ಸಾರಾಂಶ
ಹಿರೇಕೆರೂರು ಪಟ್ಟಣದ ಆಜಾದ್ ನಗರದಲ್ಲಿ ಜ್ವರ, ಕೆಮ್ಮು, ನೆಗಡಿ ಇತರೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಎಂಟು ತಿಂಗಳ ಹಿಂದೆ ಸ್ಥಾಪಿಸಿರುವ ನಮ್ಮ ಕ್ಲಿನಿಕ್ ಇದುವರೆಗೂ ಬಾಗಿಲು ತೆರೆದಿಲ್ಲ. ಈ ಕಟ್ಟಡಕ್ಕೆ ತಿಂಗಳು ₹೧೦ ಸಾವಿರ ಬಾಡಿಗೆ ಸಹ ನೀಡಲಾಗುತ್ತಿದೆ. ಆದರೆ ಚಿಕಿತ್ಸೆ ನೀಡುವ ವೈದ್ಯ ನೇಮಕಾತಿ ವಿಳಂಬವಾಗಿದ್ದರಿಂದ ನಮ್ಮ ಕ್ಲಿನಿಕ್ ಇನ್ನೂ ಶುರುವಾಗಿಲ್ಲ!
ರವಿ ಮೇಗಳಮನಿಕನ್ನಡಪ್ರಭ ವಾರ್ತೆ ಹಿರೇಕೆರೂರುಪಟ್ಟಣದ ಆಜಾದ್ ನಗರದಲ್ಲಿ ಜ್ವರ, ಕೆಮ್ಮು, ನೆಗಡಿ ಇತರೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಎಂಟು ತಿಂಗಳ ಹಿಂದೆ ಸ್ಥಾಪಿಸಿರುವ ನಮ್ಮ ಕ್ಲಿನಿಕ್ ಇದುವರೆಗೂ ಬಾಗಿಲು ತೆರೆದಿಲ್ಲ. ಈ ಕಟ್ಟಡಕ್ಕೆ ತಿಂಗಳು ₹೧೦ ಸಾವಿರ ಬಾಡಿಗೆ ಸಹ ನೀಡಲಾಗುತ್ತಿದೆ. ಆದರೆ ಚಿಕಿತ್ಸೆ ನೀಡುವ ವೈದ್ಯ ನೇಮಕಾತಿ ವಿಳಂಬವಾಗಿದ್ದರಿಂದ ನಮ್ಮ ಕ್ಲಿನಿಕ್ ಇನ್ನೂ ಶುರುವಾಗಿಲ್ಲ!
ತಾಲೂಕು ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಕ್ಲಿನಿಕ್ ಸ್ಥಾಪಿಸಲಾಗಿದೆ. ಆದರೆ ಸೇವೆ ಲಭ್ಯವಾಗುತ್ತಿಲ್ಲವೆಂದು ಸಾರ್ವಜನಿಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.ನಮ್ಮ ಕ್ಲಿನಿಕ್ ಯೋಜನೆಯ ಬಣ್ಣ ಹಾಗೂ ಘೋಷಣೆಗಳನ್ನು ಹಚ್ಚಿ ಕ್ಲಿನಿಕ್ ಆರಂಭಿಸಲಾಗಿದೆ. ಆರಂಭಿಸಿ ಎಂಟು ತಿಂಗಳಾದರೂ ಉದ್ಘಾಟನೆ ಆಗಿಲ್ಲ. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿನ ಅತ್ಯಂತ ಹಿಂದುಳಿದ ಬಡಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಮತ್ತು ಎಲ್ಲ ರಾಷ್ಟ್ರೀಯ ಕಾರ್ಯಕ್ರಮಗಳ ಸೌಲಭ್ಯಗಳನ್ನು ಮುಟ್ಟಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿರುವ ನಮ್ಮ ಕ್ಲಿನಿಕ್ ಎಂಟು ತಿಂಗಳಿಂದ ಆರಂಭಗೊಳ್ಳದೇ ಸ್ವತಃ ಕಾಯಿಲೆಗೆ ಬಿದ್ದಂತೆ ಬಲಹೀನವಾಗಿವೆ.