ಗದಗ: ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಜಿ.ಎಸ್. ಪಾಟೀಲ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಅಭಿಮಾನಿಗಳು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರ ವಿಶೇಷ ಪೂಜೆ ಹಾಗೂ ವಿಶಿಷ್ಟ ಧಾರ್ಮಿಕ ಆಚರಣೆಗಳ ಮೂಲಕ ಗಮನ ಸೆಳೆದರು.

ಯುವ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯುದ್ದಕ್ಕೂ ಉರುಳು ಸೇವೆ ಮಾಡಿದರು. ಮತ್ತೊಂದೆಡೆ, ವೀರೇಶ್ವರ ಪುಣ್ಯಾಶ್ರಮದ ಮಹಾದ್ವಾರದಿಂದ ನೂರಾರು ಮಹಿಳಾ ಕಾರ್ಯಕರ್ತೆಯರು ಭಕ್ತಿಯಿಂದ ದೀಡ್ ನಮಸ್ಕಾರ ಹಾಕಿ ಗಮನ ಸೆಳೆದರು.

ಹರಕೆ ಕಾರ್ಯಕ್ರಮದಲ್ಲಿ ರೋಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೋಣ, ನರೇಗಲ್ಲ, ಗಜೇಂದ್ರಗಡ, ಮುಂಡರಗಿ ಮಂಡಳಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಕ್ರಿಯ ಕಾರ್ಯಕರ್ತರು, ಹಿರಿಯ ಮುಖಂಡರಾದ ವೀರಣ್ಣ ಶೆಟ್ಟರ, ಶರಣಪ್ಪ ಬೆಟಗೇರಿ, ಡಿ.ಡಿ. ಮೋರನಾಳ, ಸಿದ್ದಣ್ಣ ಬಂಡಿ, ಪ್ರಭು ಮೇಟಿ, ಪರಶುರಾಮ ಅಳಗವಾಡಿ, ಗೋಣಿಬಸಪ್ಪ ಕೊರ್ಲಹಳ್ಳಿ, ಎಚ್.ಎಸ್. ಸೋಂಪುರ ಮತ್ತು ಜಿ.ಎಸ್. ಪಾಟೀಲರ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು.

ಪುಟ್ಟರಾಜರ ಗದ್ದುಗೆಗೆ ವಿಶೇಷ ಪೂಜೆ: ದೀಡ್ ನಮಸ್ಕಾರ ಮತ್ತು ಉರುಳು ಸೇವೆಯ ನಂತರ ವೀರೇಶ್ವರ ಪುಣ್ಯಾಶ್ರಮದ ಸಭಾಂಗಣದಲ್ಲಿ ಡಾ. ಪುಟ್ಟರಾಜ ಗವಾಯಿಗಳ ಪವಿತ್ರ ಗದ್ದುಗೆಗೆ ವಿಶೇಷ ಅಭಿಷೇಕ ಮತ್ತು ಮಹಾಪೂಜೆ ನೆರವೇರಿಸಲಾಯಿತು. ನಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗುವ ವರೆಗೂ ನಾವು ವಿಶ್ರಮಿಸುವುದಿಲ್ಲ, ಅವರ ಹಿರಿಯತನ ಹಾಗೂ ಅನುಭವಕ್ಕೆ ಹೈಕಮಾಂಡ್ ಸೂಕ್ತ ಗೌರವ ನೀಡಬೇಕು ಎಂದು ಭಕ್ತರು ಗದ್ದುಗೆಯ ಮುಂದೆ ಪ್ರಾರ್ಥಿಸಿ ಹರಕೆ ಕಟ್ಟಿಕೊಂಡರು.

ನಿಷ್ಠಾವಂತ ಕಾರ್ಯಕರ್ತ: ಜಿ.ಎಸ್. ಪಾಟೀಲರು ಕೇವಲ ರೋಣ ಕ್ಷೇತ್ರಕ್ಕೆ ಸೀಮಿತವಾದ ನಾಯಕರಲ್ಲ. ಅವರು ಇಡೀ ಜಿಲ್ಲೆಯ ಜನಸಾಮಾನ್ಯರ ಧ್ವನಿಯಾಗಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಸೌಮ್ಯ ಸ್ವಭಾವದ ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡಬೇಕು. ಹಲವಾರು ದಶಕಗಳಿಂದ ಅವರು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಪ್ಪು ಗಿರಡ್ಡಿ, ಸಂಗು ನವಲಗುಂದ, ಶರಣಗೌಡ ಪಾಟೀಲ ಸರ್ಜಾಪೂರ ಆಗ್ರಹಿಸಿದರು.