ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂಬುದೊಂದೆ ನಮ್ಮ ಬೇಡಿಕೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಲು ಅವಕಾಶ ಕೇಳಿದ್ದೇವೆ. ನಮ್ಮ ಬೇಡಿಕೆ ನಿರ್ಲಕ್ಷಿಸಿದರೆ ಶಾಂತಿಯುತ ಹೋರಾಟ ಕ್ರಾಂತಿಕಾರಕ ರೂಪ ಪಡೆಯಲಿದೆ ಎಂದು ರೈತ ಮುಖಂಡ ಪ್ರಕಾಶ್ ಎಚ್ಚರಿಕೆ ನೀಡಿದರು.

ನಗರದ ಜಿಬಿಡಿಎ ಸಭಾಂಗಣದಲ್ಲಿ ಶಾಸಕ ಬಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ನಡೆದ ಬಿಡದಿ ಟೌನ್ ಶಿಪ್ ಯೋಜನೆ ವ್ಯಾಪ್ತಿಯ ಭೂ ಮಾಲೀಕರು, ರೈತರು ಮತ್ತು ರೈತ ಮುಖಂಡರ ಸಭೆ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಬಳಿ ತಾವು ಮಾತನಾಡಿ, ಸಮಯ, ದಿನ ಶೀಘ್ರ ನಿಗದಿ ಪಡಿಸುವುದಾಗಿ ಶಾಸಕ ಬಾಲಕೃಷ್ಣ ಭರವಸೆ ನೀಡಿದ್ದಾರೆ ಎಂದರು.

ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಗಳಾಗಿದ್ದ ವೇಳೆ ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನ ಆಗುತ್ತಿರುವ ರೈತರೊಂದಿಗೆ ಮಾತನಾಡಿದ್ದರು. ಶೇಕಡ 50ಕ್ಕಿಂತ ಅಧಿಕ ಮಂದಿ ವಿರೋಧ ವ್ಯಕ್ತಪಡಿಸಿದರೆ ಭೂಸ್ವಾಧೀನ ಕೈಬಿಡುವುದಾಗಿ ತಿಳಿಸಿದ್ದರು. ಈಗ ಮುಖ್ಯಮಂತ್ರಿಗಳಾಗಿರುವ ಅವರನ್ನು ಭೇಟಿ ಮಾಡಲು ಅವಕಾಶ ಕೊಡಿಸುವಂತೆ ಶಾಸಕರಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಸಿಎಂ ಅವರೊಂದಿಗೆ ಭೇಟಿಯಾಗುವವರೆಗೂ ಭೂಸ್ವಾಧೀನ ಪ್ರಕ್ರಿಯೆಯ ಭಾಗವಾಗಿರುವ ಪರಿಹಾರ ವಿತರಣೆ, ಜೆಎಂಸಿ ಮಾಡುವುದು ಇತ್ಯಾದಿ ಪ್ರಕ್ರಿಯೆಗಳು ಸ್ಥಗಿತಗೊಳ್ಳಬೇಕು ಎಂದು ಒತ್ತಾಯಿಸಿದ್ದೇವೆ. ಜೆಎಂಸಿ ಮಾಡುವ ಸಂದರ್ಭದಲ್ಲಿ ಒಬ್ಬರು ತಮ್ಮ ಭೂಮಿಯನ್ನು ಸ್ವಾಧೀನಕ್ಕೆ ಒಪ್ಪಬಹುದು, ಉಳಿದವರು ಒಪ್ಪದೇ ಇರಬಹುದು. ಹೀಗಾದಾಗ ಎಲ್ಲರಿಗೂ ಸಮಸ್ಯೆಯಾಗುತ್ತದೆ ಹೀಗಾಗಿ ಪ್ರಕ್ರಿಯೆಗಳು ಸ್ಥಗಿತಗೊಳಿಸಲಿ ಎಂದು ಒತ್ತಾಯಿಸಿದರು.

ನಮಗೆ ಭೂಮಿ ಬೇಕು, ಪರಿಹಾರ ಅಲ್ಲ :


ಸಣ್ಣ ವಿಸ್ತಾರದ ಭೂ ಮಾಲೀಕರು ಹೈನುಗಾರಿಕೆ, ರೇಷ್ಮೆ ಮುಂತಾದವುಗಳಿಂದ ಬದುಕುಕಟ್ಟಿಕೊಂಡಿದ್ದೇವೆ. ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಬದುಕು ಕಿತ್ತುಕೊಳ್ಳಬೇಡಿ ಎಂದು ನಿರಂತರ ಮನವಿ ಮಾಡುತ್ತಿದ್ದೇವೆ.