ನಮ್ಮ ಕ್ಲಿನಿಕ್‌ಗೆ ಒಬ್ಬರು ನುರಿತ ವೈದ್ಯರು, ಪ್ರಯೋಗ ತಜ್ಞರು, ದಾದಿಯರು, ಔಷಧ ವಿತರಕರು ಮತ್ತು ಒಬ್ಬರು ಸಿಪಾಯಿ ಸೇರಿ ಐವರ ಸೇವೆಗೆ ಮಂಜೂರಾತಿ ನೀಡಲಾಗಿತ್ತು. ಆರಂಭಿಸಿ ಎಂಟು ತಿಂಗಳಾದರೂ ವೈದ್ಯರು, ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳನ್ನು ನೀಡದ ಕಾರಣ ಯೋಜನೆಯ ಮೂಲ ಉದ್ದೇಶವೇ ಹಳ್ಳ ಹಿಡಿಯುವಂತಾಗಿದೆ.ಆರೋಗ್ಯ ಸೇವೆಗಳ ಪ್ಯಾಕೇಜ್: ನಮ್ಮ ಕ್ಲಿನಿಕ್‌ಗಳಲ್ಲಿ ಒಟ್ಟು ೧೨ ಆರೋಗ್ಯ ಸೇವೆಗಳ ಪ್ಯಾಕೇಜ್ ಲಭ್ಯವಿದ್ದು, ಸಾಂಕ್ರಾಮಿಕ ರೋಗಗಳ ನಿರ್ವಹಣೆ ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಹೊರ ರೋಗಿ ಸೇವೆ, ಟೆಲಿ ಸಮಾಲೋಚನೆ ಸೇವೆ, ಕ್ಷೇಮ ಚಟುವಟಿಕೆ ಹಾಗೂ ಉಚಿತ ರೆಫರಲ್ ಸೇವೆಗಳನ್ನೂ ಒದಗಿಸುವ ಉದ್ದೇಶ ಹೊಂದಲಾಗಿತ್ತು.ನಮ್ಮ ಕ್ಲಿನಿಕ್ ಆರಂಭವಾಗುತ್ತದೆ ಎಂದಾಗ ಜನ ಸಂತಸ ಪಟ್ಟಿದ್ದರು. ಆದರೆ, ಅವುಗಳಿಗೆ ಸಮರ್ಪಕ ಮೂಲ ಸೌಕರ್ಯ ಒದಗಿಸದೆ ಸರ್ಕಾರ ಅನ್ಯಾಯ ಮಾಡಿದೆ. ಜಾವೇದ್ ನಗರ, ಇಬ್ರಾಹಿಂ ನಗರ, ಜನತಾ ಪ್ಲಾಟ್‌ಗಳು ಬಡವರು, ಮಧ್ಯಮ ವರ್ಗದವರು ವಾಸಿಸುವ ಜಾಗದಲ್ಲಿ ಆಸ್ಪತ್ರೆ ನಿರ್ಮಾಣವಾಗಿದೆ. ನಮ್ಮ ಕ್ಲಿನಿಕ್ ಬೇಗ ಉದ್ಘಾಟನೆಗೊಂಡರೆ ಪಟ್ಟಣ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಸರಕಾರದ ಮಾರ್ಗಸೂಚಿ ಪ್ರಕಾರ ನಮ್ಮ ಕ್ಲಿನಿಕ್ ಆರಂಭಿಸಲು ಸಿದ್ಧತೆ ಮಾಡಲಾಗಿದೆ. ಆದರೆ ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿದ ಡಾಕ್ಟರ್ ಯಾರೂ ಬರುತ್ತಿಲ್ಲ. ಬಂದ ತಕ್ಷಣ ವೈದ್ಯಕೀಯ ಸೇವೆಗಳನ್ನು ಆರಂಭಿಸಲಾಗುವುದು ತಾಲೂಕು ವೈದ್ಯಾಧಿಕಾರಿ ಜಡ್. ಆರ್. ಮಕನದಾರ ಹೇಳಿದರು.ಪಟ್ಟಣದ ಆಜಾದ್ ನಗರದಲ್ಲಿ ಸರ್ಕಾರ ಬಡವರು, ದಿನಗೂಲಿ ಕಾರ್ಮಿಕರು, ಕೊಳೆಗೇರಿ ನಿವಾಸಿಗಳು, ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ಒದಗಿಸುವ ಸಲುವಾಗಿ ನಮ್ಮ ಕ್ಲಿನಿಕ್ ಸ್ಥಾಪನೆ ಮಾಡಿದ್ದಾರೆ. ಆದರೆ ಇನ್ನೂ ಉದ್ಘಾಟನೆ ಆಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಉದ್ಘಾಟಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಆಜಾದ್ ನಗರ ನಿವಾಸಿ ಮುನ್ನಾ ಕುಪ್ಪೇಲೂರು ಹೇಳಿದರು.