ಸೋಮರಡ್ಡಿ ಅಳವಂಡಿ
ಕೊಪ್ಪಳ: ಸರ್ಕಾರಿ ನೌಕರರ ಸಂಘದಲ್ಲಿ ಅನಭಿಷಿಕ್ತ ದೊರೆಯಂತೆ ಇದ್ದ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಅನೇಕ ವರ್ಷಗಳ ಸೇವೆ ಮಾಡಿರುವ ಶಿಕ್ಷಕ ಶಂಭುಲಿಂನಗೌಡ ಹಲಿಗೇರಿ ಈಗ ನಿವೃತ್ತಿಯಾಗಿದ್ದಾರೆ. ಅವರು ನಿವೃತ್ತಿಯಾಗುತ್ತಿದ್ದಂತೆ ಅನೇಕರು ಅವರನ್ನು ತಮ್ಮ ಪಕ್ಷಕ್ಕೆ ಕರೆತರಲು ತೆರೆಯ ಮರೆಯಲ್ಲಿ ಕಸರತ್ತು ನಡೆಸಿದ್ದಾರೆ.ನಿವೃತ್ತಿಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸೇರಿದ್ದ ಸಾವಿರಾರು ಜನರ ಸಮ್ಮುಖದಲ್ಲಿಯೇ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಬಹಿರಂಗ ಅಹ್ವಾನ ನೀಡಿದ್ದಾರೆ. ಹಾಗೆಯೇ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಅವರು ಸಹ ಖುದ್ದು ಅಹ್ವಾನ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ.
ಶಂಭುಲಿಂಗನಗೌಡ ಹಲಿಗೇರಿ ಅವರು ಯಾರ ಆಹ್ವಾನವನ್ನೂ ತಿರಸ್ಕಾರ ಮಾಡಿಲ್ಲ. ಈಗಲೇ ನಾನು ಏನನ್ನೂ ಹೇಳುವುದಿಲ್ಲ, ಎಲ್ಲವನ್ನು ಚರ್ಚಿಸಿ, ಶೀಘ್ರ ತನ್ನ ನಿಲುವು ಪ್ರಕಟಿಸುವುದಾಗಿ ವೇದಿಕೆಯಲ್ಲಿ ತಮ್ಮ ಭಾಷಣದಲ್ಲಿ ಹೇಳುವ ಮೂಲಕ ನಿವೃತ್ತಿಯ ಆನಂತರ ರಾಜಕೀಯ ಪ್ರವೇಶ ಮಾಡುವ ಸುಳಿವು ನೀಡಿದ್ದಾರೆ.ಶಂಭುಲಿಂಗನಗೌಡ ಹಲಿಗೇರಿ ಅವರು ತಮ್ಮ ವೃತ್ತಿ ಜೀವನದುದ್ದಕ್ಕೂ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿಯೇ ಸೇವೆ ಮಾಡಿದ್ದಾರೆ. ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಿಂದ ಹಿಡಿದು ಜಿಲ್ಲಾಧ್ಯಕ್ಷರಾಗಿ, ರಾಜ್ಯ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿದ್ದಾರೆ. ಹೀಗಾಗಿ, ಜಿಲ್ಲೆಯ ಸರ್ಕಾರಿ ನೌಕರರು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ವಲಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.
ಈಗ ನಿವೃತ್ತರಾದರೂ ತಮ್ಮ ಜತೆಯಲ್ಲಿ ದೊಡ್ಡ ಪಡೆಯನ್ನೇ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಮೂರು ಪಕ್ಷಗಳೂ ಒಳಗೊಳಗೆ ಪ್ರಯತ್ನಿಸುತ್ತಿವೆ.
