಿ ಅವರಿಗೆ ವಹಿಸಿದ್ದು, ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ನಾರಾಯಣಸ್ವಾಮಿ ಹಿನ್ನೆಲೆ

ನಾರಾಯಣಸ್ವಾಮಿ ಅವರು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಸವಕನಪಾಳ್ಯದಲ್ಲಿ ಹುಟ್ಟಿ ಅಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ ಪಡೆದರು. ನಂತರ ಗುಂಡ್ಲುಪೇಟೆಯ ಡಿಬಿಜಿಜೆ ಕಾಲೇಜು ಮತ್ತು ನಂಜನಗೂಡಿನ ಜೆಎಸ್ಎಸ್ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, ಮೈಸೂರಿನಲ್ಲಿ ಉನ್ನತ ವ್ಯಾಸಂಗ ಪಡೆದು, 1992 ರಲ್ಲಿ ಐಆರ್ ಎಸ್ ಅಧಿಕಾರಿಯಾಗಿ ಆಯ್ಕೆಗೊಂಡವರು.

ನಾರಾಯಣಸ್ವಾಮಿ ಅವರು ಆರ್ಥಿಕ ಇಲಾಖೆಯಲ್ಲಿ ಹಲವಾರು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ, ಮಾಲ್ಡಿವ್ಸ್ ಮತ್ತು ಕೀನ್ಯಾ ದೇಶದಲ್ಲಿ ರಾನಲ್ಲಿ ಇದ್ದುಕೊಂಡು, ದೇಶದ ಆಂತರಿಕ ಭದ್ರತೆ ಕಾಪಾಡಿದ್ದಾರೆ. ತಾವು ಹೋದಲ್ಲೇಲ್ಲಾ ಹೊಸ ಛಾಪನ್ನು ಒತ್ತಿ ಬಂದಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹಿಂದುಳಿದ ಗ್ರಾಮದಲ್ಲಿ ಜನಿಸಿದ ನಾರಾಯಣಸ್ವಾಮಿ ಅವರು, ಇಡೀ ಭಾರತವೇ ಒಮ್ಮೆ ತಿರುಗಿ ನೋಡುವಂಥ ನಾಸಿನ್ ಅಕಾಡೆಮಿ ಪ್ರಾಜೆಕ್ಟ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.