ಪತ್ರಕರ್ತನ ಮೇಲೆ ಹಲ್ಲೆ: 4 ಆರೋಪಿಗಳ ಬಂಧನ

| Published : Jan 08 2025, 12:15 AM IST

ಸಾರಾಂಶ

ತನಿಖಾ ಸುದ್ದಿ ವಿಚಾರವೊಂದಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಸ್ಥಳೀಯ ಪತ್ರಿಕೆಯೊಂದರ ಸಂಪಾದಕರೊಬ್ಬರನ್ನು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪಟ್ಟಣದಲ್ಲಿ ನಡೆದಿದ್ದು ಈ ಸಂಬಂಧ ಮೂವರು ಮಹಿಳೆಯರು ಸೇರಿ ಒಟ್ಟು 4 ಜನರನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ತನಿಖಾ ಸುದ್ದಿ ವಿಚಾರವೊಂದಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಸ್ಥಳೀಯ ಪತ್ರಿಕೆಯೊಂದರ ಸಂಪಾದಕರೊಬ್ಬರನ್ನು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪಟ್ಟಣದಲ್ಲಿ ನಡೆದಿದ್ದು ಈ ಸಂಬಂಧ ಮೂವರು ಮಹಿಳೆಯರು ಸೇರಿ ಒಟ್ಟು 4 ಜನರನ್ನು ಬಂಧಿಸಲಾಗಿದೆ.

ಕೆಲ ದಿನಗಳ ಹಿಂದೆ ತನಿಖಾ ವರದಿ ಪ್ರಕಟಿಸಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ತಾಲೂಕಿನ ಅಪ್ಪಾಜಿಹಳ್ಳಿ ನಾರಾಯಣರೆಡ್ಡಿ ಹಾಗೂ ಪತ್ನಿ ಹಾಗೂ ಇಬ್ಬರು ಮಹಿಳೆಯರು ಜ.6ರಂದು ಸಂಜೆ 5ಗಂಟೆ ಸಮಯದಲ್ಲಿ ಪಟ್ಟಣದ ಟೋಲ್‌ಗೇಟ್‌ ಬಳಿ ನಿಂತಿದ್ದ ವೇಳೆ ಪತ್ರಕರ್ತ ರಾಮಾಂಜಿನಪ್ಪ ಮೇಲೆ ಏಕಾಏಕಿ ದಾಳಿ ನಡೆಸಿದ್ದರು. ಬಟ್ಟೆ ಕಳಚುವ ಹಾಗೆ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಘಟನೆ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಘಟನೆ ಖಂಡಿಸಿ ಆರೋಪಿಗಳ ವಿರುದ್ಧ ಸಾರ್ವಜನಿಕ ವಲಯಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಘಟನೆ ಬೆನ್ನಲ್ಲೆ ಎಚ್ಚತ್ತ ಪೊಲೀಸ್‌ ಇಲಾಖೆ ಆರೋಪಿಗಳಾದ ನಾರಾಯಣರೆಡ್ಡಿ, ರೂಪಾ, ಲಕ್ಷ್ಮೀದೇವಿ ಹಾಗೂ ಆದಿಲಕ್ಷ್ಮೀ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತರ ವಿರುದ್ಧ ವಿವಿಧ ಕಾನೂನುಗಳ ಅನ್ವಯ ಪ್ರಕರಣ ದಾಖಲಾಗಿದೆ.

