ಯಗಚಿ ನದಿ ದಂಡೆಯ ಅಯ್ಯಪ್ಪನ ದೇಗುಲದಲ್ಲಿ ಪಡಿಪೂಜೆ

| Published : Jan 08 2025, 12:15 AM IST

ಸಾರಾಂಶ

ಯಗಚಿ ನದಿಯ ದಡದ ಮೇಲಿರುವ ಹರಿಹರ ಸುಪುತ್ರ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಏಳನೇ ವರ್ಷರ ವಾರ್ಷಿಕೋತ್ಸವ ಮತ್ತು ಪಡಿಪೂಜೆ ನಡೆಸಲಾಯಿತು. ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ನಿಷ್ಠೆ ಮತ್ತು ನಿರ್ಮಲಭಕ್ತಿ ಇದ್ದರೆ ಮಾತ್ರ ಅಯ್ಯಪ್ಪನ ಪೂಜೆಯಲ್ಲಿ ಗರುಡ ದರ್ಶನವಾಗುತ್ತದೆ. ಅಯ್ಯಪ್ಪಸ್ವಾಮಿ ಮಾಲೆ ಹಾಕಿದ ಬಳಿಕ ನಮ್ಮಲ್ಲಿ ದುಶ್ಚಟಗಳನ್ನು ತೊರೆದು ಆಸೆ ಅಮಿಷಗಳಿಂದ ಹೊರಬಂದರೆ ನಿಮ್ಮ ಯಾತ್ರೆ ಸಂಪನ್ನವಾಗುತ್ತದೆ ಎಂದು ಡಾ. ವಿದ್ಯಾವಾಚಸ್ವತಿ ವಿಶ್ವ ಸಂತೋಷ ಭಾರತಿ ಶ್ರೀಪಾದರು ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಯಗಚಿ ನದಿಯ ದಡದ ಮೇಲಿರುವ ಹರಿಹರ ಸುಪುತ್ರ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಏಳನೇ ವರ್ಷರ ವಾರ್ಷಿಕೋತ್ಸವ ಮತ್ತು ಪಡಿಪೂಜೆ ನಡೆಸಲಾಯಿತು.

ಶ್ರೀ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೂಡ ೭ನೇ ವರ್ಷದ ವಾರ್ಷಿಕ ಪೂಜೆ, ಪಂಚಾಮೃತ ಅಭಿಷೇಕ, ಲೋಕಕಲ್ಯಾಣಾರ್ಥ ನವಗ್ರಹ ಮತ್ತು ಗಣಪತಿ ಹೋಮವನ್ನು ನಡೆಸಿ ಮಹಾಮಂಗಳಾರತಿಯೊಂದಿಗೆ ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ನಡೆಸಲಾಯಿತು. ಬಳಿಕ ಶ್ರೀ ಅಯ್ಯಪ್ಪಸ್ವಾಮಿಯನ್ನು ಪಟ್ಟಣದ ಪ್ರಮುಖಬೀದಿಯಲ್ಲಿ ವಿವಿಧ ಜನಪದ ಕಲಾತಂಡದೊಂದಿಗೆ ಭವ್ಯ ಮೆರವಣಿಗೆ ನಡೆಸಿದರು. ಸಂಜೆ ದೇಗುಲದಲ್ಲಿ ನಡೆಯುವ ಪಡಿಪೂಜೆಗೆ ೧೮ ಮೆಟ್ಟಿಲುಗಳನ್ನು ವಿಶೇಷವಾಗಿ ಅಲಂಕರಿಸಿ, ವಿವಿಧ ನೈವೇದ್ಯ ಮಾಡುವ ಮೂಲಕ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು, ಬಂದ ಭಕ್ತರು ಧನ್ಯರಾದರು.

ಅಯ್ಯಪ್ಪಸ್ವಾಮಿ ಪೀಠದ ಡಾ. ವಿದ್ಯಾವಾಚಸ್ವತಿ ವಿಶ್ವ ಸಂತೋಷ ಭಾರತಿ ಶ್ರೀಪಾದರು ಮಾತನಾಡಿ, ಇತ್ತೀಚಿನ ದಿನದಲ್ಲಿ ಬೇರೆ ಧರ್ಮಕ್ಕಿಂತ ಸ್ವಧರ್ಮಿಯರೇ ನಮ್ಮನ್ನು ಟೀಕೆ, ಟಿಪ್ಪಣಿ ಮಾಡುತ್ತಾ ನಮಗೆ ಕಳಂಕ ಹಚ್ಚುತ್ತಾರೆ. ಅದಕ್ಕೆ ಯಾರೂ ಕೂಡ ಮನ್ನಣೆ ನೀಡಬಾರದು, ಹೊಗಳುವರು ಮತ್ತು ತೆಗಳುವರ ಸಮಾಜದಲ್ಲಿ ಇರುತ್ತಾರೆ ಅಂದ ಮಾತ್ರಕ್ಕೆ ನಿಮ್ಮ ಕಾರ್ಯವನ್ನು ಎಂದಿಗೂ ಬಿಡಬಾರದು. ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ನಿಷ್ಠೆ ಮತ್ತು ನಿರ್ಮಲಭಕ್ತಿ ಇದ್ದರೆ ಮಾತ್ರ ಅಯ್ಯಪ್ಪನ ಪೂಜೆಯಲ್ಲಿ ಗರುಡ ದರ್ಶನವಾಗುತ್ತದೆ. ಅಯ್ಯಪ್ಪಸ್ವಾಮಿ ಮಾಲೆ ಹಾಕಿದ ಬಳಿಕ ನಮ್ಮಲ್ಲಿ ದುಶ್ಚಟಗಳನ್ನು ತೊರೆದು ಆಸೆ ಅಮಿಷಗಳಿಂದ ಹೊರಬಂದರೆ ನಿಮ್ಮ ಯಾತ್ರೆ ಸಂಪನ್ನವಾಗುತ್ತದೆ. ಅಯ್ಯಪ್ಪಸ್ವಾಮಿಯನ್ನು ಭಕ್ತಿಯಿಂದ ಆರಾಧಿಸಿದರೆ ಮಾತ್ರ ಒಲುಮೆ ಪಡೆಯಲು ಸಾಧ್ಯವಾಗುತ್ತದೆ. ಇಂದಿನ ಪಡಿಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯ ನಡೆದಿದ್ದು ಸಂತೋಷವಾಗಿದೆ ಎಂದರು.

ಈ ಸಂದರ್ಭದಲ್ಲಿ ಅಯ್ಯಪ್ಪಸ್ವಾಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಯಮಸಂಧಿ ಪಾಪಣ್ಣ, ಮಂಜುನಾಥ್, ಬಿ.ಎಂ.ಸಂತೋಷ್, ಮೋಹನ್ ಕುಮಾರ್, ದೇವಿಸ್ವಾಮಿ, ದಯಾನಂದ, ಅರ್ಚಕರಾದ ಪ್ರಕಾಶ್, ಸೋಮಶೇಖರ್, ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.