ಅಧಿಕಾರಿಗಳ ದಲಿತ ವಿರೋಧಿ ನೀತಿಗೆ ಖಂಡನೆ । ಶಿಂಗಾಡಿಕದಿರೇನಹಳ್ಳಿ ಭೂಮಿ ಸಮಸ್ಯೆ ಇತ್ಯರ್ಥ ಪಡಿಸಲು ಒತ್ತಾಯ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅಧಿಕಾರಿಗಳ ದಲಿತ ವಿರೋಧಿ ನೀತಿಯನ್ನು ಖಂಡಿಸಿ, ಶಿಂಗಾಡಿಕದಿರೇನಹಳ್ಳಿ ಭೂಮಿ ಸಮಸ್ಯೆಯನ್ನು ಇತ್ಯರ್ಥಪಡಿಸಲು ಒತ್ತಾಯಿಸಿ ಜು. 13ರಂದು ಚಿಕ್ಕಬಳ್ಳಾಪುರ ತಹಸೀಲ್ದಾರ್ ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ಮತ್ತು ಗಡಿನಾಡು ರೈತ ಸಂಘ ಹಾಗೂ ಶಿಂಗಾಡಿಕದಿರೇನಹಳ್ಳಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ದಸಂಸ ಮುಖಂಡ ಕೆ.ಸಿ. ರಾಜಕಾಂತ್ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೂಮಿಗಾಗಿ ಬದುಕಿಗಾಗಿ ಸಾವಿರಾರು ವರ್ಷಗಳಿಂದ ಲಕ್ಷಾಂತರ ಜನ ಬೀದಿಗೆ ಇಳಿದು ಹೋರಾಟ ಮಾಡಿ ಬಡವರ, ದಲಿತರ ಭೂ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಆಳುವ ಸರ್ಕಾರಗಳ ಮೇಲೆ ಒತ್ತಡ ಹಾಕಿದ ಪರಿಣಾಮ ಭೂ ಸುಧಾರಣೆ ಕಾಯ್ದೆ, ಬಗ‌ರ್ ಹುಕುಂ ಕಾಯ್ದೆ, ಉಳುವವನೆ ಭೂ ಒಡೆಯ, ಅಕ್ರಮ ಸಕ್ರಮ ಇತ್ಯಾದಿ ಜನಪರ ಕಾನೂನುಗಳು ಜಾರಿಗೆ ಬಂದವು. ಇದರ ಶ್ರೇಯಸ್ಸು ದಲಿತ ಚಳುವಳಿಗೆ ದಕ್ಕುತ್ತದೆ. ಸ್ವಾತಂತ್ರ್ಯ ಬಂದು 80 ವರ್ಷಗಳು ಸಮೀಪಿಸುತ್ತಿದ್ದರೂ ಭೂಮಿ ಕೊಡಿ, ನಿವೇಶನ ಕೊಡಿ, ಸ್ಮಶಾನ ಕೊಡಿ ಎಂದು ಅಂಗಲಾಚಿ ಬೇಡುವಂತಾಗಿದೆ.

ಎಷ್ಟು ದಿನ ಈ ಹಾಹಾಕಾರ? ಇಂದಿಗೂ ದಲಿತರು ಬದುಕುವದಾರಿಗಳು ತೆರೆದುಕೊಳ್ಳುತ್ತಿಲ್ಲ. ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿ ಶಿಂಗಾಡಿಕದಿರೇನಹಳ್ಳಿ ಗ್ರಾಮದ ದಲಿತರಿಗೆ 1972-73 ಸಾಲಿನಲ್ಲಿ ಅಕ್ರಮ ಸಕ್ರಮ ಕಾನೂನಡಿ ಸರ್ವೆ ನಂಬರ್ 67ರಲ್ಲಿ ಭೂ ಮಂಜೂರಾತಿ ಆಗಿದೆ. ಅಂದಿನಿಂದ ಸದರಿ ಸರ್ವೇ ನಂಬರ್ 67ರಲ್ಲಿ ಬೆಳೆ ಬೆಳೆದು ಸ್ವಾಧೀನದಲ್ಲಿರುತ್ತಾರೆ ಎಂದು ತಿಳಿಸಿದರು.