ನಮ್ಮ ಬೇಡಿಕೆ ಒಂದೇ ಭೂಸ್ವಾಧೀನ ಕೈ ಬಿಡಿ ಎನ್ನುವುದೊಂದೆ. ಇಂದು ಶಾಸಕ ಬಾಲಕೃಷ್ಣ ಅವರು ನಡೆಸಿದ ಸಭೆಯಲ್ಲೂ ಇದನ್ನೇ ಹೇಳಿದ್ದೇವೆ. ಪರಿಹಾರಕ್ಕೆ ನಾವು ಬಂದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಬೇರೆಯವರಿಗೆ ಸೇರಿದ ಜಮೀನಿನಲ್ಲಿ ಪಾಲುಗಾರಿಕೆಯಲ್ಲಿ ಕೃಷಿ ಮಾಡುತ್ತಿರುವ 500 ಕುಟುಂಬಗಳಿವೆ. ಸ್ವಾಧೀನವಾದರೆ ಈ ಕುಟುಂಬಗಳ ಬದುಕು ಬೀದಿಗೆ ಬರುತ್ತವೆ. ಈ ಭಾಗದಲ್ಲಿ ಸಾಕಷ್ಟು ಮಂದಿ ವ್ಯವಸಾಯದ ಕೂಲಿ ಕಾರ್ಮಿಕರು ಇದ್ದಾರೆ. ಅವರಿಗೆ ಯಾವ ವಿದ್ಯೆಯೂ ಇಲ್ಲ. ಅವರಿಗೆ ವ್ಯವಸಾಯವೊಂದೆ ಗೊತ್ತಿದೆ. ಸ್ವಾಧೀನವಾದರೆ ಅವರಿಗೆ ಉದ್ಯೋಗವೂ ಸೃಷ್ಠಿಯಗೊಲ್ಲ. ಶಾಸಕರು ಈ ಸಮಸ್ಯೆಗಳನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದರು.

ಭೂಸ್ವಾಧೀನಕ್ಕೆ ಪರವಾಗಿರುವ ರೈತರು ಅಭಿವೃದ್ದಿ ಪರ ಇದ್ದಾರೆ. ಅವರ ಬಗ್ಗೆಯೂ ನಮಗೆ ಕಾಳಜಿ ಇದೆ. ಅಭಿವೃದ್ದಿಗೆ ರೆಡ್ ಜೋನ್ ಸಮಸ್ಯೆಯಾಗಿದೆ ಎಂಬುದು ಅವರ ನಿಲುವು. ಹೀಗಾಗಿ ರೆಡ್ ಜೋನ್ ತೆರವುಗೊಳಿಸಲು ಸ್ವಾಧೀನದ ಪರ ಇರುವ ರೈತರು ಹೋರಾಟ ನಡೆಸಿದರೆ, ನಾವು ಸಹ ಬೆಂಬಲ ಕೊಡುತ್ತೇವೆ. ಅಭಿವೃಧ್ದಿ ಬಯಸುವುದು ತಪ್ಪಲ್ಲ. ಹೀಗಾಗಿ ರೆಡ್ ಜೋನ್ ತೆರವುಗೊಳಿಸುವುದರ ಮೂಲಕ ಅಭಿವೃದ್ದಿಗೆ ಅವಕಾಶವಾಗಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವ್ಯವಸಾಯ ಮಾಡುವವರಿಗೆ ರೆಡ್ ಜೋನ್ ಬಾಧಕವಲ್ಲ. ರೇಷ್ಮೆ, ಹೈನುಗಾರಿಕೆ, ಕೃಷಿ ಮಾಡುವವರಿಗೆ ಯಾವ ಜೋನ್ ಆದರೂ ಸರಿಯೇ. ನಮಗೆ ಅದು ಅನ್ವಯಿಸುದಿಲ್ಲ ಎಂದು ಪ್ರಕಾಶ್ ಹೇಳಿದರು.

ಈ ವೇಳೆ ರೈತ ಮುಖಂಡರಾದ ರಾಮಯ್ಯ, ಅಶ್ವಥ್, ಹನುಮಂತು, ಸುಮಾ, ಗಿರೀಶ್, ಶಿವಣ್ಣ, ಮಂಜುನಾಥ್ ಮತ್ತಿತರರು ಹಾಜರಿದ್ದರು.

ಬಾಕ್ಸ್ ...........................

ರೈತರ ಹೋರಾಟದಲ್ಲಿ ಸಂತೋಷ್ ಹೆಗ್ಡೆ ಭಾಗಿ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ಕಳೆದ 480 ದಿನಗಳಿಂದ ಬೈರಮಂಗಲದಲ್ಲಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ ಜುಲೈ 9ರಂದು ನಿವೃತ್ತ ನ್ಯಾಯಾಧೀಶರುಗಳಾದ ಸಂತೋಷ್ ಹೆಗ್ಡೆ, ಗೋಪಾಲ ಗೌಡ, ಸುದರ್ಶನ ರೆಡ್ಡಿಯವರು ಭಾಗವಹಿಸುತ್ತಿದ್ದಾರೆ ಎಂದು ರೈತ ಮುಖಂಡ ಪ್ರಕಾಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೈರಮಂಗಲ ವೃತ್ತದ ಪ್ರತಿಭಟನಾ ಸ್ಥಳದಲ್ಲಿ ನ್ಯಾಯಪೀಠವನ್ನು ಸ್ಥಾಪಿಸುತ್ತೇವೆ. ಭೂಮಾಲೀಕರ ಅಹವಾಲನ್ನು ನ್ಯಾಯಾಧೀಶರುಗಳು ಆಲಿಸಿ ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ ಎಂದರು.

ಜುಲೈ 11ರಂದು ಸಂಯುಕ್ತ ಹೋರಾಟ ಸಂಘ, ಪ್ರಾಂತ ರೈತರ ಸಂಘದ ಸೇರಿದಂತೆ ಸುಮಾರು 15 ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಶನಿವಾರ ಬೈರಮಂಗಲಕ್ಕೆ ಬರುತ್ತಿದ್ದು, ಭೂಸ್ವಾಧೀನದ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಪ್ರಕಾಶ್ ಅವರು ಮಾಹಿತಿ ಕೊಟ್ಟರು.

8ಕೆಆರ್ ಎಂಎನ್ 2.ಜೆಪಿಜಿ

ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರು ಶಾಸಕ ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.