ರಾಜಕೀಯ ಪ್ರವೇಶ ವಿಫಲ: 15 ವರ್ಷಗಳ ಹಿಂದೆಯೇ ಅವರು ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ, ಆಗ ಅವರನ್ನು ರಾಜಕೀಯ ಪ್ರವೇಶ ಮಾಡದಂತೆ ತಡೆಯಲಾಯಿತು. ಜಿಪಂ ಚುನಾವಣೆಯ ಮೂಲಕ ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ, ಆಗ ಸಂಸದರಾಗಿದ್ದ ಸಂಗಣ್ಣ ಕರಡಿ ಅವರ ಕೃಪೆಯಾಗಲಿಲ್ಲ. ಶಂಭುಲಿಂಗನಗೌಡ ತಮ್ಮ ಜತೆಯಲ್ಲಿಯೇ ಇದ್ದರೂ ಅವರನ್ನು ರಾಜಕೀಯಕ್ಕೆ ತರಲು ಮನಸ್ಸು ಮಾಡಲಿಲ್ಲ. ಹೀಗಾಗಿ ರಾಜಕೀಯ ಪ್ರವೇಶದಿಂದ ಶಂಭುಲಿಂಗನಗೌಡ ದೂರ ಉಳಿದರು.
ಈ ಮಧ್ಯೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಎಂದಾಗಲೂ ಶಂಭುಲಿಂಗನಗೌಡ ಹಲಿಗೇರಿ ಅವರ ಹೆಸರು ಮುಂಚೂಣಿಗೆ ಬಂದಿತ್ತು. ಅದು ಸಹ ಕೈಗೂಡಲಿಲ್ಲ. ಆದರೆ, ಈಗ ನಿವೃತ್ತಿಯಾಗಿರುವುದರಿಂದ ಶಂಭುಲಿಂಗನಗೌಡ ಹಲಿಗೇರಿ ಅವರ ಶಕ್ತಿಯನ್ನು ಬಳಕೆ ಮಾಡಿಕೊಳ್ಳಲು ರಾಜಕೀಯ ಪಕ್ಷಗಳು ಹವಣಿಸುತ್ತಿವೆ. ಆದರೆ, ಶಂಭುಲಿಂಗನಗೌಡ ಹಲಿಗೇರಿ ಅವರು ಯಾವ ಪಕ್ಷದತ್ತ ಮುಖ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.ಯಾವುದಾದರೊಂದು ರಾಜಕೀಯ ಪಕ್ಷ ಸೇರುವುದು ಪಕ್ಕಾ. ಆದರೆ, ಯಾವ ಪಕ್ಷ ಸೇರುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಸಿಗದ ಅವಕಾಶ: 15 ವರ್ಷಗಳ ಹಿಂದಿನ ಕತೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಶಂಭುಲಿಂಗನಗೌಡ ಹಲಿಗೇರಿ ಅವರು ರಾಜಕೀಯ ಪ್ರವೇಶ ಮಾಡಲು ನಿರ್ಧರಿಸಿಯಾಗಿತ್ತು. ಅದಕ್ಕಾಗಿ ಅವರು ತಮ್ಮ ಶಿಕ್ಷಕರ ಹುದ್ದೆಗೆ ರಾಜೀನಾಮೆ ನೀಡಿ, ಜಿಪಂ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲು ಮುಂದಾಗಿದ್ದರು. ಅದಕ್ಕಾಗಿ ಆಗಿದ್ದ ರಾಜಕೀಯ ನಾಯಕರೊಬ್ಬರ ನಿವಾಸಕ್ಕೆ ಹೋಗಿ ತಮ್ಮ ಅನಿಸಿಕ ವ್ಯಕ್ತಪಡಿಸಲು ಮುಂದಾದರು. ಆದರೆ ಅವರು ಇವರ ಮುಖ ನೋಡಿ ಮಾತನಾಡಲಿಲ್ಲ. ಇದರಿಂದ ಮನಸ್ಸಿಗೆ ನೋವುಂಟು ಮಾಡಿಕೊಂಡು ವಾಪಸಾದರು. ಅಂದು ಅವಕಾಶ ಸಿಕ್ಕಿದ್ದರೆ ಮುಂದೆ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೂ ಸ್ಪರ್ಧೆ ಮಾಡುವ ತಯಾರಿಯಲ್ಲಿದ್ದರು.