ಕನ್ನಡಪ್ರಭ ವಾರ್ತೆ ಮೈಸೂರು

ಫಲಿತಾಂಶ ಆಧಾರಿತ ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಗಮನ ನೀಡುತ್ತದೆ ಎಂದು ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆ ನಿಟ್ಟೆಯ ಸಹಪ್ರಾಧ್ಯಾಪಕ ಡಾ. ಚಂದ್ರಜಿತ್ ಮೋಹನ್ ಅಭಿಪ್ರಾಯಪಟ್ಟರು.

ನಗರದ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಫಲಿತಾಂಶ ಆಧಾರಿತ ಶಿಕ್ಷಣ ಮತ್ತು ಶೈಕ್ಷಣಿಕ ಪರಿಕರಗಳನ್ನು ಕಾರ್ಯಗತಗೊಳಿಸುವುದು ಎಂಬ ವಿಷಯ ಕುರಿತು ಒಂದು ದಿನದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಫಲಿತಾಂಶ ಆಧಾರಿತ ಶಿಕ್ಷಣವು ವರ್ತಮಾನಕ್ಕೆ ಅನಿವಾರ್ಯವಾಗಿದ್ದು, ವೈಜ್ಞಾನಿಕವಾಗಿ ಕಾರ್ಯನಿರ್ವಹಿಸುತ್ತದೆ. ವಿದ್ಯಾರ್ಥಿಗಳ ಬೆಳವಣಿಗೆಯನ್ನು ಕೇವಲ ಅಂಕಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಬಾರದು ಎನ್ನುವ ಮೂಲಕ, ಈ ವಿಧಾನದ ಪ್ರಾಮುಖ್ಯತೆ ಕುರಿತು ಒತ್ತಿ ಹೇಳಿದರು.

ಡಾ.ಚಂದ್ರಜಿತ್ ಮೋಹನ್ ಅವರು ಅಧ್ಯಾಪಕರು ಕೃತಕ ಬುದ್ಧಿಮತ್ತೆ ಉಪಕರಣಗಳ ಕುರುಡು ಗುಲಾಮರಾಗಬಾರದೆಂದು ತಿಳಿಸಿದರು. ಇಂದಿನ ವಿದ್ಯಾರ್ಥಿಗಳ ಬುದ್ಧಿವಂತಿಕೆಗೆ ತಕ್ಕಂತೆ ಶಿಕ್ಷಕರು ಸಹ ಶೈಕ್ಷಣಿಕ ಪರಿಕರಗಳನ್ನು ಜಾಣ್ಮೆಯಿಂದ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.


ಪ್ರಾಂಶುಪಾಲ ಡಾ.ರೇಚಣ್ಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಪ್ರೊ. ಕಾರ್ತಿಕ್ ಕುದ್ರೋಳಿ ಮತ್ತು ಡಾ. ಶೀತಲ್ ಕುಮಾರ್, ಐ.ಕ್ಯೂ.ಎ.ಸಿ ಸಂಯೋಜಕ ಆರ್. ಮಲ್ಲೇಶ, ಸಂಯೋಜಕ ಜಿ. ಮಹದೇವಪ್ರಸಾದ್ ಇದ್ದರು. ಕಾಲೇಜಿನ ಅಧ್ಯಾಪಕ ವರ್ಗದವರು ಭಾಗವಹಿಸಿದ್ದರು.

ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ಎಸ್. ಚೈತ್ರ ಪ್ರಾರ್ಥಿಸಿದರು. ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಅಭಿಜಿತ್ ಸಿಂಗ್ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಿ. ಸೌಮ್ಯ ವಂದಿಸಿದರು. ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪಿ. ವಸುಮತಿ ನಿರೂಪಿಸಿದರು.

ಉದ್ಘಾಟನೆ ನಂತರ ಮೂರು ತಾಂತ್ರಿಕ ಗೋಷ್ಠಿಗಳು ನಡೆಯಿತು.

ಮೊದಲ ತಾಂತ್ರಿಕ ಗೋಷ್ಠಿ ನಿಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಕಾರ್ತಿಕ್ ಕುದ್ರೋಳಿ ಅವರು ’ಫಲಿತಾಂಶ ಆಧಾರಿತ ಶಿಕ್ಷಣ’ ವಿಷಯ ಕುರಿತು ಉಪನ್ಯಾಸ ನೀಡಿದರು. ಎರಡನೇ ತಾಂತ್ರಿಕ ಗೋಷ್ಠಿಯನ್ನು ನಿಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಸಹಪ್ರಾಧ್ಯಾಪಕ ಡಾ. ಚಂದ್ರಜಿತ್ ಮೋಹನ್ ಅವರು ’ಬೋಧನೆ ಮತ್ತು ಕಲಿಕೆಗಾಗಿ ಸಾಫ್ಟ್ವೇರ್ ಉಪಕರಣಗಳ ವರ್ಧನೆ’ ಎಂಬ ವಿಷಯದ ಕುರಿತು ಮಾತನಾಡಿದರು. ಕೊನೆಯ ತಾಂತ್ರಿಕ ಗೋಷ್ಠಿಯನ್ನು ನಿಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಶೀತಲ್ ಕುಮಾರ್ ಅವರು ಕಲಿಕಾ ನಿರ್ವಹಣಾ ವ್ಯವಸ್ಥೆ (ಐಒ): ಮೂಡಲ್ ಸಾಫ್ಟ್‌ವೇರ್ ಎಂಬ ವಿಷಯದ ಕುರಿತು ಮಂಡಿಸಿದರು.

ತಾಂತ್ರಿಕ ಗೋಷ್ಠಿಗಳ ನಂತರ ಪ್ರಾತ್ಯಕ್ಷಿಕೆ ಮತ್ತು ಸಂವಾದ ನಡೆಯಿತು.