ಶಿವಾನಂದ ಗೊಂಬಿ

ಹುಬ್ಬಳ್ಳಿ:

ಬಿ.ಎಸ್‌.ಯಡಿಯೂರಪ್ಪ, ಅನಂತಕುಮಾರ ಸೈಕಲ್‌ ಮೇಲೆ ಹಳ್ಳಿ ಸುತ್ತಿ ಭಾರತೀಯ ಜನತಾ ಪಕ್ಷ ಸಂಘಟಿಸುತ್ತಿದ್ದಾಗ ಅವರಿಗೆ ನೆರಳಾಗಿ ಕೆಲಸ ಮಾಡಿದವರು ಲಿಂಗರಾಜ ಪಾಟೀಲ್‌. ಅವರ ಈ ಪಕ್ಷ ನಿಷ್ಟೆ, ನಿರಂತರ ಹೋರಾಟಗಾರಕ್ಕೆ ಇಂದು ಮೇಲ್ಮನೆ ಗೌರವ ತಾನಾಗಿಯೇ ಅರಸಿ ಬಂದಿದೆ.ವಿಧಾನಸಭೆ, ವಿಧಾನಪರಿಷತ್‌ ಚುನಾವಣೆಗಳು ಎದುರಾದಾಗಲೆಲ್ಲ ಒಂದಿಲ್ಲಾ ಒಂದುಕಡೆ ಲಿಂಗರಾಜ ಪಾಟೀಲ್‌ ಹೆಸರು ಕೇಳಿಬರುತ್ತಲೇ ಇದ್ದು. ಕೊನೆಯ ಘಳಿಗೆಯಲ್ಲಿ ಅದು ಯಾವ್ಯಾವುದೋ ಕಾರಣಕ್ಕೆ ಇವರ ಹೆಸರು ಕೈ ಬಿಡಲಾಗುತ್ತಿತ್ತು. ಹೀಗೆ ಹತ್ತು-ಹಲವು ಬಾರಿ ನಡೆಯುತ್ತ ಬಂದಿತ್ತು. ಆಗ ಅವರು "ಮುಂದೆ ಹೈಕಮಾಂಡ್‌ ಕಣ್ಣು ತೆರೆಉತ್ತೆ ಬಿಡು: ಎಂದು ತಮಗೆ ತಾವೇ ಸಮಾಧಾನ ಹೇಳಿಕೊಂಡು ಪಕ್ಷದ ಅಧಿಕೃತ ಅಭ್ಯರ್ಥಿ ಗೆಲುವಿಗೆ ಟೊಂಕ ಕಟ್ಟಿ ನಿಲ್ಲುತ್ತಿದ್ದರು.

ಇತ್ತೀಚೆಗೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ಪರಿಷತ್‌ಗೆ ನಡೆಯಲಿರುವ ಚುನಾವಣೆಯ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಎಂದಿನಂತೆ ಬಿಜೆಪಿ ಟಿಕೆಟ್‌ ಕೈ ತಪ್ಪಿತು. ಅದೇಕೊ ಮೊದಲ ಬಾರಿಗೆ ಲಿಂಗರಾಜ ಪಾಟೀಲ ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದರು. ಇನ್ನಿಲ್ಲದಂತೆ ದುಃಖಿತರಾಗಿದ್ದರು. ಆಗ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಮನೆಯ ವರೆಗೆ ಬಂದು ಸಾಂತ್ವನ ಹೇಳಿದ್ದರು. ಇದೀಗ ವಿಧಾನಸಭೆಯಿಂದ ಪರಿಷತ್‌ಗೆ ನಡೆಯುವ ಚುನಾವಣೆಗೆ ಇವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸುವ ಮೂಲಕ ಕಣ್ಣೀರಿಗೆ ಬೆಲೆ ನಿಡಿದೆ.

ಹೋರಾಟಗಾರ ಲಿಂಪಾ:


1989ರಿಂದಲೇ ರಾಮ ಜನ್ಮಭೂಮಿ ರಥಯಾತ್ರೆಯೊಂದಿಗೆ ಪಾಲ್ಗೊಳ್ಳುವ ಮೂಲಕ ಬಿಜೆಪಿಗೆ ಎಂಟ್ರಿ ಕೊಟ್ಟವರು ಪಾಟೀಲ. ಈದ್ಗಾ ಮೈದಾನ ರಾಷ್ಟ್ರಧ್ವಜ ಹಾರಾಟದ ಹೋರಾಟ ಸೇರಿದಂತೆ ಹಲವು ಹೋರಾಟಗಳಲ್ಲಿ ಪಾಲ್ಗೊಂಡವರು. ಕೇಂದ್ರ ಮಾಜಿ ಸಚಿವ ಅನಂತಕುಮಾರ ಹೆಗಡೆ ಜೊತೆಗೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ತಿರಂಗಾ ಹಾರಿಸಿದ್ದು ಇದೇ ಲಿಂಗರಾಜ ಪಾಟೀಲ್‌ ಎನ್ನುವುದು ಗಮನೀಯ.

