ಗದಗ: ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸೋಮವಾರ ಮಧ್ಯಾಹ್ನ ಮತ್ತು ಸಂಜೆ ವರುಣ ಅಬ್ಬರಿಸಿದ್ದಾನೆ. ಕೆಲವೆಡೆ ಧಾರಾಕಾರ ಮಳೆಯಾಗಿದ್ದರೆ, ಇನ್ನು ಕೆಲವೆಡೆ ಜಿಟಿ ಜಿಟಿ ಮಳೆ ಸುರಿದು ವಾತಾವರಣವನ್ನು ತಂಪಾಗಿಸಿದೆ.
ಈ ಮಳೆಯು ಕೃಷಿ ಚಟುವಟಿಕೆಗಳಿಗೆ ಹಾಗೂ ಬಿತ್ತನೆ ಮಾಡಿರುವ ಹೆಸರು ಬೆಳೆಗೆ ಅಮೃತ ಸಿಂಚನದಂತಾಗಿದೆ. ಗದಗ- ಬೆಟಗೇರಿ ಅವಳಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ರಭಸದ ಮಳೆಯಾಯಿತು. ಭಾರಿ ಮಳೆಯ ನಂತರವೂ ಸಂಜೆಯ ಉದ್ದಕ್ಕೂ ಜಿಟಿ ಜಿಟಿ ಮಳೆ ಮುಂದುವರಿಯಿತು.ಪ್ರಸಕ್ತ ಹಂಗಾಮಿನಲ್ಲಿ ಈಗಾಗಲೇ ಹೆಸರು ಬಿತ್ತನೆ ಮಾಡಿರುವ ರೈತರಿಗೆ ಈ ಮಳೆ ತೀವ್ರ ಸಂತಸ ತಂದಿದೆ. ಮೊಳಕೆಯೊಡೆಯುತ್ತಿರುವ ಹಾಗೂ ಆರಂಭಿಕ ಹಂತದಲ್ಲಿರುವ ಹೆಸರು ಬೆಳೆಗೆ ಮತ್ತು ಹೊಸದಾಗಿ ಬಿತ್ತನೆ ಕಾರ್ಯ ಕೈಗೊಳ್ಳಲು ಈ ಮಳೆ ವಿಶೇಷ ಅನುಕೂಲ ಮಾಡಿಕೊಟ್ಟಿದೆ.ಡಂಬಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಧಾರಾಕಾರ ಮಳೆಯಾಗಿದೆ. ತಾಲೂಕಿನ ಕಲಕೇರಿ, ವಿರುಪಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಜೋರಾಗಿ ಮಳೆ ಸುರಿದಿದೆ.ಲಕ್ಷ್ಮೇಶ್ವರ ತಾಲೂಕಿನಲ್ಲಿ ಸಂಜೆಯಾಗುತ್ತಿದ್ದಂತೆ ಜಿಟಿ ಜಿಟಿ ಮಳೆ ಆರಂಭವಾಗಿದ್ದು, ಭೂಮಿ ತಂಪಾಗಿದೆ. ಇತ್ತ ರೋಣ ತಾಲೂಕಿನಲ್ಲಿಯೂ ವರುಣನ ಆರ್ಭಟ ಜೋರಾಗಿದ್ದು, ಸೋಮವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಬಿಡದೆ ಭಾರಿ ಮಳೆ ಸುರಿದಿದೆ.
ರೈತರ ಮುಖದಲ್ಲಿ ಮಂದಹಾಸ: ರೋಹಿಣಿ ಮಳೆಯ ಮುನಿಸಿನಿಂದ ಕಂಗಾಲಾಗಿದ್ದ ಅನ್ನದಾತನಿಗೆ ಸುರಿದ ಮಳೆ ಹೊಸ ಭರವಸೆ ಮೂಡಿಸಿದೆ. ಕೃಷಿ ಚಟುವಟಿಕೆಗಳು ಮತ್ತೆ ಚುರುಕುಗೊಂಡಿದ್ದು, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರಿಗೆ ಈ ಮಳೆ ಅತ್ಯಂತ ಪೂರಕವಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.ಹಳ್ಳದಂತಾದ ನರಗುಂದದ ರಸ್ತೆ
ನರಗುಂದ: ಸೋಮವಾರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಬ್ಬರದ ಮಳೆಯಾಗಿದೆ. ಪಟ್ಟಣದಲ್ಲಿ ಸುಮಾರು 2 ಗಂಟೆ ಮಳೆ ಸುರಿದು ನೀರು ಚರಂಡಿ ತುಂಬಿ ರಸ್ತೆ ಮೇಲೆ ಹರಿಯಿತು. ಇದರಿಂದ ಪಟ್ಟಣದ ಹಲವು ರಸ್ತೆಗಳು ಹಳ್ಳದಂತಾಗಿದ್ದವು.
ನರಗುಂದ, ಭೈರನಹಟ್ಟಿ, ರಡ್ಡೇರ ನಾಗನೂರು, ಮುದ್ಗಣಕಿ ಸೇರಿದಂತೆ ಇನ್ನೂ ಹಲವಾರು ಗ್ರಾಮಗಳಲ್ಲಿ ವಿಪರೀತ ಮಳೆ ಸುರಿದಿದೆ.
