ಸಾರಾಂಶ
- ನಗರದ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನಲ್ಲಿ ಪರಾಕ್ರಮ್ ದಿವಸ್ ಆಯೋಜನೆ ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬ ಕಲ್ಪನೆಯನ್ನು ಮೊಟ್ಟ ಮೊದಲು ಕಂಡು ಅದನ್ನು ಸಾಕಾರಗೊಳಿಸಿದ್ದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಎಂದು ಆರ್‌ಎಸ್‌ಎಸ್ ಪ್ರಚಾರಕ್ ನವೀನ್ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.ಇಲ್ಲಿನ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪರಾಕ್ರಮ್ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಾರತ ಸ್ವಾತಂತ್ರಗೊಂಡ ಬಹಳ ವರ್ಷಗಳ ನಂತರ ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಆದರೆ, ಸ್ವತಂತ್ರಪೂರ್ವದಲ್ಲಿಯೇ ಐಎನ್ಎ ಝಾನ್ಸಿ ರಾಣಿ ಲಕ್ಷ್ಮಿಬಾಯಿ ರೆಜಿಮೆಂಟ್ ಸೃಜಿಸಿ ಮಹಿಳೆಯರಿಗೆ ಅವಕಾಶ ನೀಡಿದ್ದು ನೇತಾಜಿ ಮಾತ್ರ ಎಂದರು.ನೇತಾಜಿಯವರು ಬೇರೆ ನಾಯಕರಂತೆ ಬ್ರಿಟೀಷರಿಂದ ಭಾಗಶಃ ಸ್ವಾತಂತ್ರಕ್ಕೆ ಒಪ್ಪಿರಲಿಲ್ಲ. ಬದಲಾಗಿ ನಮಗೆ ಸಂಪೂರ್ಣ ಸ್ವಾತಂತ್ರ ಬೇಕು ಎಂಬ ಬೇಡಿಕೆಯೊಂದಿಗೆ ಬ್ರಿಟೀಷರ ವಿರುದ್ಧ ಹೋರಾಡುವುದು ಏನಿದ್ದರೂ ಅದು ಯುದ್ಧ ಭೂಮಿಯಲ್ಲಿ ಎಂಬ ಕಠಿಣ ಸಂದೇಶ ನೀಡಿದ್ದರು. ವಾಸ್ತವವಾಗಿ 1943ರಲ್ಲಿ ಅಂಡಮಾಣ್‌ನಲ್ಲಿ ಭಾರತದ ಸ್ವತಂತ್ರ ಧ್ವಜ ಹಾರಿಸಿ, ತಾವೇ ದೇಶದ ಪ್ರಧಾನಿ ಎಂದು ಘೋಷಿಸಿಕೊಳ್ಳುವ ಧೈರ್ಯ ತೋರಿಸಿದ್ದ ನೇತಾಜಿಯವರೇ ಮೊದಲ ಪ್ರಧಾನಿ ಎಂದು ಹೇಳಿದರು.ಪ್ರಾಂಶುಪಾಲ ಡಾ.ಬಿ.ಎಸ್. ಸುರೇಶ್ ಮಾತನಾಡಿ, ದೇಶದ ಸ್ವತಂತ್ರ ಹೋರಾಟಕ್ಕೂ ರಕ್ತದಾನಕ್ಕೂ ಬಹಳಷ್ಟು ಭಾವನಾತ್ಮಕ ಸಂಬಂಧವಿದೆ. ದೇಶ ಎಂದರೆ ನಮ್ಮೆಲ್ಲರ ಆತ್ಮ. ಬ್ರಿಟೀಷರ ಕಪಿಮುಷ್ಟಿಯಲ್ಲಿದ್ದ ಭಾರತವನ್ನು ಸ್ವತಂತ್ರಗೊಳಿಸಿಕೊಳ್ಳಲು ಲಕ್ಷಾಂತರ ಮಂದಿ ತ್ಯಾಗ ಹಾಗೂ ಬಲಿದಾನ ಮಾಡಿದ್ದಾರೆ ಎಂದರು.