ಜಿಲ್ಲಾ ಯುವಮೋರ್ಚಾ ಅಧ್ಯಕ್ಷ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಗ್ರಾಮಾಂತರ, ಮಹಾನಗರ ಜಿಲ್ಲಾಧ್ಯಕ್ಷ, ರಾಜ್ಯ ಕಾರ್ಯದರ್ಶಿ, ಧಾರವಾಡ ವಿಭಾಗದ ಪ್ರಭಾರಿ ಸೇರಿದಂತೆ ಹಲವು ಹುದ್ದೆಗಳ ಮೂಲಕ ಪಕ್ಷವನ್ನು ಕಟ್ಟುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದರು. ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷರಾಗಿ ಲಿಂಪಾ ಸಮರ್ಥವಾಗಿ ನಿಭಾಯಿಸುವ ಮೂಲಕ ಸೈ ಎನಿಸಿಕೊಂಡವರು. ಸದ್ಯ ಬಿಜೆಪಿ ಶಿಸ್ತು ಸಮಿತಿ ರಾಜ್ಯಾಧ್ಯಕ್ಷರಾಗಿದ್ದಾರೆ.

ಪಕ್ಷ ನಿಷ್ಟ ಲಿಂಪಾ:

ಲಿಂಗರಾಜ ಪಾಟೀಲ್‌ ಅವರ ಪಕ್ಷ ನಿಷ್ಟೆ ನಿಜಕ್ಕೂ ಪ್ರಶ್ನಾತೀತ. ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಆಡ್ವಾನಿ ಅವರಿಂದ ಹಿಡಿದು ಇತ್ತೀಚಿನ ಬಿ.ವೈ.ರಾಘವೇಂದ್ರ ವರೆಗೆ ಪಕ್ಷದ ಸಾರಥಿ ಆದವರಿಗೆ ನಿಷ್ಟೆ ತೋರುತ್ತ ಬಂದಿದ್ದಾರೆ. ತಮಗಿಂತ ಕಿರಿಯರು ಪಕ್ಷದಲ್ಲಿನ ಉನ್ನತ ಹುದ್ದೆಗೆ ಏರಿದಾಗ ಮತ್ತು ಲೋಕಸಭೆ, ವಿಧಾನಸಭೆ, ವಿಧಾನಪರಿಷತ್‌ ಪ್ರವೇಶಿಸಿದಾಗ, ಇಲ್ಲವೇ ಮಂತ್ರಿಯಾದಾಗಲೂ ಸ್ಥಿತಪ್ರಜ್ಞನಂತೆ ಪಕ್ಷದ ಕೆಲಸ ಮಾಡಿದವರು ಲಿಂಗರಾಜ ಪಾಟೀಲ್‌. ಕೊಟ್ಟ ಕೆಲಸವನ್ನು ಅಷ್ಟೇ ನಿಷ್ಟೆಯಿಂದ ಮಾಡಿ ಪಕ್ಷಕ್ಕೆ ಶಕ್ತಿ ತುಂಬುತ್ತ ಆಧಾರ ಸ್ಥಂಬವಾದವರು. ಈ ನಿಷ್ಟೆಯೆ ಇವರನ್ನು ಮೇಲ್ಮನೆಯ ಮೆಟ್ಟಿಲು ಏರಿಸುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.ಎಬಿವಿಪಿ ಕಾರ್ಯಕರ್ತನಿಗೆ ಒಲಿದ ರಾಜ್ಯಸಭೆ ಟಿಕೆಟ್‌!

ರಾಜ್ಯಸಭೆಯ ಅಭ್ಯರ್ಥಿ ಎಂ. ನಾಗರಾಜ ಕೂಡ ಹುಬ್ಬಳ್ಳಿಯವರು. ಮೂಲತಃ ಎಂಜಿನಿಯರ್‌ ಪ್ರಾಧ್ಯಾಪಕ ಆಗಿದ್ದ ಎಂ. ನಾಗರಾಜ. ವಿದ್ಯಾರ್ಥಿ ದೆಸೆಯಿಂದಲೇ ಎಬಿವಿಪಿ, ಆರ್‌ಎಸ್‌ಎಸ್‌ನೊಂದಿಗೆ ಗುರುತಿಸಿಕೊಂಡವರು. ರಾಜ್ಯ ಬಿಜೆಪಿ ಉಪಾಧ್ಯಕ್ಷ, ಕೆಪಿಎಸ್‌ಸಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇವರದು. ಸದ್ದಿಲ್ಲದೇ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುವ ನಾಗರಾಜ, ಪಕ್ಷ ಸಂಘಟನೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಬಿಜೆಪಿ ಕಾರ್ಯಾಲಯ ನಿರ್ಮಾಣದ ಸಮಿತಿಗೆ ಕರ್ನಾಟಕದ ಸಂಚಾಲಕರಾಗಿ ಕಾರ್ಯನಿರ್ವಹಿಸಿದವರು.

ದಿವಂಗತ ಅನಂತಕುಮಾರ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ನಾಗರಾಜ ಉತ್ತರ ಕರ್ನಾಟಕದಲ್ಲಿ ಎಬಿವಿಪಿ ದೊಡ್ಡ ಶಕ್ತಿಯಾಗಿ ಬೆಳೆಯುವಲ್ಲಿ ಅವಿರತ ಶ್ರಮ ವಹಿಸಿದವರು. ಬಿಜೆಪಿ ಅಂಗಳಕ್ಕೆ ಬಂದಾಗಲೂ ತೆರೆಮರೆಯಲ್ಲೇ ಕೆಲಸ ಮಾಡುತ್ತ ಪಕ್ಷದ ಸಂಘಟನೆಯಲ್ಲಿ ಬದುಕನ್ನು ಸವೆಸಿದವರು.