ಆದರೆ ಇತ್ತೀಚಿಗೆ ಅರಣ್ಯ ಇಲಾಖೆಯವರು ತಪ್ಪು ಗ್ರಹಿಕೆಯಿಂದ ಹಾಗೂ ಜಾತಿವಾದಿ ಮನಸ್ಸುಗಳಿಂದ ದಲಿತರಿಗೆ ಕಿರುಕುಳ ನೀಡುತ್ತಿದ್ದಾರೆ. ಅರಣ್ಯ ಇಲಾಖೆಯವರು ಹೇಳುವ ಪ್ರಕಾರ 1991-92ರಲ್ಲಿ ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿದೆ ಎಂದು ಹೇಳುತ್ತಾರೆ. ಆದರೆ ನಿಖರವಾದ ಸ್ಪಷ್ಟತೆ ಇಲ್ಲ. ದಾಖಲೆಗಳನ್ನು ಪರಿಶೀಲಿಸಿ ನೋಡಿದಾಗ ಅರಣ್ಯ ಇಲಾಖೆಗೆ 1991-92ರಲ್ಲಿ ನೀಡಿರುವ ಸರ್ವೆ ನಂಬರ್ 53 ಆಗಿರುತ್ತದೆ. ಆದರೆ 2015ರಲ್ಲಿ ಸರ್ವೇ ನಂಬರ್ 67ರಲ್ಲಿ ಖಾತೆ ಆಗಿದೆ. ಆದರೆ ಗೊಂದಲ ಸೃಷ್ಟಿಸಿದ್ದು ಕಂದಾಯ ಇಲಾಖೆ. ಅರಣ್ಯ ಮತ್ತು ಕಂದಾಯ ಇಲಾಖೆಯವರು ಸರಿಯಾದ ದಾಖಲೆಗಳನ್ನು ಪರಿಶೀಲಿಸದೆ ಗೊಂದಲ ಸೃಷ್ಟಿ ಮಾಡಿ ಬಡ ದಲಿತರಿಗೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ಪ್ರಶ್ನಿಸಿ ದಲಿತ ಸಂಘರ್ಷ ಸಮಿತಿ ಚಿಕ್ಕಬಳ್ಳಾಪುರ ತಾಲೂಕು ಶಾಖೆ ಕಳೆದ ಜುನ್ 15 ರಂದು ಶಿಂಗಾಡಿಕದಿರೇನಹಳ್ಳಿ ಗ್ರಾಮದಿಂದ ಕಾಲ್ನಡಿಗೆ ಜಾಥಾ ಬಂದು ಜಿಲ್ಲಾ ಅರಣ್ಯ ಸಂರಕ್ಷಣೆ ಕಚೇರಿ ಮುಂದೆ ಅನಿರ್ದಿಷ್ಟವಾದಿ ಕಾಲಧರಣಿ ಕಾರ್ಯಕ್ರಮವನ್ನು ಮುಂದುವರಿಸುತ್ತಿದೆ.

ಆದರೆ ಕಂದಾಯ ಇಲಾಖೆಯವರಾಗಲಿ ಆರಣ್ಯ ಇಲಾಖೆಯವರಾಗಲಿ ಸರಿಯಾದ ರೀತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡದೆ ದಲಿತ ವಿರೋಧಿಯನ್ನು ಅನುಸರಿಸುತ್ತಿದ್ದಾರೆ. ಮುಖ್ಯವಾಗಿ ಚಿಕ್ಕಬಳ್ಳಾಪುರ ತಹಸೀಲ್ದಾರ್ ರವರು ಸಮಸ್ಯೆಯನ್ನು ತಿಳಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದರು.

ಅಧಿಕಾರಿಗಳು ಶಿಂಗಾಡಿಕದಿರೇನಹಳ್ಳಿ ದಲಿತ ಭೂ ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸಬೇಕು. ಶಿಂಗಾಡಿಕದಿರೇನಹಳ್ಳಿ ದಲಿತರ ಭೂಮಿಗಳಿಗೆ ಗೊಂದಲ ಸೃಷ್ಟಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಪೊಲೀಸ್ ಇಲಾಖೆ ಹಾಗೂ ನಾಗರೀಕರ ಹಕ್ಕು ಜಾರಿ ನಿರ್ದೇಶನಾಲಯ ಪರಿಶಿಷ್ಟ ಜಾತಿ ವರ್ಗಗಳ 1989ರ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು. ಮೈಲಪ್ಪನಹಳ್ಳಿ ಮತ್ತು ಗುವ್ವಲಕಾನಹಳ್ಳಿ (ಸೇಶ್ ದಿನ್ನೆ) ಬಡವರಿಗೆ ಕೂಡಲೇ ನಿವೇಶನಗಳನ್ನು ಹಂಚುಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ದಸಂಸ ತಾಲೂಕು ಸಂಚಾಲಕ ಎನ್.ಪರಮೇಶ್,ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ಪದಾಧಿಕಾರಿಗಳಾದ ಎಂ.ಮುನಿರಾಜು, ಚಿನ್ನಪ್ಪ, ಮುನಿಯಪ್ಪ, ತ್ಯಾಗರಾಜು, ವೆಂಕಟೇಶ, ಲಕ್ಷ್ಮಯ್ಯ, ರಾಮಕೃಷ್ಣ, ಮತ್ತಿತರರು ಇದ್ದರು.

ಸಿಕೆಬಿ-1 ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡ ಕೆ.ಸಿ.ರಾಜಕಾಂತ್ ಮಾತನಾಡಿದರು.