ಕನ್ನಡಪ್ರಭ ವಾರ್ತೆ ತುಮಕೂರುದೇಶದಲ್ಲಿನ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಅಭಿಪ್ರಾಯ ಪಟ್ಟಿದ್ದಾರೆ. ಜಿಲ್ಲಾ ಪಂಚಾಯತ್‌ನಲ್ಲಿ ಬುಧವಾರ ಗ್ರಾಮ ಪಂಚಾಯತಿಗಳಿಗೆ ನೂತನವಾಗಿ ನೇಮಕಗೊಂಡಿರುವ ಆಡಳಿತಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ ರೂಪಿಸಲಾಗಿರುವ ದೇಶದ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಕಾಯ್ದೆಯಲ್ಲಿ ವ್ಯಕ್ತವಾಗುವ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಯ 3 ಹಂತದ ಆಡಳಿತ ವ್ಯವಸ್ಥೆ ಜಗತ್ತಿನ ಯಾವುದೇ ದೇಶದಲ್ಲಿ ಇಲ್ಲ. ಗ್ರಾಮ ಸ್ವರಾಜ್ ಪರಿಕಲ್ಪನೆಯ ಪಂಚಾಯತ್ ವ್ಯವಸ್ಥೆ ಮಾದರಿಯಾಗಿದೆ ಎಂದು ಅವರು ಹೇಳಿದರು. ಗ್ರಾಮ ಪಂಚಾಯತಿ ಪರಿಕಲ್ಪನೆ ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯಾಗಿದ್ದು, ನಮ್ಮ ಆಡಳಿತವನ್ನು ನಾವೇ ಮಾಡಿಕೊಳ್ಳಬೇಕು ಎಂಬ ಸರಳ ತತ್ವದ ಆಧಾರದ ಮೇಲೆ ರೂಪಿಸಲಾಗಿತ್ತು. ಸ್ವಾತಂತ್ರ್ಯಾ ನಂತರ ಅದನ್ನು ಸಂವಿಧಾನದಲ್ಲಿ ಅಳವಡಿಸಿಕೊಂಡು ಅಧಿಕಾರ ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದ ಜನರ ಕೈಗೆ ಅಧಿಕಾರ ನೀಡುವ ವ್ಯವಸ್ಥೆಗೆ ಸರ್ಕಾರ ಮುಂದಾಗಿತ್ತು. ಪರಿಣಾಮವಾಗಿ ಇಂದು ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಪಂಚಾಯತ್ ವ್ಯವಸ್ಥೆ ಅಸ್ಥಿತ್ವದಲ್ಲಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದರು. ಆರಂಭದ ದಿನಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಭ್ರಷ್ಟಾಚಾರ ವಿಕೇಂದ್ರೀಕರಣ ಎಂಬ ಆರೋಪವೂ ಕೇಳಿ ಬಂದಿತ್ತು. ಆದರೆ ಪ್ರಜಾಪ್ರಭುತ್ವದ ಫಲ ಎಲ್ಲರಿಗೂ ಸಿಗಬೇಕು ಎಂಬುದು ವಿಕೇಂದ್ರೀಕರಣದ ಉದ್ದೇಶವಾಗಿದ್ದು, ಕ್ರಮೇಣ ಪ್ರಜೆಗಳಲ್ಲಿ ವ್ಯವಸ್ಥೆಯ ಧನಾತ್ಮಕ ಪರಿಣಾಮಗಳು ಫಲಿಸಿದ ಮೇಲೆ ಕಾಯ್ದೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಕಾಲಕ್ರಮೇಣ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಅನಿವಾರ್ಯವೂ ಆಗಿರುವುದರಿಂದ ಪಂಚಾಯತ್ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಸದ್ಭಳಕೆ ಮಾಡಿಕೊಳ್ಳುವುದರಿಂದ ಕಾರ್ಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದರು. ಆಡಳಿತ ಸುಲಭವಾಗುವ ದೃಷ್ಟಿಯಿಂದ ತಂತ್ರಜ್ಞಾನ ಅಳವಡಿಕೆ ಅನಿವಾರ್ಯ ಎಂದ ಅವರು, ಗ್ರಾಮ ಪಂಚಾಯತಿಗಳಿಗೆ ಹೊಸದಾಗಿ ನೇಮಕಗೊಂಡಿರುವ ಆಡಳಿತಾಧಿಕಾರಿಗಳು ಗ್ರಾಮ ಮಟ್ಟದಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ನ್ಯಾಯಯುತವಾಗಿ ಬಗೆಹರಿಸುವ ಪ್ರಯತ್ನ ಮಾಡಬೇಕು ಎಂದು ಕಿವಿ ಮಾತು ಹೇಳಿದರು.ನವದೆಹಲಿಯ ರಾಜ್ಯದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಮಾತನಾಡಿ, ಪಾರದರ್ಶಕ ಆಡಳಿತ ದೃಷ್ಟಿಯಿಂದ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತರಬೇತಿ ಮತ್ತು ಕಾರ್ಯಾಗಾರ ಅವಶ್ಯ ಎಂದ ಅವರು, ಕಾಲಮಿತಿಯಲ್ಲಿ ಸಾರ್ವಜನಿಕರ ಕೆಲಸಗಳನ್ನು ವಿಳಂಬವಿಲ್ಲದೆ ತ್ವರಿತವಾಗಿ ಭ್ರಷ್ಟಾಚಾರರಹಿತವಾಗಿ ನಿರ್ವಹಿಸಲು ಅಧಿಕಾರಿಗಳು ಬದ್ಧರಾಗಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಅಶ್ವಿಜ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಗ್ರಾಮ ಪಂಚಾಯತಿಗಳಿಗೆ ಹೊಸದಾಗಿ ನೇಮಕಗೊಂಡಿರುವ ಆಡಳಿತಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಉತ್ತಮ ಆಡಳಿತದ ನಿರ್ವಹಣೆ ಹಿನ್ನೆಲೆಯಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಅಧಿಕಾರಿಗಳು ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಸಿಕೊಳ್ಳಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಬಿ.ಎಂ.ಟಿ.ಸಿ. ಉಪಾಧ್ಯಕ್ಷ ನಿಕೇತ್ ರಾಜ್ ಎಂ., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್, ಮಹಾಲೇಖಪಾಲ ಕಚೇರಿಯ ಸಂಪನ್ಮೂಲ ವ್ಯಕ್ತಿ ರಂಜನ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ, ಈಶ್ವರಪ್ಪ, ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.