70 passengers saved thanks to the driver's presence of mind!
-ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿ ಹೊಲಕ್ಕೆ ಪಲ್ಟಿಯಾದ ಸರ್ಕಾರಿ ಬಸ್
------ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಹೊಸ ಸಿದ್ದಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಮೀಪ ಬುಧವಾರ ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿದ ಸಕಾ೯ರಿ ಬಸ್ ರಸ್ತೆ ಬದಿಯ ಹೊಲಕ್ಕೆ ಪಲ್ಟಿಯಾದ ಪರಿಣಾಮ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, 70 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸುರಪುರ ಡಿಪೋಗೆ ಸೇರಿದ ಕೆಎ-33 ಎಫ್-0194 ಸಂಖ್ಯೆಯ ಬಸ್ ಸುರಪುರದಿಂದ ಕೆಂಭಾವಿ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ತಿರುವಿನಲ್ಲಿ ಬಸ್‌ನ ಮುಂಭಾಗದ ಹ್ಯಾಂಗರ್ ಬೋಲ್ಟ್ ಕಿತ್ತುಬಂದ ಕಾರಣ ಸ್ಟೇರಿಂಗ್ ನಿಯಂತ್ರಣ ತಪ್ಪಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಚಾಲಕ ನಿಂಗಪ್ಪ ಅವರು ರಸ್ತೆ ಬದಿಯ ಮರ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬಸ್ ಅನ್ನು ಹೊಲದತ್ತ ತಿರುಗಿಸಿದ ಪರಿಣಾಮ ಬಸ್ ಪಲ್ಟಿಯಾಗಿದ್ದು, ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದೆ.
ಅವಘಡದಲ್ಲಿ ಕರ್ತವ್ಯದಲ್ಲಿದ್ದ ಚಾಲಕ ನಿಂಗಪ್ಪ ಹಾಗೂ ನಿರ್ವಾಹಕ ಮಹಾದೇವಪ್ಪ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.ಹ್ಯಾಂಗರ್ ಬೋಲ್ಟ್ ಅಳವಡಿಸಿದ್ದ ಹೋಲ್ ಅಗಲವಾಗಿ ಬೋಲ್ಟ್ ಕಿತ್ತು ಬಂದಿದ್ದರಿಂದ ಸ್ಟೇರಿಂಗ್ ನಿಯಂತ್ರಣ ಕಳೆದುಕೊಂಡಿತು. ಇದು ಚಾಲಕನ ನಿರ್ಲಕ್ಷ್ಯವಲ್ಲ ಸಂಪೂರ್ಣ ತಾಂತ್ರಿಕ ದೋಷ ಎಂದು ಚಾಲಕ ನಿಂಗಪ್ಪ ತಿಳಿಸಿದ್ದಾರೆ.
ಅಪಘಾತದಲ್ಲಿ ಐವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ತಕ್ಷಣವೇ ಧಾವಿಸಿ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಸುರಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಅಪಘಾತದ ಬಳಿಕ ಕೆಎಸ್‌ಆರ್‌ಟಿಸಿ ಆಡಳಿತದ ವಿರುದ್ಧ ಸಿಬ್ಬಂದಿ ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಂತ್ರಿಕ ದೋಷವಿರುವ ಹಳೆಯ ಬಸ್‌ಗಳನ್ನು ರಸ್ತೆಗಿಳಿಸಲಾಗುತ್ತಿದ್ದು, ಅವುಗಳನ್ನು ಓಡಿಸಲು ನಿರಾಕರಿಸಿದರೆ ಅಧಿಕಾರಿಗಳು ಮೆಮೋ ನೀಡಿ ಕಿರುಕುಳ ನೀಡುತ್ತಾರೆ. ಆದರೆ, ಅಪಘಾತ ಸಂಭವಿಸಿದಾಗ ಸಂಪೂರ್ಣ ಹೊಣೆಯನ್ನು ಚಾಲಕರ ಮೇಲೆಯೇ ಹೊರಿಸಲಾಗುತ್ತದೆ ಎಂದು ಸಿಬ್ಬಂದಿ ಆರೋಪಿಸಿದರು.ಘಟನೆ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹಳೆಯ ಬಸ್‌ಗಳ ಚಾಸಿಸ್, ಸ್ಟೇರಿಂಗ್, ಸಸ್ಪೆನ್ಷನ್ ಸೇರಿದಂತೆ ಪ್ರಮುಖ ಭಾಗಗಳ ನಿಯಮಿತ ನಿರ್ವಹಣೆಗೆ ಆದ್ಯತೆ ನೀಡಿ, ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಮಾತ್ರ ರಸ್ತೆಗಿಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
----ಫೋಟೊ:ಸುರಪುರ ತಾಲೂಕಿನ ಹೊಸ ಸಿದ್ದಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಮೀಪ ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಲಕ್ಕೆ ಪಲ್ಟಿಯಾದ ಸಕಾ೯ರಿ ಬಸ್.