ಘಟನೆ ಖಂಡಿಸಿ ಪ್ರತಿಭಟನೆ

ಘಟನೆ ಕುರಿತು ಸಾರ್ವಜನಿಕರಿಗೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಮಾಹಿತಿ ತಿಳಿಯುತ್ತಿದ್ದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್‌ ಡಿ.ಎನ್.ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಮುಖಂಡರು, ರಾಮಾಂಜಿನಪ್ಪ ಅವರ ಮೇಲೆ ನಡೆಸಿದ ಹಲ್ಲೆಯನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದರು. ಪಟ್ಟಣದ ಚಳ್ಳಕರೆ ರಸ್ತೆ ಮಾರ್ಗದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ಅಂಬೇಡ್ಕರ್‌ ಪ್ರತಿಮೆಗೆ ಮಾರ್ಲಾಪಣೆ ಸಲ್ಲಿಸಿದ ನಂತರ ಎಸ್‌ಎಸ್‌ಕೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಮೊಳಗಿಸಲಾಯಿತು. ಇದೇ ವೇಳೆ ಚಳ್ಳಕರೆ ರಸ್ತೆ ತಡೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಜಿಲ್ಲಾ ಕಾನಿಪ ಸಂಘದ ಗ್ರಾಮೀಣ ಕಾರ್ಯದರ್ಶಿ ಎಸ್‌.ಎನ್‌.ಪ್ರಸನ್ನಮೂರ್ತಿ ಈ ಘಟನೆ ನಿಜಕ್ಕೂ ಅಘಾತ ತಂದಿದೆ. ಪತ್ರಕರ್ತರ ಮೇಲೆ ಈ ರೀತಿಯ ಹಲ್ಲೆ ನಡೆಸಿದ್ದು ಖಂಡನೀಯ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋರಸ್‌ ಮಾವು ಹನುಮಂತರಾಯಪ್ಪ ಮಾತನಾಡಿ ರಾಮಾಂಜಪ್ಪನ ಮೇಲೆ ನಡೆಸಿದ ಹಲ್ಲೆ ಪ್ರಜಾಪ್ರಭುತ್ವ ತಲೆ ತಗ್ಗುವಂತಹ ಘಚನೆ. ನಾವು ಭಾರತದಲ್ಲಿದ್ದೇವೋ ಅಥವಾ ಇತರೆ ದೇಶದಲ್ಲಿದ್ದೇವೋ ಎಂಬ ಸಂಶಯ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಕರ್ತರಾದ ಜಯಸಿಂಹ, ಜೆ.ನಾಗೇಂದ್ರ, ವಡ್ಡೆ ಶ್ರೀನಿವಾಸ್‌, ಕಿರ್ಲಾಲಹಳ್ಳಿ ನವೀನ್, ಇರ್ಮಾನ್‌ ಉಲ್ಲಾ, ದಲಿತ ಸಂಘಟನೆಯ ಕನ್ನಮೇಡಿ ಕೃಷ್ಣಮೂರ್ತಿ,ಶ್ರೀರಾಮಸೇನೆಯ ರಾಮಾಂಜಿನಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹನುಮಂತರಾಯಪ್ಪ, ರಾಮಾಂಜಿನಪ್ಪ, ಕೆ.ರಾಮಪುರ ನಾಗೇಶ್‌, ನಾಗೇಂದ್ರ, ಚಂದ್ರಪ್ಪ, ರಾಮಾಂಜಿನೇಯಲು, ನರಸಿಂಹಲು, ಮಲ್ಲಿಕಾರ್ಜುನ, ತಿಮ್ಮರಾಜು, ಮಾರುತಿ ಮುರಳಿ, ಅನಿಲ್‌ಯಾದವ್‌ ಬ್ರಹ್ಮ, ವೈ.ಎನ್‌.ಹೊಸಕೋಟೆ ರಾಮಚಂದ್ರ, ಸುಧೀರ್‌, ಧನಂಜಯ, ಶಾಂತಿ ನಗರದ ಅನಿಲ್‌ ಕುಮಾರ್‌, ಕುಮಾರ್‌, ಸಿ.ಕೆ.ಪುರ ರಾಮು, ಪಾವಗಡ ನಿರಂಜನ್‌, ಶಿವನಂದ್‌ ಕೊಂಡಪ್ಪ, ದೇವರಬೆಟ್ಟ ನಾಗರಾಜ್‌ ಇತರರಿದ್ದರು.

ಆರೋಪಿತರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ.ಮರಿಯಪ್ಪ,ಹಾಗೂ ಡಿ.ವೈ.ಎಸ್.ಪಿ ಮಧುಗಿರಿ(ಪ್ರಭಾರ) ಅಬ್ದುಲ್ ಖಾದರ್ ಇವರುಗಳ ಮಾರ್ಗದರ್ಶನದಲ್ಲಿ ಪಾವಗಡ ವೃತ್ತ ಪೊಲೀಸ್ ನಿರೀಕ್ಷಕ ಎಂ.ಆರ್‌.ಸುರೇಶ್‌ ನೇತೃತ್ವದಲ್ಲಿ ಪ್ರಕರಣ ದಾಖಲಿಸಿದ್ದು, ಪಿಎಸ್‌ಐ ಗುರುನಾಥ್ ಮತ್ತು ಸಿಬ್ಬಂದಿಗೆ ಪ್ರಶಂಸೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ. ಘಟನೆ ನಡೆದ ಮರುದಿನವೇ ಘಟನೆ ಸಂಬಂಧ ಆರೋಪಿಗಳ ವಿರುದ್ಧ ಕ್ರಮವಹಿಸಿ ಬಂಧಿಸಿ ಪ್ರಕರಣ ದಾಖಲಿಸಿದ್ದಕ್ಕೆ ಸಾರ್ವಜನಿಕ ವಲಯಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.