ಬಿಡದಿ ಪುರಸಭೆ ಆಡಳಿತದಲ್ಲಿ ಹೊರಗಿನವರ ಹಸ್ತಕ್ಷೇಪ

| Published : Nov 16 2025, 01:15 AM IST

ಸಾರಾಂಶ

ಪಟ್ಟಣದ ಸ್ವಚ್ಛತಾ ಕಾರ್ಯದಲ್ಲಿ ಕೆಲಸ ನಿರ್ವಹಿಸುವವರಿಗೆ ಸಕಾಲದಲ್ಲಿ ವೇತನ ಪಾವತಿ ಮಾಡಬೇಕು. ಆದರೆ, ಅವರಿಗೆ ವೇತನ ಕೊಡದೆ ಪುರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ ಬಿಡದಿ ಪುರಸಭೆಯಲ್ಲಿ ಅಧ್ಯಕ್ಷರು ನೆಪಮಾತ್ರಕ್ಕೆ ಎನ್ನುವಂತಾಗಿದ್ದು, ಹೊರಗಿನ ಶಕ್ತಿಗಳು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಇದರಿಂದಾಗಿ ಹೊರಗುತ್ತಿಗೆ ಪೌರಕಾರ್ಮಿಕರ ವೇತನ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಿಲ್ ಪಾವತಿ ಆಗುತ್ತಿಲ್ಲ ಎಂದು ವಿಪಕ್ಷ ನಾಯಕ ಸಿ. ಉಮೇಶ್ ಕಿಡಿಕಾರಿದರು.ಪುರಸಭೆ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಡದಿ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ‌ ಕಾರ್ಯ ನಿರ್ವಹಿಸುತ್ತಿರುವ 29 ಪೌರ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ನೀಡಿಲ್ಲದ ಪರಿಣಾಮ‌ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.ಪಟ್ಟಣದ ಸ್ವಚ್ಛತಾ ಕಾರ್ಯದಲ್ಲಿ ಕೆಲಸ ನಿರ್ವಹಿಸುವವರಿಗೆ ಸಕಾಲದಲ್ಲಿ ವೇತನ ಪಾವತಿ ಮಾಡಬೇಕು. ಆದರೆ, ಅವರಿಗೆ ವೇತನ ಕೊಡದೆ ಪುರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಸೆಪ್ಟಂಬರ್ ತಿಂಗಳಲ್ಲಿ 3.72.987 ರು. ಹಾಗೂ ಅಕ್ಟೋಬರ್ ತಿಂಗಳ 3,37.900 ರು. ವೇತನ ಬಾಕಿ ಉಳಿಸಿಕೊಂಡಿದ್ದಾರೆ ಎಂದು ದೂರಿದರು.ಪುರಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆ ಕಾಣುತ್ತಿದೆ. ಅಧ್ಯಕ್ಷರಿಗೆ ಆಡಳಿತದ ಅನುಭವ ಇಲ್ಲದಿರುವ ಕಾರಣದಿಂದಲೇ ಹೊರಗಿನ ವ್ಯಕ್ತಿಗಳು ಆಡಳಿದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸರ್ಕಾರಿ ದಾಖಲೆಗಳು ಸೋರಿಕೆಯಾಗುತ್ತಿವೆ ಎಂದು ಆರೋಪಿಸಿದರು.ಪುರಸಭಾ ಜೆಡಿಎಸ್ ಸದಸ್ಯರು ಸರ್ಕಾರಿ‌ ಜಾಗ ಒತ್ತುವರಿ ಮಾಡಿಕೊಂಡು ನಿವೇಶನ ಮಾಡಿ ಮಾರಾಟ ಮಾಡಿದ್ದಾರೆ. ಕೆರೆಯನ್ನೂ ಒತ್ತುವರಿ ಮಾಡಿರುವ ದಾಖಲೆ‌ಗಳು ನಮ್ಮ‌ ಬಳಿ ಇವೆ. ಕಳೆದ ಆರು ತಿಂಗಳಿಂದ ಪುರಸಭೆ ಕೌನ್ಸಿಲ್ ಸಭೆ ಕರೆದಿಲ್ಲ. ಇವೆಲ್ಲವನ್ನು ಗಮನಿಸಿದರೆ ಜೆಡಿಎಸ್ ನವರು ಮಾಡಿರುವ ಹಗರಣ ಬಯಲಿಗೆ ಬರುತ್ತದೆ ಎಂಬ ಭಯ ಅವರನ್ನು ಕಾಡುತ್ತಿರಬೇಕು. ಇದು ಜೆಡಿಎಸ್‌ನವರ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಉಮೇಶ್ ಟೀಕಿಸಿದರು.

ಸುದ್ದಿಗೋಷ್ಟಿಯಲ್ಲಿ ಪುರಸಭೆ ಸದಸ್ಯರಾದ ಹೊಂಬಯ್ಯ, ಶ್ರೀನಿವಾಸ್ ಇದ್ದರು.---15ಕೆಆರ್ ಎಂಎನ್ 2.ಜೆಪಿಜಿಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.