ದೇಶದ ಸ್ವತಂತ್ರ ಹೋರಾಟ ಎನ್ನುವುದು ಒಂದು ಭಾವನಾತ್ಮಕ ವಿಚಾರವಾಗಿತ್ತು. ಅಂತಹ ಸಂದರ್ಭದಲ್ಲಿ ದೇಶಕ್ಕಾಗಿ ಲಕ್ಷಾಂತರ ಮಂದಿ ತಮ್ಮ ಜೀವ ನೀಡಿ ರಕ್ತ ಹರಿಸಿದ್ದಾರೆ. ಅಂದರೆ, ಸ್ವತಂತ್ರ ಹೋರಾಟಕ್ಕಾಗಿ ತಮ್ಮ ರಕ್ತವನ್ನೇ ತ್ಯಾಗ ಮಾಡುವ ಮೂಲಕ ಮಹಾನ್ ಸಂದೇಶ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ನೀಡಿರುವ ಇಂತಹ ಮಹಾನ್ ಸಂದೇಶವನ್ನು ಎಲ್ಲರೂ ಅಳವಡಿಸಿಕೊಂಡು ಇಂದೂ ಸಹ ಜನರ ಜೀವ ಉಳಿಸಲು ಅರ್ಹ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.ಕಾರ್ಯನಿರ್ವಾಹಕ ನಿರ್ದೇಶಕ ಡಾ.ವಿನಯ ಶ್ರೀನಿವಾಸ್ ಮಾತನಾಡಿ, ತಮ್ಮಲ್ಲಿನ ಯಾವುದೇ ರೀತಿಯ ನಕಾರಾತ್ಮಕತೆಯನ್ನು ತೊಡೆದು ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರಿಗೆ ಇಂದು ಎಲ್ಲರೂ ಗೌರವ ಸಲ್ಲಿಸುತ್ತೇವೆ. ನಾವುಗಳೂ ಸಹ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೊರೆದು ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು.ಪ್ರಮುಖವಾಗಿ ಯುವಕರು ಸಕಾರಾತ್ಮಕತೆಯನ್ನು ಹೆಚ್ಚು ಬೆಳೆಸಿಕೊಂಡು ಸಮಗ್ರ ವಿಕಾಸಕ್ಕಾಗಿ ಹೋರಾಟ ನಡೆಸಬೇಕು. ಪ್ರತಿದಿನವೂ ಎಲ್ಲ ಕಾರ್ಯಗಳಲ್ಲೂ ಪರಾಕ್ರಮವಾಗಿ ಮುನ್ನಗ್ಗಬೇಕು ಎಂದು ಕರೆ ನೀಡಿದರು. ಸಿಮ್ಸ್ ಎಂಎಸ್ ಡಾ.ಶ್ರೀಧರ್ ಮಾತನಾಡಿ, 1997ರಿಂದಲೂ ನ್ಯಾಶನಲ್ ಮೆಡಿಕೋಸ್ ಆರ್ಗನೈಸೇಶನ್ ವೈದ್ಯಕೀಯ ಕ್ಷೇತ್ರದ ಉತ್ತಮ ವೇದಿಕೆಯಾಗಿ ಕೆಲಸ ಮಾಡುತ್ತಿದೆ. ಈ ವೇದಿಕೆಯ ಮೂಲಕ ನಿಮಗೆಲ್ಲಾ ಒಂದು ಉತ್ತಮ ಅವಕಾಶ ದೊರೆಯುತ್ತದೆ. ಇದರಲ್ಲಿ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜು ಹಾಗೂ ನ್ಯಾಶನಲ್ ಮೆಡಿಕೋಸ್ ಆರ್ಗನೈಸೇಶನ್ ಸಹಯೋಗದಲ್ಲಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ.ವಿನೀತ್ ಆನಂದ್, ಕಾಲೇಜಿನ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.